ಬೆಂಗಳೂರು : ಕನ್ನಡದ ಖ್ಯಾತ ಸಾಹಿತಿ, ನಾಡೋಜಾ ಡಾ. ಕಮಲ ಹಂಪನಾ ಅವರು ಶನಿವಾರ (ಜೂನ್ 22) ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.
ಕಮಲ ಹಂಪನಾ ಅವರು ಪತಿ, ಖ್ಯಾತ ಸಾಹಿತಿ ಹಂಪ ನಾಗರಾಜಯ್ಯ, ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಸಾಹಿತ್ಯಾಭಿಮಾನಿಗಳನ್ನು ಅಗಲಿದ್ದಾರೆ.
ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿ ಇರುವ ದೂರದರ್ಶನ ನಿರ್ದೇಶಕರಾಗಿರುವ ತಮ್ಮ ಮಗಳು ಎಚ್.ಎನ್.ಆರತಿ ಅವರ ಡಾಲರ್ಸ್ ಕಾಲೊನಿಯಲ್ಲಿನ ಮನೆಯಲ್ಲಿ ವಾಸವಿದ್ದರು. ರಾತ್ರಿ 10 ಗಂಟೆ ವೇಳೆಗೆ ಹೃದಯಾಘಾತ ಆಗಿತ್ತು. ಎಂಎಸ್ ರಾಮಯ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ತಮ್ಮ ಮಗಳ ಮನೆಯಲ್ಲಿ ವಾಸವಿದ್ದರು. ಶುಕ್ರವಾರ ರಾತ್ರಿ 10 ಗಂಟೆ ವೇಳೆಗೆ ಅವರಿಗೆ ಹೃದಯಾಘಾತವಾಗಿತ್ತು. ಅವರನ್ನು ತಕ್ಷಣವೇ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾಜಾಜಿನಗರದಲ್ಲಿರುವ ಅವರ ನಿವಾಸದಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ 10ರಿಂದ ಸಂಜೆಯ ತನಕ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕಮಲಾ ಹಂಪನಾ ಅವರು ತಮ್ಮ ದೇಹವನ್ನು ರಾಮಯ್ಯ ಆಸ್ಪತ್ರೆಗೆ ದಾನ ಮಾಡಿದ್ದಾರೆ.
ಬೆಂಗಳೂರಿನ ದೇವನಹಳ್ಳಿಯಲ್ಲಿ 1935ರ ಅಕ್ಟೋಬರ್ 28ರಂದು ಸಿ. ರಂಗಧಾಮ ನಾಯಕ್ ಮತ್ತು ಲಕ್ಷಮ್ಮ ದಂಪತಿ ಪುತ್ರಿಯಾಗಿ ಕಮಲಾ ಹಂಪನಾ ಜನಿಸಿದರು. ತುಮಕೂರು ಮತ್ತು ಮೈಸೂರಿನಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿ 1956ರಲ್ಲಿ ಕನ್ನಡ ಅಧ್ಯಾಪಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದರು. ಬೆಂಗಳೂರು ಮತ್ತು ಮೈಸೂರು ಮಹಾರಾಣಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ಬೆಂಗಳೂರಿನ ವಿಜಯನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ. ನಿವೃತ್ತರಾದ ಮೇಲೆ ಮೈಸೂರು ವಿಶ್ವವಿದ್ಯಾಲಯ, ಹಂಪಿ ಕನ್ನಡ ವಿಶ್ವವಿದ್ಯಾನಿಲಯಗಳಲ್ಲಿಯೂ ಸೇವೆ ಸಲ್ಲಿಸಿದ್ದರು. ಕಮಲಾ ಹಂಪನಾ ಅವರು 60 ವರ್ಷಗಳಕಾಲ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಮಾಡಿದ್ದಾರೆ.
ಕಮಲಾ ಹಂಪನಾ ಅವರ 60ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ. ಅವರ ಸಮಗ್ರ ಸಾಹಿತ್ಯವನ್ನು ಒಳಗೊಂಡ ಒಂಬತ್ತು ಬೃಹತ್ ಸಂಪುಟಗಳು ಹೊರಬಂದಿವೆ. ಸಂಶೋಧನೆ ಅವರ ಮೊದಲ ಆಯ್ಕೆ. ನಾಟಕ, ಕತೆಗಳು ಮತ್ತು ವಚನಗಳನ್ನು ಬರೆದಿದ್ದಾರೆ. ನಕ್ಕಿತು ಹಾಲಿನ ಬಟ್ಟಲು, ರೆಕ್ಕೆ ಮುರಿದಿತ್ತು, ಚಂದನಾ, ಬಣವೆ, ಸಂಶೋಧನಾ ಕೃತಿಗಳಾದ ತುರಂಗ ಭಾರತ – ಒಂದು ಅಧ್ಯಯನ, ಶಾಂತಿನಾಥ, ಆದರ್ಶ ಜೈನ ಮಹಿಳೆಯರು, ಅನೇಕಾಂತವಾದ, ನಾಡು ನುಡಿ ನಾವು, ಜೈನ ಸಾಹಿತ್ಯ ಪರಿಸರ, ಬದ್ದವಣ, ರೋಣದ ಬಸದಿ ಸೇರಿ ಹಲವು ಕಥಾ ಕವನ ಸಂಕಲನಗಳು, ಶಿಶು ಸಾಹಿತ್ಯ, ಅನುವಾದಗಳು, ಕಾದಂಬರಿಗಳನ್ನು ಕನ್ನಡ ಸಾಹಿತ್ಯ ಪ್ರಿಯರಿಗಾಗಿ ಕೊಡುಗೆ ನೀಡಿದ್ದಾರೆ.ಬಿಂದಲಿ, ಬುಗುಡಿ ಹಾಗೂ ಬಯಲು ಇವು ಆಧುನಿಕ ವಚನಗಳಿರುವ ಸಂಕಲನಗಳು. ಇವಲ್ಲದೆ Attimabbe and Chalukyas, ಹಾಗೂ Jainism and Other Essays- ಎಂಬ ಎರಡು ಇಂಗ್ಲಿಷ್ ಪುಸ್ತಕಗಳನ್ನು ರಚಿಸಿದ್ದಾರೆ.
2003 ರಲ್ಲಿ ಮೂಡುಬಿದರೆಯಲ್ಲಿ ನಡೆದ 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸರ್ಕಾರದ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯವು ಕೊಡುವ ನಾಡೋಜ ಪ್ರಶಸ್ತಿ ಇವೇ ಮೊದಲಾದ ಪ್ರಶಸ್ತಿಗಳು ಸಂದಿವೆ.
ನಿಮ್ಮ ಕಾಮೆಂಟ್ ಬರೆಯಿರಿ