ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಸೋಮವಾರ ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಮ್ಮ ದಿಟ್ಟ ಹೇಳಿಕೆಗಳಿಗೆ ಹೆಸರುವಾಸಿಯಾಗಿರುವ ಶೋಯೆಬ್ ಅಖ್ತರ್ ಅವರು ಭಗವದ್ಗೀತೆಯ ಉಲ್ಲೇಖವನ್ನು ತಮ್ಮ ಇನ್ಸ್ಟಾಗ್ರಾಂ (Instagram)ನಲ್ಲಿ ಹಂಚಿಕೊಂಡಿದ್ದಾರೆ, “ಅನಿಯಂತ್ರಿತ ಮನಸ್ಸಿಗಿಂತ ದೊಡ್ಡ ಶತ್ರು ಇಲ್ಲ (There’s no greater enemy than an uncontrolled mind) ಎಂಬ ಭಗವದ್ಗೀತೆ ಶ್ಲೋಕ ಇಂಗ್ಲಿಷ್‌ನಲ್ಲಿ ಉಲ್ಲೇಖ ಮಾಡಿ ಹಂಚಿಕೊಂಡಿದ್ದಾರೆ. ಶೋಯೆಬ್ ಅಖ್ತರ್ ಅವರ ಪೋಸ್ಟ್ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದ್ದು, ಪ್ರಪಂಚದಾದ್ಯಂತದ ಜನರಿಂದ ಪ್ರತಿಕ್ರಿಯೆಗಳಿಗೆ ಕಾರಣವಾಯಿತು. ಕೆಲವರು ಇದನ್ನು ಬಾರ್ಬಡೋಸ್ ಕೆನ್ಸಿಂಗ್ಟನ್ ಓವಲ್ ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ವಿಶ್ವಕಪ್ ಫೈನಲ್‌ನಲ್ಲಿ ಪ್ರತಿಕೂಲ ಪರಿಸ್ಥಿತಿಯಲ್ಲೂ ತಮ್ಮ ಮನಸ್ಸಿನ ಮೇಲೆ ಹಿಡಿತ ಸಾಧಿಸದ ಭಾರತೀಯ ನಾಯಕ ರೋಹಿತ್ ಶರ್ಮಾಗೆ ಹೊಗಳಿಕೆ ಎಂದು ಭಾವಿಸಿದ್ದಾರೆ. ಪಾಕಿಸ್ತಾನ್ ಕ್ರಿಕೆಟಿಗನ ಈ ಪೋಸ್ಟ್ಗೆ ಭಾರತೀಯ ಕ್ರಿಕೆಟ್ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ, ಅತ್ತ ಪಾಕ್ನ ಕೆಲವರು ತಗಾದೆ ತೆಗೆದಿದ್ದಾರೆ. ಇದಾಗ್ಯೂ ಶೊಯೇಬ್ ಅಖ್ತರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ಈ ಪೋಸ್ಟ್ ಅನ್ನು ಅಳಿಸಿ ಹಾಕಿಲ್ಲ ಎಂಬುದು ವಿಶೇಷ.
ರೋಹಿತ್ ಶರ್ಮಾ ಮತ್ತು ತಂಡದ ನಂತರ ಟೀಮ್ ಇಂಡಿಯಾ 2024 ರ ಟಿ 20 ವಿಶ್ವಕಪ್ ಗೆಲ್ಲುತ್ತದೆ ಎಂದು ಪಾಕಿಸ್ತಾನದ ಸ್ಪೀಡ್ ಐಕಾನ್ ಈ ಹಿಂದೆ ಭವಿಷ್ಯ ನುಡಿದಿದ್ದರು. ಅವರ ಭವಿಷ್ಯ ನಿಜವಾಯಿತು. ಮತ್ತೊಂದು ಪೋಸ್ಟ್‌ನಲ್ಲಿ, ಮೆನ್ ಇನ್ ಬ್ಲೂ ಅನ್ನು ಅಭಿನಂದಿಸುತ್ತಿರುವಾಗ, ಶೋಯೆಬ್ ಅಖ್ತರ್ “ರೋಹಿತ್ ಶರ್ಮಾ ಇದನ್ನು ಮಾಡಿದ್ದಾರೆ. ಭಾರತಕ್ಕೆ ಅರ್ಹವಾದ ಗೆಲುವು” ಎಂದು ಹೇಳಿದ್ದಾರೆ.
ಮತ್ತು ಅಖ್ತರ್ ಅವರ ಭಗವದ್ಗೀತೆ ಉಲ್ಲೇಖದ ಪೋಸ್ಟ್ ಅನೇಕರನ್ನು ಆಶ್ಚರ್ಯಗೊಳಿಸಿದೆ ಏಕೆಂದರೆ ಪ್ರತಿಸ್ಪರ್ಧಿ ರಾಷ್ಟ್ರವಾದ ಪಾಕಿಸ್ತಾನದ ಕ್ರಿಕೆಟ್ ತಾರೆಯಾಗಿದ್ದರೂ ಭಾರತದ ಕ್ರಿಕೆಟ್ ತಂಡವನ್ನು ಹೊಗಳಲು ಎಂದಿಗೂ ಹಿಂಜರಿದಿಲ್ಲ. ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದುಕೊಂಡಿದೆ. ಈ ಗೆಲುವಿನ ಬಳಿಕ ಮಾತನಾಡಿದ್ದ ಅಖ್ತರ್, ಅರ್ಹ ತಂಡಕ್ಕೆ ವಿಶ್ವಕಪ್ ಟ್ರೋಫಿ ಸಂದಿದೆ. ರೋಹಿತ್ ಶರ್ಮಾ ಕೊನೆಗೂ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಅಖ್ತರ್, ಅನಿಯಂತ್ರಿತ ಮನಸ್ಸಿಗಿಂತ ದೊಡ್ಡ ಶತ್ರುವಿಲ್ಲ ಎನ್ನುವ ಭಗವದ್ಗೀತೆಯ ಶ್ಲೋಕ ಉಲ್ಲೇಖ ಮಾಡಿ ತಮ್ಮ ಇನ್ಸ್ಟಾಗ್ರಾಂ (Instagram)ನಲ್ಲಿ ಹಂಚಿಕೊಳ್ಳುವ ಮೂಲಕ ಮತ್ತೆ ಸುದ್ದಿಯಾಗಿರುವುದು ವಿಶೇಷ.
ಆದಾಗ್ಯೂ, ಅಖ್ತರ್ ಅವರ ಪೋಸ್ಟ್‌ನ ಹಿಂದಿನ ಸಂದೇಶವು ಅಸ್ಪಷ್ಟವಾಗಿಯೇ ಉಳಿದಿದೆ, ಆದರೆ ಪಂದ್ಯಾವಳಿಯ ಪ್ರಾರಂಭವಾಗುವುದಕ್ಕಿಂತ ಮೊದಲು ದೊಡ್ಡ ದೊಡ್ಡ ಹೇಳಿಕೆಗಳನ್ನು ನೀಡಿ ನಂತರ ಮೌನವಾಗಿ ಟೂರ್ನಿಯಿಂದ ನಿರ್ಗಮಿಸಿದ ಕೆಲವು ಜನರಿಗೆ ಕನ್ನಡಿ ತೋರಿಸಲು ಅವರು ಬಯಸಿದ್ದರು ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ.
ಪಾಕಿಸ್ತಾನ್ ಪರ 46 ಟೆಸ್ಟ್ ಪಂದ್ಯಗಳನ್ನಾಡಿರುವ ಶೊಯೇಬ್ ಅಖ್ತರ್ 178 ವಿಕೆಟ್ ಕಬಳಿಸಿದ್ದಾರೆ. 163 ಏಕದಿನ ಪಂದ್ಯಗಳಿಂದ 247 ವಿಕೆಟ್ ಪಡೆದರೆ, 15 ಟಿ20 ಪಂದ್ಯಗಳಿಂದ 19 ವಿಕೆಟ್ ಉರುಳಿಸಿದ್ದಾರೆ. ಹಾಗೆಯೇ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತೀ ವೇಗದಲ್ಲಿ ಚೆಂಡೆಸೆದ ವಿಶ್ವ ದಾಖಲೆ ಕೂಡ ಅಖ್ತರ್ ಹೆಸರಿನಲ್ಲಿದೆ. 2002 ರಲ್ಲಿ ನ್ಯೂಝಿಲೆಂಡ್ ವಿರುದ್ದ 161.3 kph ವೇಗದಲ್ಲಿ ಚೆಂಡೆಸೆದು ಶೊಯೇಬ್ ಅಖ್ತರ್ ಈ ವಿಶ್ವ ದಾಖಲೆ ಬರೆದಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ