ಹಾಸನ : ಹಾಸನದಲ್ಲಿ (Hassan) ಹಾಡಹಗಲೇ ಗುಂಡಿನ (Shooting) ದಾಳಿ ನಡೆದಿದ್ದು ಗುಂಡೇಟಿಗೆ ಇಬ್ಬರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಹಾಸನದ ಹೊಯ್ಸಳ ನಗರ ಬಡಾವಣೆಯಲ್ಲಿ ಗುರುವಾರ ಗುಂಡಿನ ದಾಳಿ ನಡೆದಿದ್ದು, ವ್ಯಕ್ತಿಯೊಬ್ಬನ ಹತ್ಯೆ ಮಾಡಿ ಮತ್ತೊಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಹಾಸನದ ಹೊಯ್ಸಳ ನಗರ ಬಡಾವಣೆಯಲ್ಲಿ ಗುರುವಾರ ಗುಂಡಿನ ಸದ್ದು ಕೇಳಿಬಂದ ನಂತರ ಇಬ್ಬರು ಸಾವಿಗೀಡಾಗಿದ್ದಾರೆ. ಒಬ್ಬರ ಶವ ಕಾರಿನ ಒಳಗೆ ಕಂಡುಬಂದರೆ ಮತ್ತೊಬ್ಬರ ಶವ ಕಾರಿನ ಹೊರಗಡೆ ಮತ್ತೊಂದು ಶವ ಪತ್ತೆಯಾಗಿದೆ. ಹಾಸನದ ಕೆಆರ್ ಪುರಂ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಅಪರಿಚಿತರು ಖಾಲಿ ಸ್ಥಳದಲ್ಲಿ ಕಾರನ್ನು ನಿಲ್ಲಿಸಿ ಸುಮಾರು ಅರ್ಧ ತಾಸು ಮಾತನಾಡಿದ್ದಾರೆ. ನಂತರ, ಏಕಾಏಕಿ ಕಾರಿನ ಬಳಿ ಬಂದೂಕಿನಿಂದ ಫೈರಿಂಗ್ ಮಾಡಿದ ಸದ್ದು ಕೇಳಿಬಂದಿದೆ ಎಂದು ಹೇಳಲಾಗಿದ್ದು, ಬಂದೂಕಿನಿ ಶಬ್ದ ಕೇಳಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಾಸನದ ಕೆ.ಆರ್. ಪುರಂ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ.
ಸ್ಥಳಕ್ಕೆ ಎಸ್ಪಿ ಮೊಹಮ್ಮದ್ ಸುಜೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು, ಎಫ್ಎಸ್ಎಲ್ ತಜ್ಞರು ಸಹ ಪರಿಶೀಲನೆ ನಡೆಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ನೀಡಿದ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಜೀತಾ ಅವರು, ಘಟನೆಯನ್ನು ನೋಡಿದರೆ ಓರ್ವ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿ ಮತ್ತೋರ್ವ ಆತ್ಮಹತ್ಯೆ ಮಾಡಿಕೊಂಡಿರಬಹುದು. ಇಂದು ಮಧ್ಯಾಹ್ನ 12:30ರ ಸುಮಾರಿಗೆ ಘಟನೆ ಸಂಭವಿಸಿದೆ.ಇದು ಆಸ್ತಿ ಸಂಬಂಧ ನಡೆದಿರಬಹುದು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
ಘಟನಾ ಸ್ಥಳದಲ್ಲಿದ್ದ ಕಾರು ಮೈಸೂರು ಮೂಲದ್ದು ಎಂಬ ಮಾಹಿತಿ ಸಿಕ್ಕಿದೆ. ಮೃತ ವ್ಯಕ್ತಿಗಳ ಮಾಹಿತಿ ತಿಳಿದುಬರಬೇಕಿದೆ. ಕಾರಿನ ಹೊರಗಿರುವ ಶವದ ತಲೆಯಲ್ಲಿ ಗಾಯದ ಗುರುತು ಪತ್ತೆಯಾಗಿದೆ. ಸೈಟ್ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಆಗಿರುವ ಶಂಕೆ ಇದೆ. ಆದರೆ, ವಾಸ್ತವ ಏನೆಂಬುದು ತನಿಖೆಯ ನಂತರ ತಿಳಿಯಬೇಕಿದೆ ಎಂದು ಮೊಹಮ್ಮದ್ ಸುಜೀತಾ ತಿಳಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ