ರೇಣುಕಾ ಸ್ವಾಮಿ ಕೊಲೆ ಪ್ರಕರಣ : ನಟ ದರ್ಶನ್‌ ಬಂಧನದ ಬೆನ್ನಲ್ಲೇ ಸ್ನೇಹಿತೆ ನಟಿ ಪವಿತ್ರಾ ಗೌಡ ಪೊಲೀಸ್‌ ವಶಕ್ಕೆ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಎಂಬ ಯುವಕನನ್ನು ಕೊಲೆ ಮಾಡಿದ ಆರೋಪದಲ್ಲಿ ಸ್ಯಾಂಡಲ್‌ವುಡ್‌ ಖ್ಯಾತ ನಟ, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (Actor Darshan) ಅವರನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ ನಟ ದರ್ಶನ್‌ ಗೆಳತಿ ನಟಿ ಪವಿತ್ರ ಗೌಡ (Pavithra Gowda) ಅವರನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ರೇಣುಕಾಸ್ವಾಮಿ ಹತ್ಯೆಯ ಹಿಂದೆ ಒಳಸಂಚು ರೂಪಿಸಿದ ಆರೋಪದಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯ ಪ್ರಕರಣ ಸಂಬಂಧ ಪವಿತ್ರಾ ಗೌಡ (Pavithra Gowda) ಹಾಗೂ ದರ್ಶನ್‌ ಇಬ್ಬರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಪವಿತ್ರಾ ಗೌಡ ಅವರಿಗೆ ಅಶ್ಲೀಲವಾಗಿ ಮೆಸೇಜ್‌ ಮಾಡಿದ ಹಿನ್ನೆಲೆಯಲ್ಲಿಯೇ ರೇಣುಕಾಸ್ವಾಮಿ ಎಂಬ ಯುವಕನನ್ನು ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಮಾಹಿತಿ ಲಭ್ಯವಾಗಿದೆ. ಹಾಗಾಗಿ, ಕೊಲೆಯ ಹಿಂದೆ ಪವಿತ್ರಾ ಗೌಡ ಅವರ ಕೈವಾಡ ಏನಿದೆ? ಇವರು ಮಾಡಿದ ಒಳಸಂಚು ಏನಿದೆ ಎಂಬುದರ ಕುರಿತು ಹೆಚ್ಚಿನ ತನಿಖೆ ನಡೆಸಲು ಪೊಲೀಸರು ನಟಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಪವಿತ್ರಾಗೌಡ ಅವರನ್ನು ವಶಕ್ಕೆ ಪಡೆದ ಆರ್.ಆರ್. ನಗರ ಪೊಲೀಸರು ಕಾಮಾಕ್ಷಿ ಪಾಳ್ಯ‌ ಪೊಲೀಸ್ ಸ್ಟೇಷನ್ ಗೆ ಕರೆದೊಯ್ದಿದ್ದಾರೆ.

ಪ್ರಮುಖ ಸುದ್ದಿ :-   ಡಿಕೆ ಶಿವಕುಮಾರ ಹೇಳಿಕೆಗೆ ಖಂಡಿಸಿ ಸಿಎಂ ಸಿದ್ದರಾಮಯ್ಯಗೆ ಸಾಹಿತಿಗಳ ಪತ್ರ

ಪವಿತ್ರಾ ಗೌಡಗೆ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎನ್ನುವ ವ್ಯಕ್ತಿ ಸೋಶಿಯಲ್ ಮೀಡಿಯಾದಲ್ಲಿ ಮೆಸೇಜ್ ಹಾಗೂ ಆಶ್ಲೀಲ ಫೋಟೋ ವಿಡಿಯೋಗಳನ್ನು ಕಳುಹಿಸಿದ್ದ. ಇದಾದ ಬಳಿಕ ಕೆಲವರು ಸೇರಿಕೊಂಡು ರೇಣುಕಾ ಸ್ವಾಮಿಯನ್ನು ಬೆಂಗಳೂರಿಗೆ ಕರೆಯಿಸಿಕೊಂಡು ಶೆಡ್ ವೊಂದರಲ್ಲಿ ಹಲ್ಲೆಗೈದು ಕೊಲೆ ಮಾಡಿ ಮೃತದೇಹವನ್ನು ಮೋರಿಯೊಂದಕ್ಕೆ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಪೊಲೀಸರಿಗೆ ಸಮೀಪದ ಅಪಾರ್ಟ್‌ಮೆಂಟ್‌ ಭದ್ರತಾ ಸಿಬ್ಬಂದಿಯೊಬ್ಬರು ಮೃತದೇಹವನ್ನು ನಾಯಿಗಳು ಎಳೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ .ಈ ಪ್ರಕರಣ ಸಂಬಂಧ ಕೆಲವರನ್ನು ವಿಚಾರಣೆ ನಡೆಸಿದಾಗ ಕೊನೆಯ ಹಿಂದಿನ ಕಾರಣ ಬಯಲಾಗಿದೆ. ಆರೋಪಿಗಳು ನಟ ದರ್ಶನ್ ಅವರ ಹೆಸರನ್ನು ಹೇಳಿದ್ದರಿಂದ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ನಟ ದರ್ಶನ್ ಸೇರಿದಂತೆ 10 ಮಂದಿಯನ್ನು ಬಂಧಿಸಿದ್ದಾರೆ. ಈಗ ನಟ ದರ್ಶನ್ ಅವರ ಸ್ನೇಹಿತೆ ಪವಿತ್ರಾ ಗೌಡರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement