ಶಿವಮೊಗ್ಗ: ತೈಲ ಬೆಲೆ ಏರಿಕೆ ಖಂಡಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸೋಮವಾರ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿಯ ಹಿರಿಯ ಮುಖಂಡ ಮತ್ತೂರಿನ ಎಂ.ಬಿ.ಭಾನುಪ್ರಕಾಶ ಅವರು ತೀವ್ರವಾಗಿ ಅಸ್ವಸ್ಥಗೊಂಡು ಕುಸಿದುಬಿದ್ದು ಮೃತಪಟ್ಟಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು.
ಗೋಪಿ ಸರ್ಕಲ್‌ನಲ್ಲಿ ಸೋಮವಾರ ನಡೆದ ಬಿಜೆಪಿ ಪ್ರತಿಭಟನೆ ಕಾರ್ಯಕ್ರಮದ ನಂತರ ಭಾನುಪ್ರಕಾಶ ಅವರಿಗೆ ಹೃದಯಾಘಾತವಾಗಿದೆ. ಅವರು ಅಲ್ಲಿಯೇ ಕುಸಿದುಬಿದ್ದಿದ್ದಾರೆ. ಅವರನ್ನು ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಭಾನುಪ್ರಕಾಶ ಅವರು ಪತ್ನಿ, ಪುತ್ರ ಹಾಗೂ ಅಪಾರ ಹಿತೈಷಿಗಳು ಹಾಗೂ ಬೆಂಬಲಿಗರನ್ನು ಅಗಲಿದ್ದಾರೆ.
ತೈಲ ಬೆಲೆ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ಶವ ಯಾತ್ರೆ ನಡೆಸಿದ ಸ್ಥಳೀಯ ಬಿಜೆಪಿ ಮುಖಂಡರು ಕುಳಿತು ನಂತರ ಭಜನೆ ಹಾಡುತ್ತಿದ್ದರು. ಕಾರ್ಯಕ್ರಮದಲ್ಲಿ ಭಾಷಣ ಕೂಡ ಮಾಡಿದ್ದ ಅವರು, ಕೊನೆಯಲ್ಲಿ ಎಲ್ಲರೂ ಕುಳಿತು ಭಜನೆ ಮಾಡುವ ವೇಳೆ ಅಸ್ವಸ್ಥಗೊಂಡು ಕುಸಿದು ಬಿದ್ದರು ಎಂದು ಹೇಳಲಾಗಿದೆ. ತಕ್ಷಣವೇ ಅವರನ್ನು ಸಮೀಪದ ಮ್ಯಾಕ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ತೀವ್ರ ಹೃದಯಾಘಾತದಿಂದ ಭಾನುಪ್ರಕಾಶ ಸಾವಿಗೀಡಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
2009ರಲ್ಲಿ ಜಿಲ್ಲಾ ಪಂಚಾಯತ ಸದಸ್ಯರಾಗಿದ್ದ ಅವರು, 2013-19 ರವರೆಗೆ ವಿಧಾನ ಪರಿಷತ್ ಸದಸ್ಯರಾಗಿದ್ದರು. ಪಕ್ಷ ಸಂಘಟನೆಯಲ್ಲಿ ಅವರು ಅವಿರತವಾಗಿ ಶ್ರಮಿಸಿದ್ದು, ಪಕ್ಷ ನೀಡಿದ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು.
ಗಾಜನೂರು ಜಿ.ಪಂ. ಕ್ಷೇತ್ರದಿಂದ ಭಾನುಪ್ರಕಾಶ ಅವರು 2001ರಿಂದ 2005ರ ಅವಧಿಯಲ್ಲಿ ಜಿಪಂ ಸದಸ್ಯರಾಗಿದ್ದರು. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಬಿಜೆಪಿ ತೊರೆದು ಸಮಾಜವಾದಿ ಪಕ್ಷದಿಂದ ಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ಸ್ಪರ್ಧಿಸಿದ್ದಾಗ ಬಿಜೆಪಿಯಿಂದ ಅವರಿಗೆ ಎದುರಾಳಿಯಾಗಿ ಸ್ಪರ್ಧೆ ಮಾಡಿದ್ದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಟ್ಟಾ ಅನುಯಾಯಿಯಾಗಿದ್ದ ಭಾನುಪ್ರಕಾಶ, ತಮ್ಮ ಮಾತುಗಾರಿಕೆ, ಸರಳತೆಯಿಂದಲೇ ಗುರುತಿಸಿಕೊಂಡವರು.
ನಿಮ್ಮ ಕಾಮೆಂಟ್ ಬರೆಯಿರಿ