ಟಿ20 ವಿಶ್ವಕಪ್ ಗೆಲುವಿಗೆ ನೀಡಿದ್ದ 2.5 ಕೋಟಿ ರೂ. ಬೋನಸ್‌ ನಿರಾಕರಿಸಿದ ದ್ರಾವಿಡ್ ; ಯಾಕೆಂದು ಗೊತ್ತಾದ್ರೆ ನೀವು ಫ್ಯಾನ್‌ ಆಗ್ತೀರಾ..!

ನವದೆಹಲಿ: ಭಾರತದ ನಿರ್ಗಮಿತ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು 2024 ರ ಟಿ 20 ವಿಶ್ವಕಪ್ ಗೆಲುವಿಗೆ ತಂಡವನ್ನು ಮುನ್ನಡೆಸಿದ್ದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯಿಂದ ನೀಡಲಾಗಿದ್ದ ಹೆಚ್ಚುವರಿ 2.5 ಕೋಟಿ ರೂ. ಬೋನಸ್ ಅನ್ನು ಬಿಸಿಸಿಐಗೆ ಹಿಂದಿರುಗಿಸಿದ್ದಾರೆ ಎಂದು ವರದಿಯಾಗಿದೆ.
ಸಮಾನ ಹಂಚಿಕೆಗೆ ಒತ್ತು ನೀಡುವ ಮೂಲಕ ದ್ರಾವಿಡ್ ತನ್ನ ಸಹಾಯಕ ಸಿಬ್ಬಂದಿಗೆ ನಿಗದಿಪಡಿಸಿದ ಅದೇ 2.5 ಕೋಟಿ ರೂ. ಬೋನಸ್ ಅನ್ನು ಮಾತ್ರ ಸ್ವೀಕರಿಸಲು ನಿರ್ಧರಿಸಿದರು. ಹಾಗೂ ಹೆಚ್ಚುವರಿಯಾಗಿ ತಮಗೆ ನೀಡಲಾಗಿದ್ದ 2.5 ಕೋಟಿ ರೂ.ಗಳನ್ನು ಹಿಂದಿರುಗಿಸಿದ್ದಾರೆ.
ಆರಂಭದಲ್ಲಿ, ಬಿಸಿಸಿಐ ದ್ರಾವಿಡ್‌ಗೆ 5 ಕೋಟಿ ರೂ. ಬೋನಸ್ ಅನ್ನು ನಿಗದಿಪಡಿಸಿತ್ತು. ಇದು ಭಾರತದ ತಂಡದ ಆಟಗಾರರಿಗೆ ನೀಡಲಾಗುವ ಬೋನಸ್‌ಗೆ ಸಮನಾಗಿದೆ. ಆದಾಗ್ಯೂ, ಬ್ಯಾಟಿಂಗ್ ಕೋಚ್ ವಿಕ್ರಮ ರಾಥೋಡ್, ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ, ಫೀಲ್ಡಿಂಗ್ ಕೋಚ್ ಟಿ ದಿಲೀಪ ಸೇರಿದಂತೆ ಇತರ ಸಹಾಯಕ ಸಿಬ್ಬಂದಿಗೆ 2.5 ಕೋಟಿ ರೂ.ಗಳನ್ನು ನಿಗದಿಪಡಿಸಿತ್ತು. ಇವರಿಗೆ ಹೋಲಿಸಿದರೆ ದ್ರಾವಿಡ್‌ ಅವರಿಗೆ ನಿಗದಿಪಡಿಸಿದ ಹಣ ಎರಡು ಪಟ್ಟು ಹೆಚ್ಚಾಗಿದ್ದರಿಂದ ದ್ರಾವಿಡ್ ತನ್ನ ಬೋನಸ್ ನಲ್ಲಿ 2.5 ಕೋಟಿ ರೂ. ಕಡಿಮೆ ಮಾಡುವಂತೆ ಬಿಸಿಸಿಐಗೆ ವಿನಂತಿಸಿದ್ದಾರೆ.

“ರಾಹುಲ್ ತನ್ನ ಉಳಿದ ಸಹಾಯಕ ಸಿಬ್ಬಂದಿಗೆ ನೀಡಿದ್ದ ಅದೇ ಬೋನಸ್ ಹಣವನ್ನು(2.5 ಕೋಟಿ ರೂ.) ಬಯಸಿದ್ದರು. ನಾವು ಅವರ ಭಾವನೆಗಳನ್ನು ಗೌರವಿಸುತ್ತೇವೆ ಎಂದು ಬಿಸಿಸಿಐ ಮೂಲ ಹೇಳಿದ್ದನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಭಾರತೀಯ ಕ್ರಿಕೆಟ್ ತಂಡಕ್ಕೆ ಬಹುಮಾನದ ಮೊತ್ತ
ಐಸಿಸಿ ಪುರುಷರ T20 ವಿಶ್ವಕಪ್‌ನಲ್ಲಿ ಭಾರತದ ಗೆಲುವಿನ ನಂತರ, ಬಿಸಿಸಿಐ (BCCI) ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಸೇರಿದಂತೆ ಟೀಮ್ ಇಂಡಿಯಾಕ್ಕೆ 125 ಕೋಟಿ ರೂಪಾಯಿಗಳ ಬಹುಮಾನವನ್ನು ಘೋಷಿಸಿತು. ರಾಹುಲ್ ದ್ರಾವಿಡ್ ಮತ್ತು ತಂಡದ ಆಟಗಾರರಿಗೆ 5 ಕೋಟಿ ರೂ. ಹಾಗೂ ಇತರ ಸಹಾಯಕ ಸಿಬ್ಬಂದಿ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಮತ್ತು ಫೀಲ್ಡಿಂಗ್ ಕೋಚ್ ಟಿ ದಿಲೀಪ್ ತಲಾ 2.5 ಕೋಟಿ ರೂ. ಹಂಚಿಕೆ ಮಾಡಿತ್ತು.

ಪ್ರಮುಖ ಸುದ್ದಿ :-   ರೈತರಿಗೆ ಪಿಸ್ತೂಲ್ ತೋರಿಸಿದ ವೀಡಿಯೊ ವೈರಲ್‌ ; ವಿವಾದಿತ ಟ್ರೇನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ ತಾಯಿ ಬಂಧನ

T20 ವಿಶ್ವಕಪ್‌ನಲ್ಲಿ ತಂಡದ ಯಶಸ್ವಿ ಅಭಿಯಾನದ ನಂತರ 15 ಆಟಗಾರರಿಗೆ ತಲಾ 5 ಕೋಟಿ ರೂ. ಸಹಾಯಕ ಸಿಬ್ಬಂದಿಗೆ ತಲಾ 2.5 ಕೋಟಿ ರೂ., ಆಯ್ಕೆದಾರರು ಮತ್ತು ಮೀಸಲು ಆಟಗಾರರಿಗೆ ತಲಾ 1 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಜುಲೈ 4 ರಂದು ಮುಂಬೈನಲ್ಲಿ ನಡೆದ ವಿಜಯೋತ್ಸವದ ಮೆರವಣಿಗೆಯಲ್ಲಿ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ ಶಾ ಮತ್ತು ತಂಡಕ್ಕೆ ಬಹುಮಾನದ ಹಣವನ್ನು ನೀಡಿದರು. ಆದರೆ ರಾಹುಲ್ ದ್ರಾವಿಡ್ ಅವರು ತಮಗೆ ಬಂದ 5 ಕೋಟಿ. ರೂ. ಬಹುಮಾನ ಮೊತ್ತದಲ್ಲಿ 2.5 ಕೋಟಿ ರೂ. ಹಿಂದಿರುಗಿಸಿ ಮೂಲಕ ಮಾದರಿಯಾಗಿದ್ದಾರೆ. ಸಹಾಯ ಕೋಚ್ ಸಿಬ್ಬಂದಿಯಂತೆ ತಾವೂ ಕೂಡ 2.5 ಕೋಟಿ ರೂ.ಗಳನ್ನು ಮಾತ್ರ ಪಡೆಯಲಿದ್ದು, ಅವರ ಈ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ದ್ರಾವಿಡ್ ಈ ಹಿಂದೆಯೂ ನ್ಯಾಯಯುತ ಬಹುಮಾನ ವಿತರಣೆಗೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. 2018 ರಲ್ಲಿ, ಭಾರತದ U-19 ವಿಶ್ವಕಪ್ ವಿಜೇತ ತಂಡದ ಮುಖ್ಯ ತರಬೇತುದಾರರಾಗಿದ್ದ ದ್ರಾವಿಡ್ ತನಗಾಗಿ ದೊಡ್ಡ ಬೋನಸ್ ಅನ್ನು ನಿರಾಕರಿಸಿದರು. ಆರಂಭದಲ್ಲಿ, ಬಿಸಿಸಿಐ ಅವರಿಗೆ 50 ಲಕ್ಷ ರೂಪಾಯಿ ನೀಡಲು ಯೋಜಿಸಿತ್ತು, ಆದರೆ ಇತರ ಸಹಾಯಕ ಸಿಬ್ಬಂದಿಗೆ ತಲಾ 20 ಲಕ್ಷ ರೂಪಾಯಿ ಮತ್ತು ಆಟಗಾರರಿಗೆ ತಲಾ 30 ಲಕ್ಷ ರೂಪಾಯಿಗಳನ್ನು ನೀಡಿತ್ತು. ಇದು ಗೊತ್ತಾದ ನಂತರ ಹೆಚ್ಚುವರಿ ಹಣ ತೆಗೆದುಕೊಳ್ಳಲು ದ್ರಾವಿಡ್‌ ನಿರಾಕರಿಸಿದ್ದರು.
ದ್ರಾವಿಡ್ ಸಮಾನ ಹಂಚಿಕೆಯನ್ನು ಪ್ರತಿಪಾದಿಸಿದರು. ನಂತರ ಬಿಸಿಸಿಐ ಪರಿಷ್ಕೃತ ವಿತರಣೆಗೆ ನಿರ್ಧಿರಿಸಿ ದ್ರಾವಿಡ್‌ ಸೇರಿದಂತೆ ಪ್ರತಿಯೊಬ್ಬ ಕೋಚಿಂಗ್ ಸಿಬ್ಬಂದಿಗೆ ತಲಾ 25 ಲಕ್ಷ ರೂ.ನೀಡಿತ್ತು.
ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ದ್ರಾವಿಡ್ ಅವರ ಅವಧಿಯು 2024 ರ T20 ವಿಶ್ವಕಪ್‌ನೊಂದಿಗೆ ಕೊನೆಗೊಂಡಿತು. ಕಳೆದ ನವೆಂಬರ್‌ನಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದ ನಂತರ ದ್ರಾವಿಡ್ ಹುದ್ದೆಯಿಂದ ಕೆಳಗಿಳಿಯಲು ಯೋಚಿಸಿದ್ದರು. ಆದಾಗ್ಯೂ, ರೋಹಿತ್ ಶರ್ಮಾ ಅವರ ಒತ್ತಾಯದ ಮೇರೆಗೆ ಅವರು ಮುಂದುವರೆಯಲು ನಿರ್ಧರಿಸಿದರು.

ಪ್ರಮುಖ ಸುದ್ದಿ :-   ಹಳಿ ತಪ್ಪಿದ ಚಂಡೀಗಢ-ದಿಬ್ರುಗಢ ಎಕ್ಸ್‌ಪ್ರೆಸ್‌ ರೈಲಿನ ಹಲವು ಬೋಗಿಗಳು ; ನಾಲ್ವರು ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

 

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement