ಮಹಿಳೆಯರಿಗೆ ಮುಟ್ಟಿನ ರಜೆ : ಮಾದರಿ ನೀತಿ ರೂಪಿಸಲು ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚನೆ

ನವದೆಹಲಿ : ಮಹಿಳಾ ಉದ್ಯೋಗಿಗಳ ಮುಟ್ಟಿನ ರಜೆ ಕುರಿತು ಮಧ್ಯಸ್ಥಗಾರರೊಂದಿಗೆ ಸಮಾಲೋಚನೆ ನಡೆಸಿ ಮಾದರಿ ನೀತಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೋಮವಾರ ನಿರ್ದೇಶನ ನೀಡಿದೆ. ಈ ಸಂಬಂಧ ರಾಜ್ಯ ಸರ್ಕಾರಗಳ ಜತೆ ಸಮಾಲೋಚನೆ ನಡೆಸುವಂತೆಯೂ ಸೂಚಿಸಿದೆ.
ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ಕಡ್ಡಾಯ ರಜೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ ನೇತೃತ್ವದ ತ್ರಿಸದಸ್ಯ ನ್ಯಾಯಪೀಠವು, ಇದು ನೀತಿ ನಿರೂಪಣೆಗೆ ಸಂಬಂಧಿಸಿದ ವಿಷಯವಾಗಿದ್ದು, ನ್ಯಾಯಾಲಯದ ಪರಿಶೀಲನೆಗೆ ಒಳಪಡಿಸುವ ಅಗತ್ಯವಿಲ್ಲ. ಆದಾಗ್ಯೂ ಒಂದೊಮ್ಮೆ ನ್ಯಾಯಾಲಯವು ಈ ರೀತಿ ಕಡ್ಡಾಯ ಮುಟ್ಟಿನ ರಜೆ ನೀಡುವಂತೆ ಆದೇಶ ಹೊರಡಿಸಿದಲ್ಲಿ ಅದು ವ್ಯತಿರಿಕ್ತ ಪರಿಣಾಮ ಬೀರಬಹುದು. ಕಂಪನಿಗಳು ಮಹಿಳಾ ಉದ್ಯೋಗಿಗಳ ನೇಮಕಕ್ಕೆ ಹಿಂದೇಟು ಹಾಕುವ ಆತಂಕವಿದೆ. ಹಾಗಾಗಿ, ಈ ವಿಚಾರದಲ್ಲಿ ಸರ್ಕಾರವೇ ಮಾದರಿ ನೀತಿ ರಚಿಸಲಿ ಎಂದು ಹೇಳಿದೆ. ಇದು ವಾಸ್ತವವಾಗಿ ಸರ್ಕಾರದ ನೀತಿ ಅಂಶವಾಗಿದೆ ಮತ್ತು ನ್ಯಾಯಾಲಯಗಳು ಪರಿಶೀಲಿಸಲು ಅಲ್ಲ ಎಂದು ಡಿವೈ ಚಂದ್ರಚೂಡ ಹೇಳಿದರು.

ದೇಶಾದ್ಯಂತ ಮಹಿಳಾ ವಿದ್ಯಾರ್ಥಿಗಳು ಮತ್ತು ಉದ್ಯೋಗಸ್ಥ ಮಹಿಳೆಯರಿಗೆ ಅವರ ಋತುಚಕ್ರದ ಅವಧಿಯಲ್ಲಿ ಮಾಸಿಕ ರಜೆ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನಗಳನ್ನು ಕೋರಿ ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಯಿತು.
ಮೇ 2023 ರಲ್ಲಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.
ಅರ್ಜಿದಾರ ಶೈಲೇಂದ್ರ ತ್ರಿಪಾಠಿ ಅವರ ಪರ ಹಾಜರಿದ್ದ ವಕೀಲ ರಾಕೇಶ ಖನ್ನಾ ಅವರಿಗೆ ನ್ಯಾಯಪೀಠವು, ”ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕಾರ‍್ಯದರ್ಶಿ ಮತ್ತು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಐಶ್ವರ್ಯ ಭಾಟಿ ಅವರಿಗೆ ಈ ಸಂಬಂಧ ಮನವಿ ಸಲ್ಲಿಸಿ ಎಂದು ಹೇಳಿತು.

ಪ್ರಮುಖ ಸುದ್ದಿ :-   ರೈತರಿಗೆ ಪಿಸ್ತೂಲ್ ತೋರಿಸಿದ ವೀಡಿಯೊ ವೈರಲ್‌ ; ವಿವಾದಿತ ಟ್ರೇನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ ತಾಯಿ ಬಂಧನ

ಅಲ್ಲದೆ, ಕಾರ‍್ಯದರ್ಶಿಗಳು ಈ ಸಂಬಂಧ ರಾಜ್ಯಗಳ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ, ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿತು. ಕಾರ್ಯದರ್ಶಿಯು ಈ ವಿಷಯವನ್ನು ನೀತಿ ಮಟ್ಟದಲ್ಲಿ ಪರಿಶೀಲಿಸಬೇಕು; ಎಲ್ಲ ಮಧ್ಯಸ್ಥಗಾರರನ್ನು ಸಂಪರ್ಕಿಸಿದ ನಂತರ ನಿರ್ಧಾರ ತೆಗೆದುಕೊಳ್ಳಬೇಕು ಮತ್ತು ಮಾದರಿ ನೀತಿಯನ್ನು ರೂಪಿಸಬಹುದೇ ಎಂದು ನೋಡಬೇಕು” ಎಂದು ಡಿ.ವೈ. ಚಂದ್ರಚೂಡ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ, ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಐಶ್ವರ್ಯಾ ಭಾಟಿಗೆ ಹೇಳಿದರು.
ಶೈಲೇಂದ್ರ ಮಣಿ ತ್ರಿಪಾಠಿ ಅವರ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತು, ಇದು ಸರ್ಕಾರಿ ವಿಷಯ ಎಂದು ಹೇಳಿತು.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement