ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಎರಡನೇ ಬಾರಿಗೆ ಅಧಿಕಾರಕ್ಕೆ ಬರಲು ಬಯಸಿರುವ ಅಮೆರಿಕದ ಮಾಜಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಆಕಾಂಕ್ಷಿ ಡೊನಾಲ್ಡ್ ಟ್ರಂಪ್ ಅವರಿಗೆ ಭಾರಿ ಹಿನ್ನಡೆಯಾಗಿದೆ. ತಮ್ಮ ವಿರುದ್ಧದ ಪ್ರಕರಣ ಮುಚ್ಚಿ ಹಾಕಲು ನೀಲಿಚಿತ್ರಗಳ ತಾರೆಗೆ ಹಣ ನೀಡಿದ ಎಲ್ಲ ಆರೋಪಗಳಲ್ಲಿಯೂ ಡೊನಾಲ್ಡ್ ಟ್ರಂಪ್ ದೋಷಿ ಎಂದು ನ್ಯೂಯಾರ್ಕ್ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ನ್ಯೂಯಾರ್ಕ್‌ನ ಮ್ಯಾನಹಟನ್ ನ್ಯಾಯಾಲಯದ 11 ನ್ಯಾಯಾಧೀಶರ ಸಮಿತಿಯು ಗುರುವಾರ ಸರ್ವಾನುಮತದಿಂದ ಈ ತೀರ್ಪು ನೀಡಿದೆ. ಈ ಮೂಲಕ ಟ್ರಂಪ್ ಮಾಡಿದ ಅಪರಾಧಕ್ಕಾಗಿ ಶಿಕ್ಷೆಗೊಳಗಾದ ಮೊದಲ ಅಮೆರಿಕ ಮಾಜಿ ಅಧ್ಯಕ್ಷ ಎಂಬ ಅಪಖ್ಯಾತಿಗೆ ಗುರಿಯಾದರು.
ಹಣ ನೀಡಿದ ವಿಚಾರವನ್ನು ಮುಚ್ಚಿಡಲು ಟ್ರಂಪ್ ತಮ್ಮ ಉದ್ಯಮ ವ್ಯವಹಾರಗಳ ದಾಖಲೆಯನ್ನೇ ತಿರುಚಿದ ಪ್ರತಿ 34 ಆರೋಪಗಳಲ್ಲಿಯೂ ತಪ್ಪಿತಸ್ಥರಾಗಿದ್ದಾರೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಪ್ರತಿ ಪ್ರಕರಣದಲ್ಲಿಯೂ ಅವರು 4 ವರ್ಷಗಳ ಕಾಲ ಸೆರೆವಾಸ ಶಿಕ್ಷೆಗೆ ಗುರಿಯಾಗಬಹುದಾಗಿದೆ. ಆದರೆ ಅವರು ಬಂಧನದಿಂದ ರಕ್ಷಣೆ ಪಡೆಯುವ ಸಾಧ್ಯತೆಯೇ ಅಧಿಕವಾಗಿದೆ ಎಂದು ಹೇಳಲಾಗಿದೆ.
ಜಾಮೀನು ಇಲ್ಲದೆ ಬಿಡುಗಡೆಯಾದ 77 ವರ್ಷದ ರಿಪಬ್ಲಿಕನ್ ಅಧ್ಯಕ್ಷೀಯ ಆಕಾಂಕ್ಷಿ ಈಗ ಅಪರಾಧಿಯಾಗಿದ್ದಾರೆ. ನ್ಯಾಯಾಲಯ ಅವರಿಗೆ ನೀಡುವ ಶಿಕ್ಷೆ ಏನು ಎಂಬು ಆದೇಶ ಮುಂದಿನ ವಾರ ಹೊರಬೀಳಲಿದೆ ಎಂದು ನಿರೀಕ್ಷಿಸಲಾಗಿದೆ. ಜುಲೈ 15ರಂದು ಮಿಲ್ವಾಕೀಯಲ್ಲಿ ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶ ನಡೆಯಲಿದ್ದು, ಅದರಲ್ಲಿ ಟ್ರಂಪ್ ಅವರು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಅಧಿಕೃತ ನಾಮನಿರ್ದೇಶನ ಪಡೆಯಲಿದ್ದಾರೆ. ಆದರೆ ಅದಕ್ಕೂ ನಾಲ್ಕು ದಿನ ಮುನ್ನ ನ್ಯಾಯಾಧೀಶ ಜುವಾನ್ ಮೆರ್ಚನ್ ಅವರು ಶಿಕ್ಷೆಯ ತೀರ್ಪು ಪ್ರಕಟಿಸಲಿದ್ದಾರೆ.ತೀರ್ಪಿನಿಂದಾಗಿ ಡೊನಾಲ್ಡ್ ಟ್ರಂಪ್ ಅವರಿಗೆ ಜೈಲುಶಿಕ್ಷೆಗೆ ಗುರಿಯಾಗುವ ಆತಂಕ ಎದುರಾಗಿದೆ.
ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಟ್ರಂಪ್ ಎಲ್ಲ ಸಿದ್ದತೆ ಮಾಡಿಕೊಂಡಿದ್ದಾರೆ. ಹಾಗಾಗಿ ಈ ತೀರ್ಪು ಟ್ರಂಪ್ 2024ರ ಅಧ್ಯಕ್ಷೀಯ ಚುನಾವಣೆಗೆ ನಿಲ್ಲುವುದನ್ನು ತಡೆಯಲಾಗುವುದಿಲ್ಲ. ನವೆಂಬರ್‌ನಲ್ಲಿ ಅಧ್ಯಕ್ಷ ಜೋ ಬೈಡನ್ ಅವರ ವಿರುದ್ಧ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಟ್ರಂಪ್‌ಗೆ ನಿರ್ಬಂಧವಿಲ್ಲ ಎಂದು ವರದಿಯಾಗಿದೆ.
ತಮ್ಮ ವಿರುದ್ಧದ ಆರೋಪಗಳನ್ನು ಟ್ರಂಪ್ ನಿರಾಕರಿಸಿದ್ದಾರೆ. “ನಾನು ಅಮಾಯಕ ವ್ಯಕ್ತಿ” ಎಂದು ಹೇಳಿಕೊಂಡಿರುವ ಟ್ರಂಪ್, ಮತದಾರರಿಂದ ‘ನಿಜವಾದ ತೀರ್ಪು’ ಬರಲಿದೆ ಎಂದು ಹೇಳಿದ್ದಾರೆ. ಇದು ತಿರುಚಿದ ವಿಚಾರಣೆಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
“ಕಾನೂನಿಗಿಂತ ಯಾರೂ ದೊಡ್ಡವರಲ್ಲ” ಎಂದು ಜೋ ಬೈಡನ್ ಅವರ ಪ್ರಚಾರ ತಂಡ ಹೇಳಿಕೆ ಬಿಡುಗಡೆ ಮಾಡಿದೆ. “ನಮ್ಮ ಪ್ರಜಾಪ್ರಭುತ್ವಕ್ಕೆ ಟ್ರಂಪ್ ನೀಡಿರುವ ಬೆದರಿಕೆಯು ಎಂದಿಗೂ ಒಳಿತಲ್ಲ” ಎಂದು ಹೇಳಿದೆ.
ನೀಲಿಚಿತ್ರಗಳ ತಾರೆ ಸ್ಟಾರ್ಮಿ ಡೇನಿಯಲ್ಸ್ ಅವರು ‘ನಾನು ಟ್ರಂಪ್ ಜೊತೆ ಲೈಂಗಿಕ ಸಂಬಂಧ ಹೊಂದಿದ್ದೆ’ ಎಂದು ಹೇಳಿದ್ದರು. 2016ರ ಚುನಾವಣೆ ವೇಳೆ ಈ ಬಗ್ಗೆ ಹೇಳಿಕೆ ನೀಡದೆ ಸುಮ್ಮನಿರಲು ನಟಿಗೆ ಭಾರಿ ಹಣ ನೀಡಲಾಗಿತ್ತು ಎಂದು ಆರೋಪಿಸಿ ಟ್ರಂಪ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ