ಕ್ಷಮಿಸಿ..: ಕಳ್ಳತನ ಮಾಡಿದ್ದು ಖ್ಯಾತ ಸಾಹಿತಿ ಮನೆ ಎಂದು ಗೊತ್ತಾಗಿ ಕದ್ದ ವಸ್ತು ವಾಪಸ್‌ ತಂದಿಟ್ಟು ಪತ್ರ ಬರೆದು ಗೋಡೆಗೆ ಅಂಟಿಸಿ ಹೋದ ಕಳ್ಳ…!

ರಾಯಗಢ : ಅಸಾಮಾನ್ಯ ಘಟನೆಯೊಂದರಲ್ಲಿ ತಾನು ಕಳುವು ಮಾಡಿದ್ದು ಖ್ಯಾತ ಮರಾಠಿ ಬರಹಗಾರನ ಮನೆ ಎಂದು ಗೊತ್ತಾದ ನಂತರ ಕಳ್ಳನೊಬ್ಬ ತಾನು ಕದ್ದ ಎಲ್ಲ ವಸ್ತುಗಳನ್ನು ವಾಪಸ್ ತಂದಿಟ್ಟು, ತಾನು ಮಾಡಿದ ಕೃತ್ಯಕ್ಕೆ ಪಶ್ಚಾತ್ತಾಪಪಟ್ಟು ಗೋಡೆಗೆ ಪತ್ರವೊಂದನ್ನು ಅಂಟಿಸಿ ಹೋದ ಅಪರೂಪದ ಘಟನೆಯೊಂದು ರಾಯಗಡ ಜಿಲ್ಲೆಯ ನೇರಲ್ ಎಂಬಲ್ಲಿ ನಡೆದಿದೆ.
ಈ ಕಳ್ಳ ಕಳುವು ಮಾಡಿದ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ನೇರಲ್‌ನಲ್ಲಿರುವ ಈ ಮನೆ ಪ್ರಸಿದ್ಧ ಮರಾಠಿ ಕವಿ ಮತ್ತು ಸಾಮಾಜಿಕ ಕಾರ್ಯಕರ್ತ ದಿವಂಗತ ನಾರಾಯಣ ಸುರ್ವೆ ಅವರಿಗೆ ಸೇರಿತ್ತು. ನಾರಾಯಣ ಸುರ್ವೆ ಅವರು 84 ನೇ ವಯಸ್ಸಿನಲ್ಲಿ ಆಗಸ್ಟ್ 16, 2010 ರಂದು ನಿಧನರಾದರು. ನಗರ ಕಾರ್ಮಿಕ ವರ್ಗದ ಹೋರಾಟಗಳನ್ನು ಸ್ಪಷ್ಟವಾಗಿ ಚಿತ್ರಿಸುವ ಕಾವ್ಯ ರಚನೆಯ ಕಾರಣಕ್ಕಾಗಿ ಅವರು ವ್ಯಾಪಕವಾಗಿ ಗೌರವಿಸಲ್ಪಟ್ಟಿದ್ದಾರೆ. ಮುಂಬೈನಲ್ಲಿ ಜನಿಸಿದ ಸುರ್ವೆ ಅವರ ಸಾಹಿತ್ಯಿಕ ಕೊಡುಗೆಗಳು ಮತ್ತು ಕ್ರಿಯಾಶೀಲತೆಯು ಮರಾಠಿ ಸಾಹಿತ್ಯ ಮತ್ತು ಸಾಮಾಜಿಕ ಚಿಂತನೆಯ ಮೇಲೆ ಅಳಿಸಲಾಗದ ಛಾಪು ಮೂಡಿಸಿದೆ.

ಸುರ್ವೆ ಅವರ ಮಗಳು ಸುಜಾತಾ ಮತ್ತು ಅವರ ಪತಿ ಗಣೇಶ ಘರೆ ಅವರು ಈಗ ಈ ಮನೆಯಲ್ಲಿ ವಾಸಿಸುತ್ತಿದ್ದು, ಅವರು ತಮ್ಮ ಮಗನ ಮನೆ ವಿರಾರ್‌ಗೆ ಹೋದಾಗ ಈ ಕಳ್ಳತನದ ಘಟನೆ ನಡೆದಿದೆ. ಅವರ ಮನೆಗೆ 10 ದಿನಗಳಿಂದ ಬೀಗ ಹಾಕಲಾಗಿತ್ತು. ಈ ಅವಧಿಯಲ್ಲಿ ಕಳ್ಳ ಮನೆಗೆ ನುಗ್ಗಿ ಎಲ್ ಇಡಿ ಟಿವಿ ಸೆಟ್ ಸೇರಿದಂತೆ ಕೆಲ ಬೆಲೆ ಬಾಳುವ ವಸ್ತುಗಳನ್ನು ಕದ್ದೊಯ್ದಿದ್ದಾನೆ. ಅಷ್ಟಕ್ಕೆ ಸುಮ್ಮನಾಗದ ಕಳ್ಳ ಮರುದಿನ ಇನ್ನೂ ಕೆಲವು ವಸ್ತುಗಳನ್ನು ಕಳ್ಳತನ ಮಾಡಲು ಬಂದಾಗ ಆತ ಕೋಣೆಯಲ್ಲಿ ಸುರ್ವೆ ಅವರ ಫೋಟೋ ಮತ್ತು ಸ್ಮರಣಿಕೆಗಳನ್ನು ಗಮನಿಸಿದ್ದಾನೆ. ವಿದ್ಯಾವಂತನಾಗಿದ್ದ ಕಳ್ಳ ನಂತರ ಕವಿ ನಾರಾಯಣ ಸುರ್ವೆ ಅವರ ಪುಸ್ತಕಗಳನ್ನು ಓದಿದ್ದಾನೆ. ಬಳಿಕ ಇಂಥವರ ಮನೆಯಲ್ಲಿ ಕಳ್ಳತನ ಮಾಡಿದೆನಲ್ಲ ಎಂದು ಪಶ್ಚಾತ್ತಾಪಟ್ಟು ಅವರ ಮನೆಯಿಂದ ಕಳುವು ಮಾಡಿದ್ದ ಎಲ್ಲ ವಸ್ತುಗಳನ್ನು ಪುನಃ ತಂದಿಟ್ಟಿದ್ದಾನೆ. ಅಲ್ಲದೆ, ಅಂತಹ ಹೆಸರಾಂತ ಸಾಹಿತಿಯ ಮನೆಯನ್ನು ಕಳ್ಳತನ ಮಾಡಿದ್ದಕ್ಕಾಗಿ ಕ್ಷಮೆಯಾಚಿಸಿ, ಗೋಡೆಯ ಮೇಲೆ ಪತ್ರವೊಂದನ್ನು ಅಂಟಿಸಿಹೋಗಿದ್ದಾನೆ…!

ಪ್ರಮುಖ ಸುದ್ದಿ :-   ಜಗತ್ತಿನ ಅತ್ಯಂತ ಅಮೂಲ್ಯವಾದ ಕಣ್ಣೀರು ; ಒಂಟೆಯ ಕಣ್ಣೀರಿನ ಹನಿ 26 ಜಾತಿ ವಿಷದ ಹಾವುಗಳ ಕಡಿತಕ್ಕೆ ದಿವ್ಯ ಔಷಧ : ಹೊಸ ಅಧ್ಯಯನ

ಮಗಳು ಸುಜಾತಾ ಮತ್ತು ಪತಿ ಗಣೇಶ ಭಾನುವಾರ ವಿರಾರ್‌ನಿಂದ ಹಿಂದಿರುಗಿದಾಗ ಗೋಡೆಗೆ ಅಂಟಿಸಿದ್ದ ಈ ಪಶ್ಚಾತ್ತಾಪದ ಪತ್ರವನ್ನು ಓದಿದ್ದಾರೆ, ನಂತರ ಅಚ್ಚರಿಯಿಂದ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ ಎಂದು ನೇರಲ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶಿವಾಜಿ ಧಾವ್ಲೆ ತಿಳಿಸಿದ್ದಾರೆ. ಟಿವಿ ಸೆಟ್‌ನಲ್ಲಿ ಕಂಡುಬಂದ ಬೆರಳಚ್ಚು ಮತ್ತು ಇತರ ಲೇಖನಗಳನ್ನು ಆಧರಿಸಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.

ನಾರಾಯಣ ಸುರ್ವೆ ಯಾರು?
ನಾರಾಯಣ ಸುರ್ವೆ ಅವರು ಪ್ರಸಿದ್ಧ ಮರಾಠಿ ಕವಿಯಾಗಿ ಖ್ಯಾತಿಯನ್ನು ಗಳಿಸುವ ಮೊದಲು, ಅವರು ಮುಂಬೈನ ಬೀದಿಗಳಲ್ಲಿ ಅನಾಥರಾಗಿ ಬೆಳೆದವರು. ಮನೆಗೆಲಸ, ಪಾತ್ರೆ ತೊಳೆಯುವ ಕೆಲಸ, ಶಿಶು ಪಾಲನೆ ಕೆಲಸ,, ಸಾಕು-ನಾಯಿ ಆರೈಕೆ ಮಾಡುವ ಕೆಲಸ, ಹಾಲು ವಿತರಣೆ ಮಾಡುವ ಹುಡುಗ, ಗಿರಣಿ ಕೆಲಸ ಮಾಡುವ ಮೂಲಕ ಜೀವನ ಸಾಗಿಸುತ್ತಾ ಸಾಹಿತ್ಯದ ಗೀಳು ಬೆಳೆಸಿಕೊಂಡವರು. ಈ ಅನುಭವಗಳು ಅವರ ಕಾವ್ಯದ ಮೇಲೆ ಗಾಢವಾದ ಪ್ರಭಾವ ಬೀರಿದವು. ಅವರ ಕಾವ್ಯಗಳು ಶ್ರಮ ಜೀವನದ ಬಗ್ಗೆ ಬೆಳಕು ಚೆಲ್ಲಿತ್ತದೆ. ಅಲ್ಲದೆ, ಅಲ್ಲಿಯವರೆಗೆ ಮರಾಠಿ ಸಾಹಿತ್ಯದಲ್ಲಿ ಸ್ಥಾಪಿತವಾಗಿದ್ದ ರೂಢಿಗಳನ್ನು ಅದು ಪ್ರಶ್ನಿಸಿತು. ಸುರ್ವೆ ಅವರ ಕಾವ್ಯಗಳು ನಗರ ಕಾರ್ಮಿಕ ವರ್ಗದ ಹೋರಾಟಗಳು ಮತ್ತು ಘನತೆಯನ್ನು ಸ್ಪಷ್ಟವಾಗಿ ಚಿತ್ರಿಸುತ್ತವೆ. ಅವರು ವ್ಯಾಪಕವಾದ ಪ್ರಶಂಸೆಯನ್ನು ಗಳಿಸಿದರು ಮತ್ತು ಮರಾಠಿ ಸಾಹಿತ್ಯ ಸಂಸ್ಕೃತಿಯ ಮೇಲೆ ಶಾಶ್ವತವಾದ ಪ್ರಭಾವವನ್ನು ಬೀರಿದರು. ಕಷ್ಟದ ಜೀವನದಿಂದ ಗೌರವಾನ್ವಿತ ಕವಿ ಮತ್ತು ಸಾಮಾಜಿಕ ಕಾರ್ಯಕರ್ತನಾಗುವವರೆಗೆ ಅವರ ಪ್ರಯಾಣವು ಅವರ ಪ್ರತಿಭೆಗೆ ಸ್ಪೂರ್ತಿದಾಯಕ ಸಾಕ್ಷಿಯಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಬಾಲಕರ ಹುಚ್ಚಾಟ : ರೀಲ್‌ ಸ್ಟಂಟ್‌ ಮಾಡಲು ವೇಗವಾಗಿ ಚಲಿಸುತ್ತಿದ್ದ ರೈಲಿನ ಕೆಳಗೆ ಮಲಗಿದ ಬಾಲಕ : ಮೂವರು ಅಪ್ರಾಪ್ತರ ಬಂಧನ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement