ಮನೆ ಕೆಲಸಗಾರರ ಶೋಷಣೆ ಪ್ರಕರಣ: ಬಿಲಿಯನೇರ್ ಹಿಂದುಜಾ ಕುಟುಂಬದ ನಾಲ್ವರಿಗೆ 4 ವರ್ಷಗಳ ಜೈಲು ಶಿಕ್ಷೆ

ಜಿನೀವಾ ಭವನದಲ್ಲಿ ಭಾರತೀಯ ಸಿಬ್ಬಂದಿಯನ್ನು ಶೋಷಣೆ ಮಾಡಿದ ಪ್ರಕರಣದಲ್ಲಿ ಬ್ರಿಟನ್‌ನ ಶ್ರೀಮಂತ ಕುಟುಂಬವಾದ ಹಿಂದೂಜಾ ಕುಟುಂಬದ ನಾಲ್ವರಿಗೆ ಸ್ವಿಸ್ ನ್ಯಾಯಾಲಯ ಶುಕ್ರವಾರ ಜೈಲು ಶಿಕ್ಷೆ ವಿಧಿಸಿದೆ.
ಶಿಕ್ಷೆ ಪ್ರಕಟಿಸುವ ವೇಳೆ ಹಿಂದೂಜಾಗಳು ನ್ಯಾಯಾಲಯದಲ್ಲಿ ಹಾಜರಿರಲಿಲ್ಲ. ಅವರು ಮಾನವ ಕಳ್ಳಸಾಗಣೆ ಆರೋಪದಿಂದ ಖುಲಾಸೆಗೊಂಡರು, ಆದರೆ ಸಿಬ್ಬಂದಿಯನ್ನು ದುರ್ಬಳಕೆ ಮಾಡಿಕೊಂಡ ಪ್ರಕರಣದಲ್ಲಿ ಶಿಕ್ಷೆ ವಿಧಿಸಲಾಯಿತು.
37 ಶತಕೋಟಿ ಪೌಂಡ್ ($47 ಶತಕೋಟಿ) ಎಂದು ಅಂದಾಜಿಸಲಾದ ಸಂಪತ್ತು ಹೊಂದಿರುವ ಕುಟುಂಬದ ಪ್ರಕಾಶ ಹಿಂದುಜಾ ಮತ್ತು ಅವರ ಪತ್ನಿ ಕಮಲ್ ಹಿಂದುಜಾ ಅವರಿಗೆ ತಲಾ ನಾಲ್ಕು ವರ್ಷ ಮತ್ತು ಆರು ತಿಂಗಳು, ಅವರ ಪುತ್ರ ಅಜಯ ಮತ್ತು ಅವರ ಪತ್ನಿ ನಮ್ರತಾ ಅವರಿಗೆ ನಾಲ್ಕು ವರ್ಷಗಳ ಶಿಕ್ಷೆ ನೀಡಲಾಗಿದೆ ಎಂದು ಜಿನೀವಾದಲ್ಲಿ ನ್ಯಾಯಾಧೀಶರು ತೀರ್ಪು ನೀಡಿದರು.

ಭಾರತದಿಂದ ಸೇವಕ ಸಿಬ್ಬಂದಿಯನ್ನು ಕರೆತರುವ ಕುಟುಂಬದ ಅಭ್ಯಾಸದಿಂದ ಈ ಪ್ರಕರಣಗಳು ಬಂದಿವೆ. ಮತ್ತು ಇದು ಸೇವಕ ಸಿಬ್ಬಂದಿ ಕೆಲಸಕ್ಕೆಂದು ಸ್ವಿಟ್ಜರ್ಲೆಂಡ್‌ಗೆ ಹೋದ ನಂತರ ಅವರ ಪಾಸ್‌ಪೋರ್ಟ್‌ಗಳನ್ನು ತಮ್ಮ ವಶಕ್ಕೆ ಪಡೆದುಕೊಂಡ ಆರೋಪಗಳನ್ನು ಒಳಗೊಂಡಿತ್ತು. ಹಿಂದೂಜಾಗಳು ತಮ್ಮ ಸಿಬ್ಬಂದಿಗೆ ಅತ್ಯಲ್ಪ ವೇತನವನ್ನು ನೀಡುತ್ತಾರೆ ಮತ್ತು ಮನೆಯಿಂದ ಹೊರಬರಲು ಅವರಿಗೆ ಸರಿಯಾದ ಸ್ವಾತಂತ್ರ್ಯ ನೀಡಲಾಗಿಲ್ಲ ಎಂದು ಪ್ರಾಸಿಕ್ಯೂಟರ್‌ಗಳು ವಾದಿಸಿದರು.
ಕುಟುಂಬವು ಆರೋಪಗಳನ್ನು ನಿರಾಕರಿಸಿತು. ಹಿಂದೂಜಾಗಳು ತಮ್ಮ ವಿರುದ್ಧ ಆರೋಪ ಮಾಡಿದ ಮೂವರು ಉದ್ಯೋಗಿಗಳೊಂದಿಗೆ ನ್ಯಾಯಾಲಯದ ಹೊರಗೆ ಗೌಪ್ಯವಾಗಿ ಒಪ್ಪಂದ ಮಾಡಿಕೊಂಡರು. ಇದರ ಹೊರತಾಗಿಯೂ, ಆರೋಪಗಳ ಗಂಭೀರತೆಯಿಂದಾಗಿ ಪ್ರಕರಣವನ್ನು ಮುಂದುವರಿಸಲು ಪ್ರಾಸಿಕ್ಯೂಷನ್ ನಿರ್ಧರಿಸಿತು.
ಜಿನೀವಾ ಪ್ರಾಸಿಕ್ಯೂಟರ್ ಯೆವ್ಸ್ ಬರ್ಟೋಸಾ ಅವರು ಪ್ರಕಾಶ ಮತ್ತು ಕಮಲ ಹಿಂದುಜಾ ವಿರುದ್ಧ ಐದೂವರೆ ವರ್ಷಗಳ ಕಸ್ಟಡಿ ಶಿಕ್ಷೆಯನ್ನು ಕೋರಿದ್ದರು. ಅವರು ಕ್ರಮವಾಗಿ 78 ಮತ್ತು 75 ವರ್ಷ ವಯಸ್ಸಿನವರು, ಇಬ್ಬರೂ ಆರೋಗ್ಯದ ಕಾರಣಗಳಿಗಾಗಿ ವಿಚಾರಣೆಯ ಪ್ರಾರಂಭದಿಂದಲೂ ಗೈರುಹಾಜರಾಗಿದ್ದರು.

ಪ್ರಮುಖ ಸುದ್ದಿ :-   ಕಾಂಗ್ರೆಸ್ ತೊರೆದವರನ್ನು 'ಹೇಡಿಗಳು' ಎಂದು ಕರೆದ ರಾಹುಲ್ ಗಾಂಧಿ ; ಅವರೆಲ್ಲ ನಿಮ್ಮ ಸ್ನೇಹಿತರಾಗಿದ್ರು ಎಂದು ಕಾಲೆಳೆದ ಖರ್ಗೆ !

ಮನೆಯ ಸಿಬ್ಬಂದಿಗೆ ತಿಂಗಳಿಗೆ 220 ಮತ್ತು 400 ಫ್ರಾಂಕ್‌ಗಳ ($250-450) ನಡುವೆ ವೇತನವನ್ನು ನೀಡಲಾಗುತ್ತಿತ್ತು, ಇದು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಅವರು ಗಳಿಸುವ ನಿರೀಕ್ಷೆಗಿಂತ ತೀರಾ ಕಡಿಮೆ.
ಆದರೆ ಹಿಂದೂಜಾ ಕುಟುಂಬದ ಪರ ವಕೀಲರು ಮೂರು ಫಿರ್ಯಾದಿಗಳು ಸಾಕಷ್ಟು ಪ್ರಯೋಜನಗಳನ್ನು ಪಡೆದಿದ್ದಾರೆ, ಅವರನ್ನು ಪ್ರತ್ಯೇಕವಾಗಿ ಇರಿಸಲಾಗಿಲ್ಲ ಮತ್ತು ವಿಲ್ಲಾ ಬಿಡಲು ಸ್ವತಂತ್ರರಾಗಿದ್ದರು ಎಂದು ವಾದಿಸಿದರು.
“ನಾವು ದೌರ್ಜನ್ಯಕ್ಕೊಳಗಾದ ಗುಲಾಮರೊಂದಿಗೆ ವ್ಯವಹರಿಸುತ್ತಿಲ್ಲ” ಎಂದು ನಿಕೋಲಸ್ ಜೆಂಡಿನ್ ನ್ಯಾಯಾಲಯಕ್ಕೆ ತಿಳಿಸಿದರು.
ವಾಸ್ತವವಾಗಿ, ಉದ್ಯೋಗಿಗಳು “ಉತ್ತಮ ಜೀವನವನ್ನು ನೀಡಿದ್ದಕ್ಕಾಗಿ ಹಿಂದೂಜಾಗಳಿಗೆ ಕೃತಜ್ಞರಾಗಿದ್ದರು” ಎಂದು ಅವರ ಸಹ ವಕೀಲ ರಾಬರ್ಟ್ ಅಸ್ಸೇಲ್ ವಾದಿಸಿದರು. “ಯಾವುದೇ ಉದ್ಯೋಗಿಗೆ ಸಂಬಳದಲ್ಲಿ ವಂಚನೆ ಮಾಡಿಲ್ಲ. ಕೆಲವು ಸಿಬ್ಬಂದಿ ಹೆಚ್ಚಿಸುವಂತೆ ಕೇಳಿದ್ದರು, ಅವರು ಅದನ್ನು ಪಡೆದಿದ್ದಾರೆ ಎಂದು ಅವರು ಹೇಳಿದರು.
ಅಜಯ ಹಿಂದುಜಾ ಅವರನ್ನು ಪ್ರತಿನಿಧಿಸಿದ ವಕೀಲ ಯೇಲ್ ಹಯಾತ್ ಅವರು “ಅತಿಯಾದ” ದೋಷಾರೋಪಣೆಯನ್ನು ಟೀಕಿಸಿದರು, ವಿಚಾರಣೆಯು “ನ್ಯಾಯ, ಸಾಮಾಜಿಕ ನ್ಯಾಯದ ಪ್ರಶ್ನೆಯಲ್ಲ” ಎಂದು ವಾದಿಸಿದರು.
ನಮ್ರತಾ ಹಿಂದುಜಾ ಅವರ ವಕೀಲರಾದ ರೊಮೈನ್ ಜೋರ್ಡಾನ್ ಕೂಡ ಖುಲಾಸೆಗಾಗಿ ಮನವಿ ಮಾಡಿದರು.
ತೈಲ ಮತ್ತು ಅನಿಲ, ಬ್ಯಾಂಕಿಂಗ್ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಹಿಂದೂಜಾ ಗ್ರೂಪ್ 38 ದೇಶಗಳಲ್ಲಿ ಅಸ್ತಿತ್ವದಲ್ಲಿದೆ ಮತ್ತು ಸುಮಾರು 2,00,000 ಸಿಬ್ಬಂದಿಯನ್ನು ನೇಮಿಸಿಕೊಂಡಿದೆ.

ಪ್ರಮುಖ ಸುದ್ದಿ :-   ಮಾಜಿ ಉಪಪ್ರಧಾನಿ ಎಲ್.ಕೆ. ಅಡ್ವಾಣಿ ಆಸ್ಪತ್ರೆಗೆ ದಾಖಲು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement