ನೀಟ್‌ ಪರೀಕ್ಷೆ ವಿವಾದ : ಕೃಪಾಂಕ ರದ್ದು, ಕಡಿಮೆ ಸಮಯಾವಕಾಶ ಸಿಕ್ಕವರಿಗೆ ಮರುಪರೀಕ್ಷೆ ; ಸುಪ್ರೀಂ ಕೋರ್ಟಿಗೆ ಕೇಂದ್ರ

ನವದೆಹಲಿ: ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶಾತಿ ಪದವಿ ಪರೀಕ್ಷೆ (ನೀಟ್‌ ಯುಜಿ 2024) ಬರೆಯಲು ಕಡಿಮೆ ಕಾಲಾವಕಾಶ ದೊರೆತಿದ್ದ ಅಭ್ಯರ್ಥಿಗಳಿಗೆ ಮರು ಪರೀಕ್ಷೆ ಬರೆಯುವ ಇಲ್ಲವೇ ಸಮಯದ ನಷ್ಟ ಅನುಭವಿಸಿದ್ದಕ್ಕಾಗಿ ಈ ಹಿಂದೆ ನೀಡಲಾಗಿದ್ದ ಕೃಪಾಂಕ ತ್ಯಜಿಸುವ ಆಯ್ಕೆ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಅಸಮರ್ಪಕವಾಗಿ ನಡೆದ ಪರೀಕ್ಷೆ, ವಂಚನೆ, ಅಕ್ರಮ ಹಾಗೂ ಮನಸೋಇಚ್ಚೆಯಿಂದ ಕೃಪಾಂಕ ನೀಡಿದ್ದರಿಂದ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರ ಸಂಖ್ಯೆ ಆಘಾತಕರ ರೀತಿಯಲ್ಲಿ ಹೆಚ್ಚಳವಾಯಿತು ಎಂಬ ವಿವಾದದ ಮಧ್ಯೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ ಗೆ ಇದನ್ನು ತಿಳಿಸಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ನೀಟ್‌ ಕೃಪಾಂಕ ನೀಡಿಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಅನೇಕ ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಎಲ್ಲಾ ಅರ್ಜಿಗಳನ್ನು ಜುಲೈ 8 ರಂದು ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್‌ ತಿಳಿಸಿದೆ.
ಪರೀಕ್ಷೆ ಬರೆಯಲು ಕಡಿಮೆ ಕಾಲಾವಕಾಶ ದೊರೆತ ಎಲ್ಲಾ 1,563 ಅಭ್ಯರ್ಥಿಗಳಿಗೆ ಮರು ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಅವರು ಮರುಪರೀಕ್ಷೆ ತೆಗೆದುಕೊಂಡರೆ ಈ ಹಿಂದೆ ಅವರು ಪಡೆದ ಅಂಕ ರದ್ದಾಗುತ್ತದೆ ಹಾಗೂ ಅದರ ಬದಲಿಗೆ ಮರುಪರೀಕ್ಷೆಯ ಅಂಕಗಳು ಅವರಿಗೆ ದೊರೆಯಲಿವೆ ಎಂದು ಗುರುವಾರ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತು.

ಪ್ರಮುಖ ಸುದ್ದಿ :-   ಸೋನಂ ವಾಂಗ್ಚುಕ್ ಉಪವಾಸ ಅಂತ್ಯಗೊಳಿಸಲು ಸಿದ್ಧ ಎಂದ ಪತ್ನಿ ; ಆದರೆ ಅದಕ್ಕೆ ಎರಡು ಷರತ್ತುಗಳು...

ಬುಧವಾರ (ಜೂನ್ 12) ನಡೆದ ಸಮಿತಿ ಸಭೆಯ ನಂತರ ಈ ಸಲಹೆ ನೀಡಲಾಗಿದೆ ಎಂದು ನ್ಯಾಯಮೂರ್ತಿಗಳಾದ ವಿಕ್ರಂನಾಥ ಮತ್ತು ಸಂದೀಪ ಮೆಹ್ತಾ ಅವರಿದ್ದ ಪೀಠಕ್ಕೆ ತಿಳಿಸಲಾಯಿತು. ಜೂನ್ 23 ರಂದು ಮರು ಪರೀಕ್ಷೆ ನಡೆಸಿ ಫಲಿತಾಂಶಗಳನ್ನು ಜೂನ್ 30ರೊಳಗೆ ಪ್ರಕಟಿಸಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ತಿಳಿಸಿದೆ.ಎಂಬಿಬಿಎಸ್, ಬಿಡಿಎಸ್ ಮತ್ತು ಇತರ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಕೌನ್ಸೆಲಿಂಗ್ ಜುಲೈ 6 ರಂದು ಪ್ರಾರಂಭವಾಗಲಿದೆ ಎಂದು ಕೇಂದ್ರ ತಿಳಿಸಿದೆ.
ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ವಕೀಲೆ ಕನು ಅಗರವಾಲ್ ಅವರು, ವಿದ್ಯಾರ್ಥಿಗಳ ಭಯ ಹೋಗಲಾಡಿಸಲು ಸಮಯ ಪೋಲಾಗಿದ್ದಕ್ಕೆ ಕೃಪಾಂಕ ಪಡೆದವರಿಗೆ ಮರುಪರೀಕ್ಷೆ ನಡೆಸುವ ಬಗ್ಗೆ ಜೂನ್ 12ರಂದು ಎನ್‌ಟಿಎ ಸಮಿತಿ ನಿರ್ಧರಿಸಿದೆ ಎಂದು ತಿಳಿಸಿದರು. ಈ ಮರುಪರೀಕ್ಷೆಯನ್ನು ಆರು ಪರೀಕ್ಷಾ ಕೇಂದ್ರಗಳಲ್ಲಿ ಕಡಿಮೆ ಸಮಯಾವಕಾಶ ಪಡೆದು ಕೃಪಾಂಕಕ್ಕೆ ಭಾಜನರಾಗಿದ್ದ 1,563 ವಿದ್ಯಾರ್ಥಿಗಳಿಗೆ ನಡೆಸಲಾಗುತ್ತದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಅರ್ಜಿದಾರ ಅಲಖ ಪಾಂಡೆ ಅವರ ಪರ  ವಕೀಲ ಜೆ ಸಾಯಿ ಅವರು ಹಾಜರಾಗಿದ್ದರು.

ಸುಮಾರು 24 ಲಕ್ಷ ವೈದ್ಯಕೀಯ ಆಕಾಂಕ್ಷಿಗಳು ನೀಟ್‌ ಯುಜಿ (NEET-UG) 2024 – ವೈದ್ಯಕೀಯ ಕೋರ್ಸ್‌ಗಳಿಗೆ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮೇ 5 ರಂದು ನಡೆಸಿತು. ಈ ಬಾರಿ ನೀಟ್‌ ಪರೀಕ್ಷೆ ನಡೆದ 6 ಕೇಂದ್ರದಲ್ಲಿ ತಪ್ಪು ಪ್ರಶ್ನೆ ಪತ್ರಿಕೆಯನ್ನು ವಿತರಿಸಲಾಗಿತ್ತು. ಇದರಿಂದಾಗಿ ಅಭ್ಯರ್ಥಿಗಳು 45 ನಿಮಿಷಗಳನ್ನು ಕಳೆದುಕೊಂಡಿದ್ದರು. ಹೀಗಾಗಿ ಪರೀಕ್ಷೆ ಬರೆಯಲು ಕಡಿಮೆ ಸಮಯ ಸಿಕ್ಕಿದ್ದ ಈ ಕೇಂದ್ರದ ವಿದ್ಯಾರ್ಥಿಗಳಿಗೆ ಎನ್‌ಟಿಎ ಗ್ರೇಸ್‌ಮಾರ್ಕ್‌ ನೀಡಿತ್ತು.
ಈ ಗ್ರೇಸ್‌ ಮಾರ್ಕ್‌ ಪರಿಣಾಮ ದಾಖಲೆಯ 67 ವಿದ್ಯಾರ್ಥಿಗಳು ಮೊದಲ ರ್‍ಯಾಂಕ್‌ ಪಡೆದಿದ್ದರು. ಈ ಪೈಕಿ ಬಹುತೇಕರು, ಮೇಘಾಲಯ, ಹರ್ಯಾಣದ ಬಹದುರ್ಗಾ, ಛತ್ತೀಸ್‌ಗಢ ದಂತೇವಾಡಾ, ಬಲ್ಡೋಹ್‌, ಗುಜರಾತ್‌ನ ಸೂರತ್‌ ಮತ್ತು ಚಂಡೀಗಢದ ಪರೀಕ್ಷಾ ಕೇಂದ್ರಗಳಿಗೆ ಸೇರಿದವರಾಗಿದ್ದಾರೆ. ಜೊತೆಗೆ ಅನುಕ್ರಮ ಸಂಖ್ಯೆಯಲ್ಲಿ 7 ಅಭ್ಯರ್ಥಿಗಳು ಮೊದಲ ರ್‍ಯಾಂಕ್‌ ಪಡೆದಿದ್ದಾರೆ ಎಂಬುದು ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೇ  ಜೂನ್ 14 ರಂದು ಪ್ರಕಟಿಸಬೇಕಾಗಿದ್ದ ಫಲಿತಾಂಶವನ್ನು ಯಾವುದೇ ಮುನ್ಸೂಚನೆ ನೀಡದೆ ಲೋಕಸಭಾ ಚುನಾವಣೆ ಫಲಿತಾಂಶದ ದಿನ ಜೂನ್‌ 4ರಂದು ಪ್ರಕಟಿಸಲಾಯಿತು ಎಂದು ಹಲವರು ಆಕ್ಷೇಪಿಸಿದ್ದಾರೆ.

ಪ್ರಮುಖ ಸುದ್ದಿ :-   ಸಿಜೆಪಿ ‘ಚಲೋ ಸಂಸತ್’ ಮೆರವಣಿಗೆಗೆ ತಡೆ: ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಪ್ರಯೋಗ, ಲಾಠಿ ಚಾರ್ಜ್‌

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement