ನವದೆಹಲಿ : ರಾಜಕೀಯ ವಿಶ್ಲೇಷಕ ಪ್ರಶಾಂತ ಕಿಶೋರ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಭಾರತೀಯ ಜನತಾ ಪಕ್ಷವು 2024 ರ ಲೋಕಸಭಾ ಚುನಾವಣೆಯಲ್ಲಿ 300ರ ಆಸುಪಾಸು ಸೀಟುಗಳನ್ನು ಗೆಲ್ಲಲಿದೆ ಎಂದು ಹೇಳಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಥಾನ ಗೆಲ್ಲುವುದರಲ್ಲಿ ಯಾವುದೇ ಅರ್ಥಪೂರ್ಣ ಕುಸಿತದ ಸಾಧ್ಯತೆಯಿಲ್ಲ ಎಂದು ಅವರು ಹೇಳಿದ್ದಾರೆ.
“ಎಲ್ಲ ಟೀಕೆಗಳು ಮತ್ತು ಚರ್ಚೆಗಳ ನಂತರ, ಭಾರತದ ಉತ್ತರ ಮತ್ತು ಪಶ್ಚಿಮ ಭಾಗದಲ್ಲಿ ಬಿಜೆಪಿಯ ಸ್ಥಾನಗಳಲ್ಲಿ ಯಾವುದೇ ಅರ್ಥಪೂರ್ಣ ಕುಸಿತವನ್ನು ನಾನು ನೋಡುತ್ತಿಲ್ಲ. ದಕ್ಷಿಣ ಮತ್ತು ಪೂರ್ವದಲ್ಲಿ ಬಿಜೆಪಿಯ ಮತ ಹಂಚಿಕೆ ಮತ್ತು ಸ್ಥಾನಗಳು ಹೆಚ್ಚಾಗುತ್ತವೆ. ಇದನ್ನು ಸೇರಿಸಿದರೆ, ಬಿಜೆಪಿಯು ಸುಮಾರು 300 ಸ್ಥಾನಗಳನ್ನು ಪಡೆಯಲಿದೆ. ನಾನು ಅದರಲ್ಲಿ ಯಾವುದೇ ಧನಾತ್ಮಕವಾಗಿ ಮತ್ತು ಋಣಾತ್ಮಕವಾಗಿ ಪ್ರಮುಖ ಬದಲಾವಣೆಯನ್ನು ಕಾಣುತ್ತಿಲ್ಲ” ಎಂದು ಪ್ರಶಾಂತ ಕಿಶೋರ ಆರ್‌ಟಿವಿ (RTV)ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ಹೇಳುವ ಹಾಗೆಯೂ ಪರಿಸ್ಥಿತಿ ಕಾಣುತ್ತಿಲ್ಲ. ಕಾಂಗ್ರೆಸ್ ಪಕ್ಷವು ಬಿಜೆಪಿ ಇನ್ನೂರು ಸ್ಥಾನಗಳನ್ನು ದಾಟುವುದಿಲ್ಲ ಎಂದು ಹೇಳುತ್ತಿದೆ. ಈ ರೀತಿ ಆಗಬೇಕಾದರೆ, ಬಿಜೆಪಿ ಉತ್ತರ ಮತ್ತು ಪಶ್ಚಿಮದಲ್ಲಿ ನೂರಕ್ಕೂ ಹೆಚ್ಚು ಸ್ಥಾನವನ್ನು ಕಳೆದುಕೊಳ್ಳಬೇಕು. ಆ ರೀತಿ ಆಗುವ ಗ್ರೌಂಡ್ ರಿಯಾಲಿಟಿ ಸದ್ಯ ನನಗೆ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.
ಉತ್ತರ ಮತ್ತು ಪಶ್ಚಿಮ ಭಾಗದಲ್ಲಿ ಬಿಜೆಪಿಗೆ ಕನಿಷ್ಠ ನಷ್ಟವಾಗಲಿದೆ, ಆದರೆ ಇದೇ ವೇಳೆ ಪಶ್ಚಿಮ ಬಂಗಾಳ, ಒಡಿಶಾ, ತೆಲಂಗಾಣ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಅದಕ್ಕೆ ಲಾಭವಾಗಲಿದೆ. ತೆಲಂಗಾಣದಲ್ಲಿ ಬಿಜೆಪಿ ಆರರಿಂದ ಒಂಬತ್ತು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಭಾರಿ ಲಾಭವಿದೆ ಎಂದು ಅವರು ಹೇಳಿದ್ದಾರೆ. ಹಾಗೂ ತಳಮಟ್ಟದಲ್ಲಿ ಆಘಾತಕಾರಿ ಫಲಿತಾಂಶದ ಸಾಧ್ಯತೆ ಕಾಣುತ್ತಿಲ್ಲ ಎಂದು ಹೇಳಿದ್ದಾರೆ. ಬಿಜೆಪಿ 400 ಸೀಟುಗಳನ್ನು ಪಡೆಯುವ ಸಾಧ್ಯತೆ ಇಲ್ಲ. ಈ ಬಾರಿ 400 ಸೀಟುಗಳನ್ನು ದಾಟುತ್ತೇವೆ ಎಂದು ಬಿಜೆಪಿ ನಾಯಕರು ಹೇಳುವುದು ಕೇವಲ ಪಕ್ಷದ ಕಾರ್ಯಕರ್ತರಿಗೆ ನೀಡುವ ಘೋಷಣೆಯಾಗಿದೆ, ಇದು ಸೈಕಲಾಜಿಕಲ್ ಗೇಮ್ ಎಂದಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ