ಅಯೋಧ್ಯಾ : ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಜನವರಿಯಲ್ಲಿ ಮಂದಿರ ಉದ್ಘಾಟನೆಯ ನಂತರ ಇದು ಅವರ ಮೊದಲ ಭೇಟಿಯಾಗಿದೆ.
ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನದ ಎರಡು ದಿನಗಳ ಮೊದಲು ದೂರದರ್ಶನದಲ್ಲಿ ಪ್ರಸಾರವಾದ ಸಮಾರಂಭದಲ್ಲಿ, ಪ್ರಧಾನಿ ಮೋದಿ ಅವರು ರಾಮಲಲ್ಲಾ ವಿಗ್ರಹಕ್ಕೆ ಸಾಷ್ಟಾಂಗ ನಮಸ್ಕಾರ ಮಾಡುತ್ತಿರುವುದು ಕಂಡುಬಂದಿದೆ. ಇದಕ್ಕೂ ಮುನ್ನ ಅವರು ಇಟಾವಾ ಮತ್ತು ಸೀತಾಪುರದಲ್ಲಿ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದರು.
ದೇವಾಲಯದ ಪ್ರವೇಶ ದ್ವಾರಗಳನ್ನು ಹೂವುಗಳಿಂದ ಅಲಂಕರಿಸಲಾಗಿತ್ತು. ಹೂವುಗಳನ್ನು ಬಳಸಿ ಮಾಡಿದ ಓಂ, ಬಿಲ್ಲು ಮತ್ತು ಬಾಣದ ಪ್ರತಿಕೃತಿಗಳು ಸಹ ವಿವಿಧೆಡೆ ಕಂಡುಬಂದವು. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಕಾರ, ದೇವಾಲಯದಲ್ಲಿನ ರಾಮಲಲ್ಲಾ ವಿಗ್ರಹಕ್ಕೆ ಭಾನುವಾರ ತಿಳಿ ಗುಲಾಬಿ ಬಣ್ಣದ ಉಡುಪನ್ನು ಹಾಕಲಾಗಿತ್ತು.
“ನನ್ನ ಸಹವರ್ತಿ 140 ಕೋಟಿ ಭಾರತೀಯರ ಯೋಗಕ್ಷೇಮಕ್ಕಾಗಿ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನನ್ನು ಪ್ರಾರ್ಥಿಸಿದೆ” ಎಂದು ಪ್ರಧಾನಿ ಮೋದಿ ರಾಂ ಮಂದಿರ ಭೇಟಿಯ ನಂತರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಯೋಧ್ಯೆ ಜಿಲ್ಲೆಗೆ ಒಳಪಡುವ ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಮೇ 20 ರಂದು ಐದನೇ ಹಂತದ ಚುನಾವಣೆಯಲ್ಲಿ ಮತದಾನ ನಡೆಯಲಿದೆ.
ದೇವಾಲಯದ ಭೇಟಿಯ ನಂತರ ಪ್ರಧಾನಿಯವರು ಮೆಗಾ ರೋಡ್ ಶೋ ನಡೆಸಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಬಿಜೆಪಿಯ ಫೈಜಾಬಾದ್ ಅಭ್ಯರ್ಥಿ ಲಲ್ಲು ಸಿಂಗ್ ಅವರ ಜೊತೆಗಿದ್ದರು. ಪ್ರಧಾನಿಯವರ ವಾಹನ ಯಾತ್ರೆ ಸಾಗುತ್ತಿದ್ದಂತೆ ರಸ್ತೆಯ ಇಕ್ಕೆಲಗಳಲ್ಲಿ ಜನರು ಸಾಲುಗಟ್ಟಿ ನಿಂತಿದ್ದರು. ಸೀರೆಯುಟ್ಟ ಮಹಿಳೆಯರ ಗುಂಪು ಪ್ರಧಾನಿಯವರ ವಾಹನದ ಮುಂದೆ ಸಾಗಿತು.
ದೇವಾಲಯದ ಪ್ರವೇಶದ್ವಾರದಿಂದ ಆರಂಭವಾದ ರೋಡ್‌ಶೋ ಎರಡು ಕಿಲೋಮೀಟರ್ ದೂರದಲ್ಲಿರುವ ನಯಾ ಘಾಟ್ ರಸ್ತೆ ಕ್ರಾಸಿಂಗ್‌ನಲ್ಲಿ ಕೊನೆಗೊಂಡಿತು ಎಂದು ಪಕ್ಷದ ಪದಾಧಿಕಾರಿಗಳು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ