ಶಿರೂರು ಗುಡ್ಡ ಕುಸಿತ ದುರಂತ : 10 ಮಂದಿ ಕಣ್ಮರೆ , ಅವರಲ್ಲಿ ಆರು ಮಂದಿ ಮೃತದೇಹ ಪತ್ತೆ : ಜಿಲ್ಲಾಧಿಕಾರಿ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತದ ಅವಘಡದ ಬಗ್ಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಮಾಹಿತಿ ನೀಡಿದ್ದಾರೆ.
ಶಿರೂರಿನಲ್ಲಿ ಗುಡ್ಡ ಕುಸಿತದ ದುರಂತದಲ್ಲಿ ಈವರೆಗೆ ಹತ್ತು ಮಂದಿ ಕಣ್ಮರೆಯಾಗಿರುವ ಮಾಹಿತಿ ಸಿಕ್ಕಿದ್ದು, ಈ ಪೈಕಿ ಆರು ಮಂದಿಯ ಮೃತದೇಹ ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಒಂದೇ ಕುಟುಂಬದ ನಾಲ್ಕು ಮತ್ತು ಅದೇ ಕುಟುಂಬದ ಸಂಬಂಧಿಯಾದ ಜಗನ್ನಾಥ, ಉಳುವರೆ ಗ್ರಾಮದ ಸಣ್ಣಿ ಗೌಡ, ಮೂರು ಟ್ಯಾಂಕರ್ ಹಾಗೂ ಒಂದು ಲಾರಿಯ ಚಾಲಕರು ಕಣ್ಮರೆಯಾಗಿರುವುದಾಗಿ ಅವರ ಕುಟುಂಬಗಳು ಮಾಹಿತಿ ನೀಡಿವೆ. ಈ ಪೈಕಿ ಶಿರೂರಿನ ಒಂದೇ ಕುಟುಂಬದ ನಾಲ್ವರು, ತಮಿಳುನಾಡಿನ ನಾಮಕ್ಕಲ್’ನ ಚಿಣ್ಣನನ್ ಎಂಬ ಟ್ಯಾಂಕರ್ ಚಾಲಕನ ಮೃತದೇಹ ಪತ್ತೆಯಾಗಿದೆ. ಇನ್ನೊಂದು ಸಿಕ್ಕಿದ್ದು, ಅದರ ಗುರುತು ಪತ್ತೆ ಕಾರ್ಯ ನಡದಿದೆ ಎಂದು ತಿಳಿಸಿದ್ದಾರೆ

ಮಂಗಳೂರಿನಿಂದ ಹುಬ್ಬಳ್ಳಿಗೆ ಅಡುಗೆ ಅನಿಲ ಪೂರೈಸಲು ಸಾಗುತ್ತಿದ್ದ ಟ್ಯಾಂಕರ್ ಗಂಗಾವಳಿ ನದಿಯಲ್ಲಿ ಬಿದ್ದಿದೆ. ಸಗಡಗೇರಿ ಬಳಿ ನದಿಯಲ್ಲಿರುವ ಈ ಗ್ಯಾಸ್ ಟ್ಯಾಂಕರ್ ನಲ್ಲಿ ತುಂಬಿರುವ ಅನಿಲ ಖಾಲಿ ಮಾಡಲು ಎಚ್.ಪಿ.ಸಿ.ಎಲ್ ಕಂಪನಿಯ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಸುರಕ್ಷತಾ ಕ್ರಮವಾಗಿ ಸುತ್ತಲಿನ ಗ್ರಾಮಗಳ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಹಾಗೂ ಆ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗಿದೆ ಎಂದರು.
ಇದಲ್ಲದೆ, ಜೊಯಿಡಾದ ರಾಮನಗರದಿಂದ ಕೇರಳಕ್ಕೆ ನಾಟಾ ಸಾಗಿಸುತ್ತಿದ್ದ ಲಾರಿಯ ಜಿಪಿಎಸ್ ಲೊಕೇಶನ್ ಮಣ್ಣಿನ ರಾಶಿಯ ಬಳಿ ಪತ್ತೆಯಾಗಿದೆ. ಹಿಗಾಗಿ ಈ ಲಾರಿ ಮಣ್ಣಿನಡಿ ಹುದುಗಿರುವ ಶಂಕೆ ಇದೆ ಎಂದು ಮಾಹಿತಿ ನೀಡಿದರು.

ಪ್ರಮುಖ ಸುದ್ದಿ :-   ಬಿಜೆಪಿ ಮುಖಂಡ ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣ: 2 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಮುಂದುವರಿದ ಹುಡುಕಾಟ..:
ನದಿಯಲ್ಲಿ ನಾಪತ್ತೆಯಾದವರಿಗಾಗಿ ಎನ್‌ಡಿಆರ್‌ಎಫ್ ಹಾಗೂ ಎಸ್​ಡಿಆರ್‌ಎಫ್ ತಂಡಗಳು ಬೋಟ್‌ಗಳ ಮೂಲಕ ನಿರಂತರವಾಗಿ ಹುಡುಕಾಟ ಮುಂದುವರಿಸಿವೆ. ಶಿರೂರು ಬಳಿ ಹೆದ್ದಾರಿ ಮೇಲೆ ಬಿದ್ದ ಬೃಹತ್ ಪ್ರಮಾಣದ ಮಣ್ಣನ್ನು 8ಕ್ಕೂ ಹೆಚ್ಚು ಜೆಸಿಬಿ, ಹಿಟಾಚಿ, ಟಿಪ್ಪರ್‌ಗಳನ್ನು ಬಳಸಿಕೊಂಡು ತೆರವುಗೊಳಿಸಲಾಗುತ್ತಿದೆ. ಗುಡ್ಡ ಕುಸಿತವಾದ ಪಕ್ಕದಲ್ಲಿಯೇ ಬಿರುಕು ಬಿಟ್ಟಿರುವುದುರಿಂದ ಎಚ್ಚರಿಕೆಯಿಂದ ಕೆಲಸ ಮಾಡಲಾಗುತ್ತಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement