ನವದೆಹಲಿ: ಅಂಕಿ-ಅಂಶ ಹಾಗು ಕಾರ್ಯಕ್ರಮ ಅನಷ್ಠಾನ ಸಚಿವಾಲಯವು ಶುಕ್ರವಾರ ಬಿಡುಗಡೆ ಮಾಡಿದ ವರದಿ ಪ್ರಕಾರ 2023 – 24ನೇ ಸಾಲಿನ ನಾಲ್ಕನೇ ತ್ರೈಮಾಸಿಕ (ಜನವರಿ – ಮಾರ್ಚ್) ಅವಧಿಯಲ್ಲಿ ಆರ್ಥಿಕ ಬೆಳವಣಿಗೆ ಶೇ. 7.8ಕ್ಕೆ ತಲುಪಿದೆ. 2023-24ರ ವಾರ್ಷಿಕ ಬೆಳವಣಿಗೆ ದರ( (GDP) ಶೇಕಡಾ 8.2ಕ್ಕೆ ತಲುಪಿದೆ.
ಜನವರಿ-ಮಾರ್ಚ್ ಅವಧಿಯಲ್ಲಿ ಬೆಳವಣಿಗೆಯು ಡಿಸೆಂಬರ್ ತ್ರೈಮಾಸಿಕದಲ್ಲಿ 8.6% ರಷ್ಟಕ್ಕಿಂತ ಕಡಿಮೆಯಾಗಿದೆ. ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, 2022-23 ಹಣಕಾಸು ವರ್ಷದ ಜನವರಿ-ಮಾರ್ಚ್ ಅವಧಿಯಲ್ಲಿ ಒಟ್ಟು ದೇಶೀಯ ಉತ್ಪನ್ನ (GDP) 6.2%ರಷ್ಟು ಇತ್ತು. 2022 – 23ನೇ ಹಣಕಾಸು ವರ್ಷದಲ್ಲಿ ಶೇ. 7.2ರಷ್ಟು ಜಿಡಿಪಿ ಇತ್ತು. ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) 2023-24ಕ್ಕೆ ದೇಶದ ಬೆಳವಣಿಗೆ ದರವನ್ನು ಶೇಕಡಾ 7.7% ಕ್ಕೆ ನಿಗದಿಪಡಿಸಿತ್ತು. 2023-24ರಲ್ಲಿ ಆರ್ಥಿಕತೆ ಬೆಳವಣಿಗೆ ದರವು 8.2 ಪ್ರತಿಶತದಷ್ಟಕ್ಕೆ ತಲುಪಿದೆ ಎಂದು ಅಂಕಿ-ಅಂಶ ಹಾಗು ಕಾರ್ಯಕ್ರಮ ಅನಷ್ಠಾನ ಸಚಿವಾಲಯವು ಶುಕ್ರವಾರ ಬಿಡುಗಡೆ ಮಾಡಿದ ವರದಿ ಹೇಳಿದೆ.
ಭಾರತದ ಜಿಡಿಪಿ ಬಗ್ಗೆ ಆರ್ಬಿಐ, ಸೇರಿದಂತೆ ಬಹುತೇಕ ಏಜೆನ್ಸಿಗಳು ನಿಗದಿಪಡಿಸಿದ್ದ ಬೆಳವಣಿಗೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಆರ್ಥಿಕತೆ ವೃದ್ಧಿಯಾಗಿದೆ. ವಿವಿಧ ಆರ್ಥಿಕ ತಜ್ಞರು, ವಿಶ್ಲೇಷಕರು, ಬ್ರೋಕರೇಜ್ ಸಂಸ್ಥೆಗಳು 2023-24ರಲ್ಲಿ ಭಾರತದ ಜಿಡಿಪಿ ಶೇ. 7.5ರಷ್ಟಿರಬಹುದು ಎಂದು ಅಂದಾಜಿಸಿದ್ದವು. ಐಎಂಎಫ್ ಶೇ. 6.8 ಇರಬಹುದು ಎಂದು ಹೇಳಿತ್ತು.
ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಇಲಾಖೆ ಬಿಡುಗಡೆ ಮಾಡಿದ ವರದಿಯಲ್ಲಿ 2022-23ರಲ್ಲಿ ಶೇ. 14.2ರಷ್ಟಿದ್ದ ನಾಮಿನಲ್ ಜಿಡಿಪಿ ದರ 2023-24ರ ವರ್ಷದಲ್ಲಿ ಶೇ. 9.6ಕ್ಕೆ ಇಳಿಕೆಯಾಗಿತ್ತು ಎಂದು ತಿಳಿಸಿದೆ. 2024 ರ ಮೊದಲ ಮೂರು ತಿಂಗಳಲ್ಲಿ ಚೀನಾ 5.3 ಶೇಕಡಾ ಆರ್ಥಿಕ ಬೆಳವಣಿಗೆಯನ್ನು ದಾಖಲಿಸಿದೆ.
ಯಾವ ವರ್ಷ ಎಷ್ಟಿತ್ತು?
2012-13 : 5.5%
2013-14 : 6.4%
2016-17 : 8.3%
2020-21 : -5.8%
2021-22 : 9.7%
2022-23 : 7.0%
2023-24 : 8.2%
ವಿತ್ತೀಯ ಕೊರತೆ ಜಿಡಿಪಿ (GDP) ಯ 5.63%
ಏತನ್ಮಧ್ಯೆ, 2023-24ರ ಸರ್ಕಾರದ ವಿತ್ತೀಯ ಕೊರತೆಯು ಜಿಡಿಪಿಯ 5.63 ಪ್ರತಿಶತದಷ್ಟಿದೆ, ಶುಕ್ರವಾರ ಬಿಡುಗಡೆಯಾದ ಅಧಿಕೃತ ಅಂಕಿಅಂಶಗಳ ಪ್ರಕಾರ ಕೇಂದ್ರ ಬಜೆಟ್ನಲ್ಲಿ ಅಂದಾಜಿಸಲಾದ 5.8 ಪ್ರತಿಶತಕ್ಕಿಂತ ಸ್ವಲ್ಪ ಉತ್ತಮವಾಗಿದೆ.ವಾಸ್ತವಿಕವಾಗಿ ಹೇಳುವುದಾದರೆ, ವಿತ್ತೀಯ ಕೊರತೆ ಅಥವಾ ಖರ್ಚು ಮತ್ತು ಆದಾಯದ ನಡುವಿನ ಅಂತರವು 16.53 ಲಕ್ಷ ಕೋಟಿ ರೂ.ಎಂದು ಅದು ಹೇಳಿದೆ. 2023-24ರ ಪರಿಷ್ಕೃತ ಅಂದಾಜಿನಲ್ಲಿ, ಫೆಬ್ರವರಿ 1 ರಂದು ಸಂಸತ್ತಿನಲ್ಲಿ ಮಂಡಿಸಲಾದ ಮಧ್ಯಂತರ ಬಜೆಟ್ನಲ್ಲಿ ಸರ್ಕಾರವು ವಿತ್ತೀಯ ಕೊರತೆಯನ್ನು 17.34 ಲಕ್ಷ ಕೋಟಿ ಅಥವಾ ಜಿಡಿಪಿಯ ಶೇಕಡಾ 5.8 ಎಂದು ಅಂದಾಜು ಮಾಡಿತ್ತು.
ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್ (Controller General of Accounts) ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಸರ್ಕಾರವು ಆದಾಯ ಸಂಗ್ರಹ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಗಿದೆ. 2023-24ರ ಆರ್ಥಿಕ ವರ್ಷದಲ್ಲಿ ನಿವ್ವಳ ತೆರಿಗೆ ಸಂಗ್ರಹವು 23.26 ಲಕ್ಷ ಕೋಟಿ ರೂಪಾಯಿಗಳಷ್ಟಿದ್ದರೆ, ವೆಚ್ಚವು 44.42 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು.
ಜಾಗತಿಕ ಸವಾಲುಗಳು (ರಷ್ಯಾ – ಉಕ್ರೇನ್, ಮಧ್ಯಪ್ರಾಚ್ಯ ಬಿಕ್ಕಟ್ಟು) ನಡುವೆ ಭಾರತದ ಆರ್ಥಿಕತೆ ನಿರೀಕ್ಷೆ ಮೀರಿ ಬೆಳೆದಿರುವುದು ದೇಶದ ಆರ್ಥ ವ್ಯವಸ್ಥೆ ಸದೃಢತೆಯ ಸಂಕೇತವಾಗಿದೆ. ಪ್ರಧಾನಿ ಮೋದಿ ಭವಿಷ್ಯದ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದಾರೆ, “2023-24 ರ Q4 ಜಿಡಿಪಿ ಬೆಳವಣಿಗೆಯ ದತ್ತಾಂಶವು ನಮ್ಮ ಆರ್ಥಿಕತೆಯಲ್ಲಿ ದೃಢವಾದ ಬೆಳವಣಿಗೆಯನ್ನು ತೋರಿಸುತ್ತದೆ ಎಂದು ತಿಳಿಸಿದ್ದಾರೆ. ಇದು ಮತ್ತಷ್ಟು ವೇಗವನ್ನು ಸಾಧಿಸಲು ಸಿದ್ಧವಾಗಿದೆ. ದೇಶದ ಕಠಿಣ ಪರಿಶ್ರಮದ ಜನರಿಗೆ ಧನ್ಯವಾದಗಳು, 2023- 24 ಸಾಲಿಗೆ ಜಿಡಿಪಿಯು 8.2%ರಷ್ಟು ಬೆಳವಣಿಗೆ ಕಂಡಿದ್ದು, ನಾನು ಹೇಳಿದಂತೆ ಭಾರತವು ಜಾಗತಿಕವಾಗಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಮುಂದುವರೆದಿದೆ ಎಂದು ಉದಾಹರಿಸುತ್ತದೆ, ಇದು ಬರಲಿರುವ ವಿಷಯಗಳ ಟ್ರೇಲರ್ ಆಗಿದೆ ಎಂದು ಮೋದಿ ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ