ಇದು ಸಮಾಧಾನಕರ ಸುದ್ದಿ..: ಈ ಬಾರಿ ವಾಡಿಕೆಗಿಂತ ಹೆಚ್ಚು ಮುಂಗಾರು ಮಳೆ ; ಹವಾಮಾನ ಇಲಾಖೆ ಮುನ್ಸೂಚನೆ

ನವದೆಹಲಿ: ದೇಶದಲ್ಲಿ ಈ ಬಾರಿ ಮುಂಗಾರು ಮಳೆ ಸಾಮಾನ್ಯಕ್ಕಿಂತ ಅಧಿಕ ಪ್ರಮಾಣದಲ್ಲಿ ಕಂಡುಬರುತ್ತದೆ ಎಂದು ಕೇಂದ್ರ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
2024ರಲ್ಲಿ ಮುಂಗಾರು ಸರಾಸರಿ 106 ಪ್ರತಿಶತದಷ್ಟು ( 87 ಸೆಂಟಿಮೀಟರ್‌ ) ಮಳೆ​ ಬರಲಿದೆ ಎಂದು ಹೇಳಿದೆ. ಎಲ್ ನಿನೋ ದುರ್ಬಲಗೊಳ್ಳುತ್ತಿದೆ. ಮಾನ್ಸೂನ್ ಪ್ರಾರಂಭವಾಗುವ ಜೂನ್‌ ವೇಳೆಗೆ ಇದು ತಟಸ್ಥವಾಗಲಿದೆ ಎಂದು ಐಎಂಡಿಯ ಡಿಜಿಎಂ ಮೃತ್ಯುಂಜಯ ಮಹಾಪಾತ್ರ ಹೇಳಿದ್ದಾರೆ.
“ಭಾರತವು ನಾಲ್ಕು ತಿಂಗಳ ಮಾನ್ಸೂನ್ ಋತುವಿನಲ್ಲಿ (ಜೂನ್ ನಿಂದ ಸೆಪ್ಟೆಂಬರ್) ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು ಕಾಣುವ ಸಾಧ್ಯತೆಯಿದೆ, ಜೊತೆಗೆ ದೀರ್ಘಾವಧಿಯ ಸರಾಸರಿ (87 ಸೆಂ.ಮೀ) 106 ಪ್ರತಿಶತದಷ್ಟು ಸಂಚಿತ ಮಳೆ ಬೀಳಬಹುದು ಎಂದು ಅಂದಾಜಿಸಲಾಗಿದೆ” ಎಂದು ಅವರು ಹೇಳಿದರು.
ಎಲ್ ನಿನೋ ದುರ್ಬಲಗೊಂಡ ನಂತರ ಮಾನ್ಸೂನ್ ಆರಂಭವಾಗುತ್ತದೆ. ಬಳಿಕ ಲಾ ನಿನಾ ಪ್ರಭಾವ ಬೀರಬಹುದು ಎಂದು ತಿಳಿಸಿದ್ದಾರೆ.

2023 ರಲ್ಲಿ,ಭಾರತವು “ಸರಾಸರಿಗಿಂತ ಕಡಿಮೆ” ಸಂಚಿತ ಮಳೆಯನ್ನು ಪಡೆಯಿತು, ಅಂದರೆ ಸರಾಸರಿ 820 ಮಿಮೀ ಮಳೆಯಾಗಿತ್ತು. ಸರಾಸರಿ 868.6 ಮಿಮೀಗೆ ಹೋಲಿಸಿದರೆ ಇದು ಕಡಿಮೆಯಾಗಿದೆ. ಎಲ್ ನಿನೋ ವರ್ಷದಲ್ಲಿ. ಭಾರತವು ಸತತವಾಗಿ ನಾಲ್ಕು ವರ್ಷಗಳ ಕಾಲ ಮಾನ್ಸೂನ್ ಋತುವಿನಲ್ಲಿ “ಸಾಮಾನ್ಯ” ಮತ್ತು “ಸಾಮಾನ್ಯಕ್ಕಿಂತ ಹೆಚ್ಚಿನ” ಮಳೆಯನ್ನು ದಾಖಲಿಸಿತ್ತು.
ಎಲ್ ನಿನೊ ಪರಿಸ್ಥಿತಿಗಳು ದುರ್ಬಲ ಮಾನ್ಸೂನ್ ಮಾರುತಗಳು ಮತ್ತು ಭಾರತದಲ್ಲಿನ ಶುಷ್ಕ ಪರಿಸ್ಥಿತಿಗಳೊಂದಿಗೆ ಸಂಬಂಧ ಹೊಂದಿದೆ. ಪ್ರಸ್ತುತ, ಸಮಭಾಜಕ ಪೆಸಿಫಿಕ್ ಪ್ರದೇಶದಲ್ಲಿ ಮಧ್ಯಮ ಎಲ್ ನಿನೊ ಪರಿಸ್ಥಿತಿಗಳು ಚಾಲ್ತಿಯಲ್ಲಿವೆ.
ಇತ್ತೀಚಿನ ಹವಾಮಾನ ಮುನ್ಸೂಚನೆಯಂತೆ ಮಾನ್ಸೂನ್ ಋತುವಿನ ದ್ವಿತೀಯಾರ್ಧದಲ್ಲಿ ಲಾ ನಿನಾ ಪರಿಸ್ಥಿತಿಗಳು ಅಭಿವೃದ್ಧಿಗೊಳ್ಳುವ ಸಾಧ್ಯತೆಯಿದೆ ಎಂದು IMD ಹೇಳಿಕೆಯಲ್ಲಿ ತಿಳಿಸಿದೆ. ಮೇ ಕೊನೆಯ ವಾರದಲ್ಲಿ ಮಾನ್ಸೂನ್ ಋತುವಿನ ನವೀಕರಿಸಿದ ಮಳೆಯ ಮುನ್ಸೂಚನೆಗಳನ್ನು ನೀಡುವುದಾಗಿ ಹವಾಮಾನ ಕಚೇರಿ ತಿಳಿಸಿದೆ.

ಪ್ರಮುಖ ಸುದ್ದಿ :-   ಏಪ್ರಿಲ್‌ ತಿಂಗಳಲ್ಲಿ ದಾಖಲೆಯ ಪ್ರಮಾಣದ ಜಿಎಸ್‌ಟಿ ಸಂಗ್ರಹ ; ಕರ್ನಾಟಕಕ್ಕೆ 2ನೇ ಸ್ಥಾನ

ನೈಋತ್ಯ ಮಾನ್ಸೂನ್ ಭಾರತದ ವಾರ್ಷಿಕ ಮಳೆಯ ಸುಮಾರು 70 ಪ್ರತಿಶತ ಭಾಗಕ್ಕೆ ನೀರನ್ನು ನೀಡುತ್ತದೆ, ಇದು ಕೃಷಿ ಕ್ಷೇತ್ರಕ್ಕೆ ನಿರ್ಣಾಯಕವಾಗಿದೆ. ದೇಶದ ಜಿಡಿಪಿಯ ಶೇ.14ರಷ್ಟನ್ನು ಕೃಷಿ ಕ್ಷೇತ್ರ ಹೊಂದಿದೆ.
ಈ ವರ್ಷದ ಮಾನ್ಸೂನ್ ಋತುವಿನ ಎರಡನೇ ಅವಧಿಯಲ್ಲಿ ಲಾ ನಿನಾ ಹವಾಮಾನ ಪರಿಸ್ಥಿತಿಗಳು ಅಭಿವೃದ್ಧಿಗೊಳ್ಳುತ್ತಿರುವುದು ಕಂಡುಬರುತ್ತದೆ. ಭಾರತದಲ್ಲಿ ಉತ್ತಮ ಮಾನ್ಸೂನ್‌ಗೆ ಸಂಬಂಧಿಸಿದ ಲಾ ನಿನಾ ಪರಿಸ್ಥಿತಿಗಳು ಆಗಸ್ಟ್, ಸೆಪ್ಟೆಂಬರ್ ವೇಳೆಗೆ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಮಹಾಪಾತ್ರಾ ವಿವರಿಸಿದ್ದಾರೆ.
1951 ರಿಂದ 2023 ರವರೆಗಿನ ದತ್ತಾಂಶ ನೋಡಿದರೆ ಭಾರತವು 9 ಸಂದರ್ಭಗಳಲ್ಲಿ ಲಾ ನಿನಾ ಪ್ರಭಾವಕ್ಕೆ ಒಳಗಾಗಿದೆ. ಈ ಎಲ್ಲ 9 ಸಂದರ್ಭಗಳಲ್ಲಿಯೂ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ಸುರಿದಿದೆ ಎಂದು ಅವರು ಹೇಳಿದ್ದಾರೆ.

ಹವಾಮಾನ ಕಚೇರಿಯ ಪ್ರಕಾರ, ವಾಯವ್ಯ, ಪೂರ್ವ ಮತ್ತು ಕೆಲವು ಪ್ರದೇಶಗಳನ್ನು ಹೊರತುಪಡಿಸಿ ದೇಶದ ಹೆಚ್ಚಿನ ಭಾಗಗಳಲ್ಲಿ ಕಾಲಕ್ಕೆ ತಕ್ಕಂತೆ ಮಳೆಯಾಗುವ ಸಾಧ್ಯತೆಯಿದೆ. ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಮುನ್ಸೂಚನೆ ಇದೆ.
ಈ ವರ್ಷ ಜೂನ್ 1 ರಿಂದ ಸೆಪ್ಟೆಂಬರ್ 30 ರವರೆಗೆ ಇಡೀ ದೇಶದ ಒಟ್ಟು ಮಳೆಯ ಸರಾಸರಿ 87 ಸೆಂ.ಮೀ ಆಗಿರುತ್ತದೆ ಎಂದು ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ ರವಿಚಂದ್ರನ್ ಹೇಳಿದ್ದಾರೆ.
ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ಸ್ಕೈಮೆಟ್ ಇತ್ತೀಚೆಗೆ ಜೂನ್ ಮತ್ತು ಸೆಪ್ಟೆಂಬರ್ 2024 ರ ನಡುವೆ ಭಾರತವು ‘ಸಾಮಾನ್ಯ’ ಮಾನ್ಸೂನ್ ಅನ್ನು ನಿರೀಕ್ಷಿಸಬಹುದು ಎಂದು ಹೇಳಿದೆ. ನಾಲ್ಕು ತಿಂಗಳ ಅವಧಿಗೆ ಮಾನ್ಸೂನ್ ಮಳೆಯು ದೀರ್ಘಾವಧಿಯ ಸರಾಸರಿ 868.6ಮಿ ಮೀ ಅಂದರೆ ಪ್ರತಿಶತ 102 ರಷ್ಟು ಎಂದು ನಿರೀಕ್ಷಿಸಲಾಗಿದೆ ಎಂದು ಸ್ಕೈಮೆಟ್ ಹೇಳಿದೆ.

ಪ್ರಮುಖ ಸುದ್ದಿ :-   127 ವರ್ಷಗಳಷ್ಟು ಹಳೆಯ ಗೋದ್ರೇಜ್ ಗ್ರುಪ್‌ ಇಬ್ಭಾಗ

5 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement