ಪಾಟ್ನಾ : ಕಳೆದ 24 ಗಂಟೆಗಳಲ್ಲಿ ಬಿಹಾರದ ವಿವಿಧ ಜಿಲ್ಲೆಗಳಲ್ಲಿ ಬಿಸಿಗಾಳಿಗೆ ಕನಿಷ್ಠ 19 ಜನರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಕ್ಸಾರ್‌ನಲ್ಲಿ ಸಿಕ್ರೌಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಸ್ತೆಬದಿಯಲ್ಲಿ ಪತ್ತೆಯಾದ ಯುವಕ ಸೇರಿದಂತೆ ಮೂವರು ಬಿಸಿಲಿನ ತಾಪದಿಂದ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ನಳಂದಾದಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಮೃತರಲ್ಲಿ ಓರ್ವ ಶಿಕ್ಷಕ, ಓರ್ವ ಗೃಹರಕ್ಷಕ ಜವಾನ್ ಹಾಗೂ ಓರ್ವ ರೈತ ಸೇರಿದ್ದಾರೆ. ಮೃತ ಗೃಹರಕ್ಷಕ ಜವಾನನನ್ನು ರಮೇಶಪ್ರಸಾದ (54), ಶಿಕ್ಷಕ ವಿಜಯಕುಮಾರ ಸಿನ್ಹಾ ಮತ್ತು ರೈತ ಸುರೇಂದ್ರ ಪ್ರಸಾದ ಎಂದು ಗುರುತಿಸಲಾಗಿದೆ. ರೋಹ್ಟಾಸ್‌ನಲ್ಲಿ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಮೂವರು ಬಿಸಿಲಿನ ತಾಪಕ್ಕೆ ಮೃತಪಟ್ಟಿದ್ದಾರೆ.
ಭೋಜಪುರ ಜಿಲ್ಲೆಯಲ್ಲಿ ಬಿಸಿಲಿನ ತಾಪಕ್ಕೆ ಮೂವರು ಪ್ರಾಣ ಕಳೆದುಕೊಂಡಿದ್ದಾರೆ ಅವರನ್ನು ಚಂದ್ರಮ ಗಿರಿ (80), ಗುಪ್ತನಾಥ ಶರ್ಮಾ (60) ಮತ್ತು ಕೇಶವಪ್ರಸಾದ ಸಿಂಗ್ (30) ಎಂದು ಗುರುತಿಸಲಾಗಿದೆ. ಪಶ್ಚಿಮ ಚಂಪಾರಣ್‌ನಲ್ಲಿ 40 ವರ್ಷದ ಅಪರಿಚಿತ ವ್ಯಕ್ತಿ ಮತ್ತು 16 ವರ್ಷದ ಗೋಲು ಎಂಬ ಹದಿಹರೆಯದ ಹುಡುಗ ಸೇರಿದಂತೆ ಇಬ್ಬರು ಶಾಖದ ಹೊಡೆತದಿಂದ ಸಾವಿಗೀಡಾಗಿದ್ದಾರೆ.
ಗೋಪಾಜಗಂಜ್‌ನಲ್ಲಿ ನೇಪಾಳಕ್ಕೆ ತೆರಳುತ್ತಿದ್ದ ಪ್ರವಾಸಿಗರೊಬ್ಬರು ಶಾಖದ ಹೊಡೆತದಿಂದ ಮೃತಪಟ್ಟಿದ್ದಾರೆ. ಮೃತರನ್ನು ಮಹಾರಾಷ್ಟ್ರದ ನಾಸಿಕ್ ನಿವಾಸಿ ಸೋಮನಾಥ ಆಗ್ರಾ (60) ಎಂದು ಗುರುತಿಸಲಾಗಿದೆ.
ಅರುಣಾಚಲ ಪ್ರದೇಶದಿಂದ ಅರ್ವಾಲಕ್ಕೆ ಚುನಾವಣಾ ಕರ್ತವ್ಯಕ್ಕೆ ಬಂದಿದ್ದ ಹೆಡ್ ಕಾನ್‌ಸ್ಟೆಬಲ್ ನಿಕ್ಕು ಅಹುಜಾ ಕೂಡ ಶಾಖದ ಹೊಡೆತಕ್ಕೆ ಮೃತಪಟ್ಟಿದ್ದಾರೆ. ಶೇಖಪುರದಲ್ಲಿ ಅಂಗನವಾಡಿ ಸಹಾಯಕಿಯೊಬ್ಬರು ಬಿಸಿಗಾಳಿಗೆ ಮೃತಪಟ್ಟರೆ, ಬೇಗುಸರಾಯ್‌ನಲ್ಲಿ ಮತ್ತೊಬ್ಬ ರೈತ ಮೃತಪಟ್ಟಿದ್ದಾರೆ. ಔರಂಗಾಬಾದ್‌ನಲ್ಲಿ ಶಾಖದ ಹೊಡೆತಕ್ಕೆ ಮತ್ತೊಬ್ಬರು ಸಾವಿಗೀಡಾಗಿದ್ದಾರೆ.
ಹವಾಮಾನ ಇಲಾಖೆಯು ಬಿಹಾರದಲ್ಲಿ ಮುಂದಿನ ಎರಡು ದಿನಗಳ ಕಾಲ ತೀವ್ರ ಶಾಖದ ಅಲೆಗಳ ಎಚ್ಚರಿಕೆಯನ್ನು ನೀಡಿದೆ. ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ಮೀರಿದೆ.
ನಿಮ್ಮ ಕಾಮೆಂಟ್ ಬರೆಯಿರಿ