ಹಾಸನ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ವಿರುದ್ಧ ಎಸ್ಪಿಗೆ ದೂರು ನೀಡಲು ಬಂದ ಪತ್ನಿಯನ್ನೇ ಪೊಲೀಸ್ ಕಾನ್‌ಸ್ಟೆಬಲ್ ಓರ್ವ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲೇ ನಡೆದಿದೆ ಎಂದು ವರದಿಯಾಗಿದೆ.
ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಹಾಸನ ನಗರ ಠಾಣೆಯ ಕಾನ್‌ಸ್ಟೆಬಲ್ ಲೋಕನಾಥ ಎಂಬಾತ ತಮ್ಮ ಪತ್ನಿ ಮಮತಾ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಲೋಕನಾಥ ಮತ್ತು ಮಮತಾ ಮಧ್ಯೆ 4-5 ದಿನಗಳಿಂದ ಜಗಳ ನಡೆದಿತ್ತು. ಇಂದು, ಸೋಮವಾರ ತಮ್ಮ ಪತಿ ವಿರುದ್ಧ ದೂರು ನೀಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಪತ್ನಿ ಮಮತಾ ಬಂದಿದ್ದಾರೆ. ಪತ್ನಿ ತನ್ನ ವಿರುದ್ಧ ದೂರು ನೀಡಲು ಬರುತ್ತಿರುವುದನ್ನು ಗೊತ್ತಾಗಿ ಕಾನ್‌ಸ್ಟೆಬಲ್ ಲೋಕನಾಥ ಆವರಣದಲ್ಲೇ ಮಮತಾ ಎದೆಗೆ ಚೂರಿ ಇರಿದಿದ್ದಾನೆ. ಅಲ್ಲಿದ್ದವರು ತಕ್ಷಣವೇ ಮಮತಾ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಪತ್ನಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಲೋಕನಾಥನನ್ನು ಪೊಲೀಸರು ಬಂಧಿಸಿದ್ದಾರೆ.
ಲೋಕನಾಥ ಹಾಗೂ ಮಮತಾಗೆ 17 ವರ್ಷಗಳ ಹಿಂದೆ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ದಂಪತಿ ಆಗಾಗ್ಗೆ ಜಗಳವಾಡುತ್ತಿದ್ದರು ಮತ್ತು ಸಂಬಂಧಿಕರು ಅವರ ಸಂಬಂಧ ಜೋಡಿಸಲು ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದರು. ಆದರೆ ಅದು ವಿಫಲವಾಗಿತ್ತು.
ಸೋಮವಾರ ಸಹ ದಂಪತಿ ಭೂವಿವಾದ ಸಂಬಂಧ ಜಗಳವಾಡಿದ್ದು ಜಗಳ ವಿಕೋಪಕ್ಕೆ ತಿರುಗಿ ಇಬ್ಬರೂ ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ. ನಂತರ ಪತಿ ವಿರುದ್ಧ ಜಿಲ್ಲಾ ಪೊಲೀಸ್ ದೂರು ನೀಡಲು ಮಮತಾ ಬಂದಿದ್ದಾರೆ. ವಿಷಯ ಗೊತ್ತಾಗಿ ಲೋಕನಾಥ ಆಕೆಯನ್ನು ಮೋಟಾರ್ ಸೈಕಲ್ ನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಾನೆ.
ಪತ್ನಿ ಎಸ್ ಪಿ ಕಚೇರಿಗೆ ಬಂದ ತಕ್ಷಣ ಆಕೆಯ ಹೊಟ್ಟೆ ಮತ್ತು ಎದೆಗೆ ಇರಿದಿದ್ದಾನೆ ಎಂದು ಹೇಳಲಾಗಿದೆ. ಗಂಭೀರವಾಗಿ ಗಾಯಗೊಂಡ ಮಮತಾ ಅವರನ್ನು ಎಸ್ಪಿ ಕಚೇರಿ ಸಮೀಪವೇ ಹಿಮ್ಸ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಗಂಭೀರವಾಗಿ ಗಾಯಗೊಂಡಿದ್ದ ಮಾರ್ಗ ಮಧ್ಯೆ ಆಕೆ ಕೊನೆಯುಸಿರೆಳೆದಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ