ರಾಜ್ಕೋಟ್ (ಗುಜರಾತ್): ಗುಜರಾತ್ನ ರಾಜ್ಕೋಟದಲ್ಲಿ ಶನಿವಾರ ಭಾರಿ ಅಗ್ನಿ ದುರಂತ ಸಂಭವಿಸಿದ್ದು, ಈ ದುರಂತದಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ 20 ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಸ್ಥಳಕ್ಕೆ ರಕ್ಷಣಾ ತಂಡಗಳು ದೌಡಾಯಿಸಿದ್ದು, ಪರಿಹಾರ ಕಾರ್ಯದಲ್ಲಿ ತೊಡಗಿದೆ.
ಇಲ್ಲಿನ ಟಿಆರ್ಪಿ ಗೇಮ್ ಝೋನ್ನಲ್ಲಿ ಕಟ್ಟಡದಲ್ಲಿ ಮಧ್ಯಾಹ್ನ ಭಾರಿ ಬೆಂಕಿ ಅವಘಡ ನಡೆದಿದೆ. ಬೇಸಿಗೆ ರಜೆಯ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಇದ್ದರು ಎನ್ನಲಾಗಿದೆ. ಈಗಾಗಲೇ, 20 ಮೃತದೇಹಗಳು ಪತ್ತೆಯಾಗಿವೆ. ಬೆಂಕಿ ನಂದಿಸುವ ಕಾರ್ಯದಲ್ಲಿ ಎಂಟು ಅಗ್ನಿಶಾಮಕ ದಳ ತಂಡಗಳು ತೊಡಗಿಕೊಂಡಿವೆ. ಬೆಂಕಿಯು ಇಡೀ ಆಟದ ವಲಯ ಸಂಕೀರ್ಣವನ್ನು ಆವರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿಯ ಪ್ರಕಾರ, ಟಿಆರ್ಪಿ (TRP) ಆಟದ ವಲಯದಲ್ಲಿ ತಾತ್ಕಾಲಿಕ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಗೆ ಕಾರಣ ಸದ್ಯಕ್ಕೆ ತಿಳಿದುಬಂದಿಲ್ಲ.
ಬೆಂಕಿಯನ್ನು ನಿಯಂತ್ರಿಸಲು ಮತ್ತು ಒಳಗೆ ಸಿಲುಕಿರುವವರನ್ನು ರಕ್ಷಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದುವರೆಗೆ ಮೂವರನ್ನು ರಕ್ಷಿಸಲಾಗಿದೆ.
ಗೇಮಿಂಗ್ ಚಟುವಟಿಕೆಗಳಿಗಾಗಿ ಫೈಬರ್ ಡೋಮ್ನಲ್ಲಿ ಸಂಜೆ 4:15 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು ಮತ್ತು ಬೆಂಕಿ ಸ್ಫೋಟಗೊಂಡಾಗ ಮಕ್ಕಳು ಸೇರಿದಂತೆ ಹಲವಾರು ಜನರು ಆಟವಾಡುತ್ತಿದ್ದರು.
ಈ ಬಗ್ಗೆ ರಾಜ್ಕೋಟ್ ಪೊಲೀಸ್ ಕಮಿಷನರ್ ರಾಜು ಭಾರ್ಗವ ಮಾತನಾಡಿ, ಟಿಆರ್ಪಿ ಗೇಮಿಂಗ್ ವಲಯದಲ್ಲಿ ಮಧ್ಯಾಹ್ನ ಈ ಬೆಂಕಿ ಕಾಣಿಸಿಕೊಂಡಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಬೆಂಕಿ ನಿಯಂತ್ರಣದಲ್ಲಿದೆ. ನಾವು ಸಾಧ್ಯವಾದಷ್ಟು ಜನರನ್ನು ಹೊರತೆಗೆಯಲು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಗೇಮಿಂಗ್ ಝೋನ್ ಯುವರಾಜ್ ಸಿಂಗ್ ಸೋಲಂಕಿ ಎಂದು ಗುರುತಿಸಲ್ಪಟ್ಟ ವ್ಯಕ್ತಿಯ ಒಡೆತನದಲ್ಲಿದೆ ಎಂದು ಅವರು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ