ಆಘಾತಕಾರಿ ವಿದ್ಯಮಾನಕ್ಕೆ ತಮಿಳುನಾಡಿನ ಖಾಸಗಿ ಬ್ಯಾಂಕೊಂದು ಸಾಕ್ಷಿಯಾಗಿದೆ. ಗ್ರಾಹಕನೊಬ್ಬ ತಾನು ಪಡೆದ ಸಾಲ ವಾಪಸ್ ಮಾಡಲಿಲ್ಲವೆಂದು ಬ್ಯಾಂಕ್ ಉದ್ಯೋಗಿ ಆತನ ಹೆಂಡತಿಯನ್ನೇ ಅಡವಾಗಿ ಇಟ್ಟುಕೊಂಡ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ…!
ಸೇಲಂ ಜಿಲ್ಲೆಯ ವಝಪ್ಪಾಡಿಯ ಖಾಸಗಿ ಬ್ಯಾಂಕ್‌ನ ಉದ್ಯೋಗಿಯೊಬ್ಬರು ಕೂಲಿ ಕಾರ್ಮಿಕನ ಪತ್ನಿಯನ್ನು ಬ್ಯಾಂಕ್‌ಗೆ ಕರೆದೊಯ್ದು ಪತಿ ತಾನು ಪಡೆದ ಸಾಲದ ಕಂತನ್ನು ಪಾವತಿಸುವ ವರೆಗೂ ಅವರನ್ನು ಅಡವಿಟ್ಟುಕೊಂಡಿದ್ದರು ಎಂದು ಹೇಳಲಾಗಿದೆ. ಪತಿಯು ಸಾಲ ಪಾವತಿಸಿದ ನಂತರವೇ ಬ್ಯಾಂಕ್ ಉದ್ಯೋಗಿ ಪತ್ನಿಯನ್ನು ಬಿಡುಗಡೆ ಮಾಡಿದ್ದಾರೆ ಎಂದು ವರದಿಯಾಗಿದೆ. ಮಾಧ್ಯಮ ವರದಿಯ ಪ್ರಕಾರ, ರಾತ್ರಿ 7:30ರ ವರೆಗೂ ಪತ್ನಿಯನ್ನು ಖಾಸಗಿ ಬ್ಯಾಂಕ್‌ನಲ್ಲಿ ಇರಿಸಿಕೊಂಡು ಆಕೆಯ ಪತಿಯಿಂದ ಹಣ ವಸೂಲಿ ಮಾಡಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಪ್ರಶಾಂತ (27 ವರ್ಷ) ಎಂಬವರು ಸೇಲಂ ಜಿಲ್ಲೆಯ ವಜಪಾಡಿ ಬಳಿಯ ತುಕ್ಕಿಯಂಪಾಳ್ಯಂನಲ್ಲಿ ವಾಸವಾಗಿದ್ದು, ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾರೆ. ಕೌಟುಂಬಿಕ ಸಮಸ್ಯೆಯಿಂದ ನಾಲ್ಕು ತಿಂಗಳ ಹಿಂದೆ ವಾಜಪಾಡಿಯ ಐಡಿಎಫ್ ಸಿ ಫಸ್ಟ್ ಭಾರತ ಬ್ಯಾಂಕ್ ನಲ್ಲಿ ₹35 ಸಾವಿರ ಸಾಲ ಮಾಡಿಕೊಂಡಿದ್ದರು ಎಂದು ವರದಿ ಹೇಳಿದೆ.
ಪ್ರತಿ ವಾರ ₹770 ರೂ.ಗಳ ಕಂತುಗಳ ಪಾವತಿ ಮಾಡುವ ಮೂಲಕ 52 ಕಂತುಗಳಲ್ಲಿ ಸಂಪೂರ್ಣ ಹಣವನ್ನು ಪಾವತಿಸುವ ಒಪ್ಪಂದದ ಮೇರೆಗೆ ಸಾಲವನ್ನು ತೆಗೆದುಕೊಳ್ಳಲಾಗಿದೆಯಂತೆ. ಇನ್ನು ಕೇವಲ 10 ವಾರದ ಕಂತುಗಳು ಮಾತ್ರವೇ ಬಾಕಿ ಇತ್ತು ಎನ್ನಲಾಗಿದೆ.
ವರದಿಗಳ ಪ್ರಕಾರ, ಶುಭಾ ಎನ್ನುವ ಬ್ಯಾಂಕ್ ಉದ್ಯೋಗಿ ಏಪ್ರಿಲ್ 30ರಂದು ಸಾಲದ ಕಂತಿನ ವಿಚಾರವಾಗಿ ಪ್ರಶಾಂತ ಅವರಿಗೆ ಫೋನ್ ಮಾಡಿದ್ದಾಳೆ. ಆದರೆ ಪ್ರಶಾಂತ ಫೋನ್ ಎತ್ತದ ಕಾರಣ ಬ್ಯಾಂಕ್ ಉದ್ಯೋಗಿ ಆತನ ಮನೆಗೆ ಹೋಗಿದ್ದಾಳೆ. ಅಲ್ಲಿ ಪ್ರಶಾಂತ ಇರಲಿಲ್ಲ. ಆಗ ಆತನ ಹೆಂಡತಿ ಗೌರಿ ಶಂಕರಿಯನ್ನು ಬ್ಯಾಂಕ್ ಕಚೇರಿಗೆ ಕರೆದುಕೊಂಡು ಬಂದಿದ್ದಾಳೆ. ಅಷ್ಟೇ ಅಲ್ಲ, ಪ್ರಶಾಂತ ಬಂದು ಸಾಲದ ಕಂತು ₹770 ರೂ. ಕಟ್ಟುವವರೆಗೂ ಪತ್ನಿ ಗೌರಿ ಶಂಕರಿ ಅವರನ್ನು ಬ್ಯಾಂಕ್ ಕಚೇರಿಯಲ್ಲೇ ಕೂಡ್ರಿಸಿಕೊಂಡಿದ್ದರಂತೆ.
ವಿಷಯ ತಿಳಿದ ಪ್ರಶಾಂತ ಗಾಬರಿಗೊಂಡು ವಾಜಪ್ಪಾಡಿ ಪೊಲೀಸ್ ಠಾಣೆಯಲ್ಲಿ ಉಪಪೊಲೀಸ್ ಅಧೀಕ್ಷಕರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ನಂತರ ಪತ್ನಿ ಗೌರಿ ಶಂಕರಿ ಅವರನ್ನು ಸೆಲ್ ಫೋನ್ ಮೂಲಕ ಸಂಪರ್ಕಿಸಿದ್ದಾರೆ. ಆಗ ಬ್ಯಾಂಕ್ ಉದ್ಯೋಗಿ ನಿಮ್ಮ ಕಂತು ಪಾವತಿಸಿ ನಿಮ್ಮ ಪತ್ನಿಯನ್ನು ಕರೆದುಕೊಂಡು ಹೋಗಿ ಎಂದು ಹೇಳಿದ್ದಾರೆ. ನಂತರ ಉಪ ಪೊಲೀಸ್ ವರಿಷ್ಠಾಧಿಕಾರಿ ಸೂಚನೆ ಮೇರೆಗೆ ವಾಜಪ್ಪಾಡಿ ಪೊಲೀಸರು ಮಧ್ಯಪ್ರವೇಶಿಸಿ ಬ್ಯಾಂಕಿಗೆ ತೆರಳಿ ರಾತ್ರಿ 8 ಗಂಟೆಯವರೆಗೆ ಬ್ಯಾಂಕ್ ಕಾರ್ಯನಿರ್ವಹಿಸಲು ಅನುಮತಿ ಇದೆಯೇ ಎಂದು ಬ್ಯಾಂಕ್ ವ್ಯವಸ್ಥಾಪಕರನ್ನು ಪ್ರಶ್ನಿಸಿದ್ದಾರೆ. ಹಾಗೂ ಗಂಡ ಹಣ ಪಾವತಿಸದಿರುವ ಬಗ್ಗೆ ಹೆಂಡತಿಯನ್ನು ಕರೆದುಕೊಂಡು ಬ್ಯಾಂಕಿನಲ್ಲಿ ಕೂಡ್ರಿಸಿಕೊಂಡ ಬಗ್ಗೆಯೂ ಪ್ರಶ್ನಿಸಿದ್ದಾರೆ. ಆದರೆ ವ್ಯವಸ್ಥಾಪಕರು ಇದರ ಬಗ್ಗೆ ತನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ನಂತರ ರಾತ್ರಿ 7:30ರ ಸುಮಾರಿಗೆ ಪೊಲೀಸರ ಸಮ್ಮುಖದಲ್ಲಿ ಪ್ರಶಾಂತ ₹770 ನೀಡಿ ಪತ್ನಿ ಗೌರಿ ಶಂಕರಿಯನ್ನು ಬಿಡಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಎರಡೂ ಕಡೆಯವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಸಂಜೆ 6 ಗಂಟೆಯ ನಂತರ ಹಣಕ್ಕಾಗಿ ಗ್ರಾಹಕರಿಗೆ ಕಿರುಕುಳ ನೀಡಬಾರದು ಎಂದು ರಿಸರ್ವ್ ಬ್ಯಾಂಕ್ ಈ ಹಿಂದೆ ಸೂಚನೆ ನೀಡಿದ್ದರೂ, ಪತಿಯಿಂದ ಹಣ ವಸೂಲಿ ಮಾಡಲು ಮಹಿಳೆಯನ್ನು ರಾತ್ರಿ 7:30 ರವರೆಗೆ ವಶಕ್ಕೆ ಪಡೆದ ಐಡಿಎಫ್‌ಸಿ ಬ್ಯಾಂಕ್ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ