ಕಾರವಾರ: ವ್ಯಕ್ತಿಯೊಬ್ಬ ಪೊಲೀಸ್ ಠಾಣೆಯ ಎದುರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ರಾಮನಗರದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಭಾಸ್ಕರ್ ಬೋಂಡೆಲ್ಕರ (36) ಎಂಬಾತನೇ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಈತ ಮದ್ಯದ ಅಮಲಿನಲ್ಲಿ ಈ ರೀತಿ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ ಪಿಎಸ್‌ಐ ನನಗೆ ಮಾನಸಿಕ ಕಿರುಕುಳ ನೀಡುತ್ತಿರುವುದರಿಂದ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಭಾಸ್ಕರ ವೀಡಿಯೊದಲ್ಲಿ ಹೇಳಿಕೊಂಡಿದ್ದಾರೆ. ಪಿಎಸ್ಐ ವಿರುದ್ಧ ವೀಡಿಯೊ ಮಾಡಿರುವ ಭಾಸ್ಕರ, ಜೂಜಾಟದಲ್ಲಿ ಸಿಕ್ಕಿ ಬಿದ್ದಾಗ 3,60,00 ರೂ. ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆದರೆ 36,000 ರೂ. ಎಂದು ಪೊಲೀಸರು ತೋರಿಸಿದ್ದರು. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೂ ದೂರು ಸಲ್ಲಿಸಿದ್ದೆ. ತಾನೀಗ ಚಾಲಕ ವೃತ್ತಿ ನಡೆಸುತ್ತಿದ್ದು, ರಾಮನಗರ ತೆರಳಿದಾಗ ಮತ್ತೆ ಪೊಲೀಸರು ಕಿರುಕುಳ ನೀಡಿದ್ದಾರೆ. ಈ ಕಾರಣದಿಂದ ಆತ್ಮಹತ್ಯೆ ನಡೆಸಲು ಯತ್ನಿಸಿದ್ದೇನೆ ಎಂದು ಭಾಸ್ಕರ ವೀಡಿಯೊದಲ್ಲಿ ಹೇಳಿಕೊಂಡಿದ್ದಾನೆ. ಬೆಂಕಿಯಿಂದ ಗಂಭೀರವಾಗಿ ಗಾಯಗೊಂಡ ಭಾಸ್ಕರನನ್ನು ಬೆಳಗಾವಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ