
ಬೆಂಗಳೂರು: ಪ್ರಜ್ವಲ್ ನೀನು ಎಲ್ಲಿಯೇ ಇದ್ದರೂ ಪೋಲಿಸರ ಮುಂದೆ ಶರಣಾಗಬೇಕು, ವಿಚಾರಣೆಯನ್ನು ಎದುರಿಸಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ತಾಕೀತು ಮಾಡಿದ್ದಾರೆ.
ಅಶ್ಲೀಲ ವೀಡಿಯೊ ಪ್ರಕರಣದಲ್ಲಿ ದೇಶ ಬಿಟ್ಟು ಪರಾರಿಯಾಗಿರುವ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭಾರತಕ್ಕೆ ವಾಪಸ್ ಬರುವಂತೆ ಮಾಡಿದ ಮನವಿಯ ನಂತರ ಈಗ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ತಮ್ಮ ಮೊಮ್ಮಗನಿಗೆ ಭಾರತಕ್ಕೆ ಮರಳುವಂತೆ ಸೂಚನೆ ನೀಡಿದ್ದಾರೆ. ಈ ಎಚ್ಚರಿಕೆಗೆ ತಲೆಬಾಗದಿದ್ದಲ್ಲಿ, ಆತ ಮನೆಯವರ ಕಣ್ಣಲ್ಲಿ ಏಕಾಂಗಿಯಾಗುವುದರಲ್ಲಿ ಸಂದೇಹವಿಲ್ಲ. ನನ್ನ ಬಗ್ಗೆ ಅವನಿಗೆ ಏನಾದರೂ ಗೌರವವಿದ್ದಲ್ಲಿ ಕೂಡಲೇ ಹಿಂದಿರುಗಿ ಬರಬೇಕು ಎಂದು ಅವರು ಹೇಳಿದ್ದಾರೆ.
ಪತ್ರದಲ್ಲಿ ಇರುವುದೇನು..?
ನಾನು ಮೇ 18ರಂದು ದೇವಸ್ಥಾನಕ್ಕೆ ಹೊರಟಿದ್ದ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣನ ಕುರಿತಾಗಿ ಮಾತನಾಡಿದ್ದೆ. ಆತ ನನಗೆ, ನನ್ನ ಕುಟುಂಬದವರಿಗೆ, ನನ್ನ ಸಹೋದ್ಯೋಗಿಗಳಿಗೆ, ಸ್ನೇಹಿತರಿಗೆ ಮತ್ತು ನನ್ನ ಪಕ್ಷದ ಕಾರ್ಯಕರ್ತರಿಗೆ ತಂದೊಡ್ಡಿರುವ ಆಘಾತ ಮತ್ತು ನೋವಿನಿಂದ ಹೊರಬಂದು ಮಾತನಾಡಲು ಕೊಂಚ ಸಮಯ ಹಿಡಿಯಿತು ಎಂದು ಅವರು ಹೇಳಿದ್ದಾರೆ.

ಕಾನೂನಿನ ಪ್ರಕಾರ ಅವನು ತಪ್ಪಿತಸ್ಥನಾದರೆ ಅವನಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು. ನನ್ನ ಈ ನಿಲುವನ್ನು ನನ್ನ ಮಗ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಹಗರಣ ಹೊರಬಿದ್ದ ಮೊದಲ ದಿನದಿಂದಲೇ ಪ್ರತಿಪಾದಿಸಿದ್ದಾರೆ.
ಜನರು ನನ್ನ ಮತ್ತು ನನ್ನ ಕುಟುಂಬದರ ಕುರಿತಾಗಿ ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದೆಲ್ಲವೂ ನನಗೆ ತಿಳಿದಿದೆ. ನಾನು ಅವರು ಮಾತನಾಡುವುದನ್ನು ನಿಲ್ಲಿಸುವ ಪ್ರಯತ್ನ ಮಾಡುವುದಿಲ್ಲ. ನಾನು ಅವರನ್ನು ಟೀಕೆ ಮಾಡಲೂ ಹೋಗುವುದಿಲ್ಲ. ಈ ಹಗರಣದ ಎಲ್ಲಾ ಸತ್ಯಾಂಶಗಳು ಹೊರಬರುವವರೆಗೂ ಅವರು ತಾಳ್ಮೆಯಿಂದ ಕಾಯಬೇಕಿತ್ತು. ಅದರೂ ನಾನು ಅವರೊಂದಿಗೆ ವಾದಕ್ಕೆ ಇಳಿಯುವುದಿಲ್ಲ..
ಪ್ರಜ್ವಲ್‌ನ ಚಟುವಟಿಕೆಗಳ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ. ಅವನನ್ನು ರಕ್ಷಿಸುವ ಯಾವುದೇ ಇರಾದೆಯೂ ನನಗಿಲ್ಲ. ಅವನ ಈಗಿನ ಚಲನವಲನ ಮತ್ತು ಅವನ ವಿದೇಶಿ ಯಾತ್ರೆಯ ಬಗ್ಗೆ ನನಗೆ ಏನೂ ತಿಳಿದಿಲ್ಲ, ತಿಳಿದಿರಲಿಲ್ಲ. ನಾನು ನನ್ನ ಆತ್ಮಸಾಕ್ಷಿಗೆ ಮಾತ್ರ ಉತ್ತರಿಸಬಲ್ಲೆ. ನನಗೆ ದೇವರಲ್ಲಿ ನಂಬಿಕೆ ಇದೆ ಮತ್ತು ಆ ದೇವರಿಗೆ ಎಲ್ಲಾ ಸತ್ಯ ತಿಳಿದಿದೆ ಎಂದು ನಾನು ನಂಬಿದ್ದೇನೆ ಎಂದು ದೇವೇ ಗೌಡ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಡೆದಿರುವ ರಾಜಕೀಯ ಪಿತೂರಿಗಳು, ಚಿತಾವಣೆಗಳು, ಉತ್ಪ್ರೇಕ್ಷೆಗಳು ಮತ್ತು ಮಿಥ್ಯಾರೋಪಗಳ ಬಗ್ಗೆ ಈಗ ವಿಶ್ಲೇಷಣೆ ಮಾಡಲು ಹೋಗುವುದಿಲ್ಲ. ಅವುಗಳನ್ನು ಮಾಡಿದವರು ದೇವರಿಗೆ ಉತ್ತರಿಸಬೇಕಾಗುತ್ತದೆ. ತಾವು ಎಸಗಿದ ಕೃತ್ಯಗಳಿಗೆ ಅವರು ಸೂಕ್ತ ಬೆಲೆ ತೆರಬೇಕಾಗುತ್ತದೆ ಎಂದು ನಂಬಿದ್ದೇನೆ. ಇದನ್ನು ಭಗವಂತನ ಪಾದದಲ್ಲಿ ಇರಿಸಿದ್ದೇನೆ.
ಸದ್ಯಕ್ಕೆ ನಾನು ಏನು ಮಾಡಬಹುದು ಎಂದರೆ ಪ್ರಜ್ವಲ್ ಎಲ್ಲಿದ್ದರೂ ಬಂದು, ಪೊಲೀಸರ ಮುಂದೆ ಶರಣಾಗಿ, ವಿಚಾರಣೆಯನ್ನು ಎದುರಿಸು ಎಂದು ಮುಲಾಜಿಲ್ಲದೆ ಹೇಳಬಲ್ಲೆ. ಇದು ಅವನಿಗೆ ಕೊಡುತ್ತಿರುವ ಎಚ್ಚರಿಕೆ ಎಂದು ತಿಳಿಯಬೇಕು. ನೀನು ಮಾಡಿದ್ದೀಯ ಎನ್ನಲಾದ ತಪ್ಪುಗಳನ್ನು ತೀರ್ಮಾನಿಸಲು ಕಾನೂನು ಇದೆ. ಆದರೆ ಈ ಎಚ್ಚರಿಕೆಗೆ ನೀನು ತಲೆಬಾಗದಿದ್ದಲ್ಲಿ ನೀನು ನನ್ನ ಕುಟುಂಬದವರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ನನ್ನ ಬಗ್ಗೆ ಗೌರವವಿದ್ದರೆ ಕೂಡಲೇ ಬಂದು ಪೊಲೀಸರಿಗೆ ಶರಣಾಗು ಎಂದು ಅವರು ಹೇಳಿದ್ದಾರೆ.
ನಾನಾಗಲಿ, ನನ್ನ ಕುಟುಂಬದವರಾಗಲಿ ಈ ವಿಚಾರಣೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಭರವಸೆ ಕೊಡುತ್ತೇನೆ. ಅದರಲ್ಲಿ ಯಾವುದೇ ಭಾವನೆಗೆ ಸಿಲುಕದೆ ಅವನು ಎಸಗಿದ್ದಾನೆ ಎನ್ನಲಾದ ಕೃತ್ಯಗಳು ಮತ್ತು ತಪ್ಪುಗಳಿಂದ ನೊಂದಿರುವ, ಅನ್ಯಾಯಕ್ಕೆ ಒಳಗಾಗಿರುವ ಎಲ್ಲರಿಗೂ ನ್ಯಾಯ ಸಿಗುವುದಷ್ಟೆ ನನಗೆ ಮುಖ್ಯ. ಜನರ ವಿಶ್ವಾಸವನನ್ನು ಮರಳಿ ಪಡೆಯುವುದಷ್ಟೆ ನನ್ನ ಗುರಿ. ಜನರು ಆರು ದಶಕಗಳ ನನ್ನ ರಾಜಕೀಯ ಜೀವನುದ್ದಕ್ಕೂ ನನ್ನ ಜೊತೆಗೆ ನಿಂತಿದ್ದಾರೆ. ಅವರಿಗೆ ನಾನು ಸದಾ ಋಣಿ ಮತ್ತು ನಾನು ಬದುಕಿರುವವರೆಗೂ ಅವರ ಹಿತದ ವಿರುದ್ಧ ನಡೆದುಕೊಳ್ಳುವುದಿಲ್ಲ ಎಂದು ಪತ್ರದಲ್ಲಿ ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ