ನವದೆಹಲಿ: ಆಧುನಿಕ ವೈದ್ಯ ಪದ್ಧತಿಯನ್ನು ಅವಹೇಳನ ಮಾಡಿ ದಾರಿ ತಪ್ಪಿಸುವಂತಹ ಜಾಹೀರಾತು ಪ್ರಸಾರ ಮಾಡಿದ್ದಕ್ಕಾಗಿ ಪತಂಜಲಿ ಆಯುರ್ವೇದ ಪ್ರವರ್ತಕರಾದ ಬಾಬಾ ರಾಮದೇವ ಮತ್ತು ಆಚಾರ್ಯ ಬಾಲಕೃಷ್ಣ ಅವರು ಯಾಚಿಸಿರುವ ಕ್ಷಮೆಯ ನೈಜತೆ ಗ್ಗೆ ತಿಳಿಯಲು ಸುಪ್ರೀಂ ಕೋರ್ಟ್ ಮಂಗಳವಾರ ಈ ಇಬ್ಬರೊಂದಿಗೆ ವೈಯಕ್ತಿಕ ಸಂವಹನ ನಡೆಸಿತು.
ಈ ಹಂತದಲ್ಲಿ ಅವರಿಬ್ಬರೂ ಕ್ಷಮೆ ಯಾಚಿಸಿದರಾದರೂ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ಇಬ್ಬರೂ ತೂಗುಗತ್ತಿಯ ಅಡಿಯಲ್ಲೇ ಇದ್ದೀರಿ ಎಂದು ಎಚ್ಚರಿಸಿತು.
“ನಿಮ್ಮನ್ನು ಕ್ಷಮಿಸಿದ್ದೇವೆ ಎಂದು ನಾವು ಹೇಳುತ್ತಿಲ್ಲ. ನಿಮ್ಮ ಹಿಂದಿನ ಇತಿಹಾಸದ ಬಗ್ಗೆ ನಾವು ಕುರುಡಾಗಿರಲು ಸಾಧ್ಯವಿಲ್ಲ. ನಿಮ್ಮ ಕ್ಷಮೆ ಯಾಚನೆ ಬಗ್ಗೆ ನಾವು ಆಲೋಚಿಸುತ್ತೇವೆ. ನ್ಯಾಯಾಲಯದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿಯದಷ್ಟು ನೀವು ಅಮಾಯಕರೇನೂ ಅಲ್ಲ ಎಂಬುದಾಗಿ ನ್ಯಾಯಾಲಯ ಹೇಳಿತು.
ಪತಂಜಲಿ ಮತ್ತದರ ಪ್ರತಿನಿಧಿಗಳು ತಮ್ಮನ್ನು ತಾವು ಸುಧಾರಿಸಿಕೊಳ್ಳುವುದಾಗಿ ಸದುದ್ದೇಶದಿಂದ ನಡೆದುಕೊಳ್ಳುವುದಾಗಿ ನೀಡಿದ ಹೇಳಿಕೆಗಳನ್ನು ದಾಖಲಿಸಿಕೊಂಡ ಬಳಿಕ ನ್ಯಾಯಾಲಯ ಪ್ರಕರಣವನ್ನು ಏಪ್ರಿಲ್ 23 ಕ್ಕೆ ಮುಂದೂಡಿತು.
ಪತಂಜಲಿ, ಬಾಬಾ ರಾಮದೇವಹಾಗೂ ಆಚಾರ್ಯ ಬಾಲಕೃಷ್ಣ ಅವರ ಪರವಾಗಿ ಹಿರಿಯ ವಕೀಲರಾದ ಮುಕುಲ್ ರೋಹಟಗಿ, ವಿಪಿನ್ ಸಾಂಘಿ ಹಾಗೂ ಬಲಬೀರ್ ಸಿಂಗ್ ಅವರು ವಾದ ಮಂಡಿಸಿದರು.
ಕೋವಿಡ್ ಲಸಿಕೆ ಮತ್ತು ಆಧುನಿಕ ಔಷಧದ ವಿರುದ್ಧ ಅವಹೇಳನಕಾರಿ ಅಭಿಯಾನ ನಡೆಸಲಾಗುತ್ತಿದೆ ಎಂದು ಆರೋಪಿಸಿ ಭಾರತೀಯ ವೈದ್ಯಕೀಯ ಸಂಘವು (ಐಎಂಎ) ಪತಂಜಲಿ ವಿರುದ್ಧ ಅರ್ಜಿ ಸಲ್ಲಿಸಿತ್ತು. ಪ್ರಕರಣದ ಸಂಬಂಧ ಪತಂಜಲಿಯ ಬಾಬಾ ರಾಮದೇವ್ ಹಾಗೂ ಆಚಾರ್ಯ ಬಾಲಕೃಷ್ಣ ಅವರಿಗೆ ಸುಪ್ರೀಂ ಕೋರ್ಟ್ ಈ ಹಿಂದೆಯೂ ಛೀಮಾರಿ ಹಾಕಿತ್ತು. ವಅಲ್ಲದೆ, ತಾತ್ಸಾರದಿಂದ ಕೂಡಿದ ಕ್ಷಮಾಪಣಾ ಅರ್ಜಿ ಸಲ್ಲಿಸಲಾಗಿದೆ ಎಂದು ನ್ಯಾಯಾಲಯ ತಾರಾಟೆಗೆ ತೆದುಕೊಂಡಿತ್ತು.
ತಾವು ಬೇಷರತ್ ಕ್ಷಮೆ ಯಾಚಿಸುತ್ತಿರುವುದಾಗಿ ಮತ್ತೆ ಈ ಇಬ್ಬರೂ ಅಫಿಡವಿಟ್ ಸಲ್ಲಿಸಿದ್ದರು. ಆದರೆ, ಈ ವಿಚಾರವಾಗಿ ರಾಮದೇಮಮತ್ತು ಬಾಲಕೃಷ್ಣ ಅವರ ಜೊತೆ ನೇರವಾಗಿ ಮತನಾಡಲು ಬಯಸುವುದಾಗಿ ನ್ಯಾಯಾಲಯ ತಿಳಿಸಿತು.
ಹಾಗೂ ಭವಿಷ್ಯದಲ್ಲಿ ನಾನು ಅದರ ಬಗ್ಗೆ ಜಾಗೃತನಾಗಿರುತ್ತೇನೆ. ಭವಿಷ್ಯದಲ್ಲಿ ಹೀಗಾಗುವುದಿಲ್ಲ ಎಂದು ರಾಮದೇವ ನ್ಯಾಯಾಲಯಕ್ಕೆ ತಿಳಿಸಿದರು.
ಕಂಪನಿ ತನ್ನ ಜಾಹೀರಾತುಗಳಲ್ಲಿ ನಿರ್ದಿಷ್ಟ ರೋಗಗಳನ್ನು ಗುಣಪಡಿಸುವುದಾಗಿ ಹೇಳಿಕೊಳ್ಳುವಂತಿಲ್ಲ ಮತ್ತು ಹಾಗೆ ಜಾಹೀರಾತು ನೀಡುವುದು ಕಾನೂನುಬಾಹಿರವಾಗಿದೆ ಎಂದು ನ್ಯಾಯಾಲಯ ಹೇಳಿತು.
ಪತಂಜಲಿಯ ವ್ಯವಸ್ಥಾಪಕ ನಿರ್ದೇಶಕ ಬಾಲಕೃಷ್ಣ ಆಚಾರ್ಯ ಇದೇ ವೇಳೆ ತಮ್ಮ ನಡವಳಿಕೆ ಉದ್ದೇಶಪೂರ್ವಕವಾಗಿರಲಿಲ್ಲ. ಇದೆಲ್ಲವೂ ಅಜ್ಞಾನದಿಂದ ಸಂಭವಿಸಿದೆ. ನಾವು ಕ್ಷಮೆಯಾಚಿಸುತ್ತೇವೆ ಎಂದು ತಿಳಿಸಿದರು.
ಪತಂಜಲಿ ಉತ್ಪನ್ನಗಳನ್ನು ಪ್ರಚಾರ ಮಾಡುವ ನೆಪದಲ್ಲಿ ಅಲೋಪತಿಯನ್ನು ಅಪಹಾಸ್ಯ ಮಾಡಿರುವುದು ತುಂಬಾ ತಪ್ಪು ಎಂದು ನ್ಯಾಯಮೂರ್ತಿ ಅಮಾನುಲ್ಲಾ ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ