ಮಹಿಳೆ ಅಪಹರಣ ಪ್ರಕರಣ : ಶಾಸಕ ಎಚ್‌.ಡಿ. ರೇವಣ್ಣಗೆ ಜಾಮೀನು ಮಂಜೂರು

ಬೆಂಗಳೂರು: ಮಹಿಳೆ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ಜಹಾಗೂ ಜೆಡಿಎಸ್‌ ಶಾಸಕ ಎಚ್‌.ಡಿ ರೇವಣ್ಣ (HD Revanna) ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಇಂದು ಸೋಮವಾರ ಬೆಳಗ್ಗೆಯಿಂದ ಸಂಜೆಯವರೆಗೆ ಕೋರ್ಟ್‌ ಸುಧೀರ್ಘ ವಿಚಾರಣೆ ನಡೆಸಿ ವಾದ-ಪ್ರತಿವಾದಗಳನ್ನು ಆಲಿಸಿದ ನಂತರ ಜಾಮೀನು ಮಂಜೂರು ಮಾಡಿದೆ. ಶಾಸಕರು- ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಅವರು ಪ್ರಕಟಿಸಿದರು. 5 ಲಕ್ಷ ರೂ.ಬಾಂಡ್‌, ಇಬ್ಬರು ಶ್ಯೂರಿಟಿ ನೀಡಬೇಕು. ಪ್ರಾಸಿಕ್ಯೂಷನ್‌ ಸಾಕ್ಷಿಗೆ ಅಥವಾ ದೂರುದಾರರು ಅಥವಾ ಸಂತ್ರಸ್ತರಿಗೆ ಬೆದರಿಕೆ ಹಾಕಕೂಡದು. ತನಿಖಾಧಿಕಾರಿ ಸೂಚಿಸಿದಾಗ ತನಿಖೆಗೆ ಹಾಜರಾಗಬೇಕು. ತಮ್ಮ ಪಾಸ್‌ಪೋರ್ಟ್‌ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ನ್ಯಾಯಾಲಯದ ಲಿಖಿತ ಅನುಮತಿ ಪಡೆಯದೆ ರಾಜ್ಯದ ಹೊರಹೋಗುವಂತಿಲ್ಲ. ಮುಂದಿನ ಆದೇಶದವರೆಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕೆ ಆರ್‌ ನಗರ ತಾಲ್ಲೂಕು ಅಥವಾ ಸಂತ್ರಸ್ತೆಯ ಕಾಯಂ ನಿವಾಸದತ್ತ ಸುಳಿಯುವಂತಿಲ್ಲ. ಪ್ರತಿ ತಿಂಗಳ ಎರಡನೇ ಭಾನುವಾರದಂದು ತನಿಖಾಧಿಕಾರಿಯ ಮುಂದೆ ಆರು ತಿಂಗಳ ಕಾಲ ಅಥವಾ ಆರೋಪ ಪಟ್ಟಿ ಸಲ್ಲಿಕೆಯಾಗುವವರೆಗೆ ಬೆಳಿಗ್ಗೆ 9ರಿಂದ 5 ಗಂಟೆಯ ಒಳಗೆ ಹಾಜರಾಗಬೇಕು ಎಂದು ರೇವಣ್ಣ ಅವರು ಷರತ್ತು ವಿಧಿಸಿ ಜಾಮೀನು ಮಂಜೂರಿ ಮಾಡಲಾಗಿದೆ.

ಪ್ರಮುಖ ಸುದ್ದಿ :-   ಬಿಜೆಪಿ ಶಾಸಕ ಹರೀಶ ಪೂಂಜಾ ವಿರುದ್ದ ಮತ್ತೊಂದು ಎಫ್ಐಆರ್

ವಿಶೇಷ ತನಿಖಾ ತಂಡ (SIT) ಪರ ವಕೀಲರು ರೇವಣ್ಣ ಪ್ರಭಾವಿಯಾಗಿದ್ದು ಸಾಕ್ಷ್ಯ ನಾಶ ಮಾಡುವ ಆತಂಕವಿದೆ ಯಾವುದೇ ಕಾರಣಕ್ಕೂ ಜಾಮೀನು ಮಂಜೂರು ಮಾಡಬಾರದು ಎಂದು ವಾದಿಸಿದರು. ಮರಣದಂಡನೆ ಮತ್ತು ಜೀವಾವಧಿ ಶಿಕ್ಷೆ ವಿಧಿಸುವ ಅಪರಾಧ ಇದ್ದರೆ ಜಾಮೀನು ತಿರಸ್ಕರಿಸಬಹುದು. ಆದರೆ ನನ್ನ ಕಕ್ಷಿದಾರ ರೇವಣ್ಣ ಪ್ರಕರಣದಲ್ಲಿ ಇಲ್ಲಿ ಯಾವುದೇ ಸತ್ಯ ಮತ್ತು ಸಾಂದರ್ಭಿಕ ಸಾಕ್ಷಿಗಳಿಲ್ಲ. ರೇವಣ್ಣ ಮನೆಯಲ್ಲಿ ಮಹಿಳೆ 10 ವರ್ಷ ಕೆಲಸ ಮಾಡಿದ್ದಾರೆ. ಹೀಗಾಗಿ ಯಾವುದೇ ಅಪಹರಣ ಮಾಡಿಲ್ಲ. ಜಾಮೀನು ನೀಡಬಹುದು ಎಂದು ವಕೀಲ ನಾಗೇಶ ವಾದಿಸಿದರು.

ಎರಡು ಕಡೆಯ ವಾದ ಆಲಿಸಿದ ನ್ಯಾಯಾಧೀಶರು ಸಂಜೆ 4 ಗಂಟೆಗೆ ವಿಚಾರಣೆ ಪೂರ್ಣಗೊಳಿಸಿ ಸಂಜೆ 6:30ರ ಸುಮಾರಿಗೆ ಆದೇಶ ಪ್ರಕಟಿಸಿದರು.
ಮೇ 8 ರಂದು ಬೆಂಗಳೂರಿನ 17ನೇ ಎಸಿಎಂಎಂ ನ್ಯಾಯಾಲಯ 7 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿತ್ತು. ಈ ಆದೇಶದ ಅನ್ವಯ ರೇವಣ್ಣ ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದಾರೆ. ಮಂಗಳವಾರ ಸಂಜೆ ರೇವಣ್ಣ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಎಸ್ಐಟಿ ಬಂಧನದ ಬಳಿಕ ಹೆಚ್‌.ಡಿ ರೇವಣ್ಣ ಅವರು ಜಾಮೀನಿಗಾಗಿ ಜನಪ್ರತಿನಿಧಿಗಳ ನ್ಯಾಯಾಲಯ ಮೊರೆ ಹೋಗಿದ್ದರು.

ಪ್ರಮುಖ ಸುದ್ದಿ :-   ಮೈಸೂರು: ಮಲಗಿದ್ದ ಸ್ಥಿತಿಯಲ್ಲೇ ಒಂದೇ ಕುಟುಂಬದ ನಾಲ್ವರು ಸಾವು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement