ಅಮೆರಿಕದಿಂದ ‘ಗಡಿಪಾರು’ ಆಗುವ ಅಪಾಯ ಎದುರಿಸುತ್ತಿರುವ ಸಾವಿರಾರು ಭಾರತೀಯರ ಮಕ್ಕಳು : ಇದಕ್ಕೆ ಕಾರಣ ಏನು?

ನವದೆಹಲಿ: 2,50,000 ಕ್ಕೂ ಹೆಚ್ಚು ಕಾನೂನು ಬದ್ಧ ವಲಸಿಗರ ಮಕ್ಕಳು, ಅವರಲ್ಲಿ ಹೆಚ್ಚಿನವರು ಭಾರತೀಯ-ಅಮೆರಿಕನ್ನರು, “ವಯಸ್ಸಾದ” ಸಮಸ್ಯೆಯಿಂದಾಗಿ ಅಮೆರಿಕದಿಂದ ಗಡೀಪಾರು ಆಗುವ ಅಪಾಯವಿದೆ. ಇದಕ್ಕೆ ಕಾರಣ ಅಮೆರಿಕದ ವಲಸೆ ಕಾನೂನು. ಅಮೆರಿಕ ದೇಶದ ಕಾನೂನಿನ ಪ್ರಕಾರ ಬೇರೆ ದೇಶದ ಉದ್ಯೋಗಿಗಳ ಮಕ್ಕಳು, ಅಮೆರಿಕ ಪ್ರಜೆಗಳು ಅಲ್ಲವಾದರೆ 21 ವರ್ಷ ದಾಟಿದ ಬಳಿಕ ಅಮೆರಿಕದಲ್ಲಿ ಇರುವಂತಿಲ್ಲ. ಅವರು ಸ್ವಯಂ ಪ್ರೇರಿತವಾಗಿ ದೇಶ ಬಿಟ್ಟು ಹೋಗಬೇಕು, ಇಲ್ಲವಾದರೆ ಸರ್ಕಾರವೇ ಗಡಿಪಾರು ಮಾಡಲಿದೆ.
ಹೀಗಾಗಿ ಉದ್ಯೋಗ ಹಾಗೂ ಉತ್ತಮ ಭವಿಷ್ಯದ ಕನಸನ್ನು ಹೊತ್ತು ಭಾರತದಿಂದ ಅಮೆರಿಕಗೆ ಕಾನೂನುಬದ್ಧವಾಗಿ ವಲಸೆ ಹೋದ ಲಕ್ಷಾಂತರ ಭಾರತೀಯರು ಇದೀಗ ತಮ್ಮ ಮಕ್ಕಳನ್ನು ವಾಪಸ್ ಭಾರತಕ್ಕೆ ಕಳಿಸಬೇಕಾದ ಅನಿವಾರ್ಯತೆಯಲ್ಲಿದ್ದಾರೆ.
‘ಡಾಕ್ಯುಮೆಂಟೆಡ್ ಡ್ರೀಮರ್ಸ್’ ಎಂದು ಕರೆಯಲ್ಪಡುವ ಈ ಮಕ್ಕಳು ತಾತ್ಕಾಲಿಕ ಕೆಲಸದ ವೀಸಾದಲ್ಲಿ ತಮ್ಮ ಪೋಷಕರೊಂದಿಗೆ ಅಮೆರಿಕಕ್ಕೆ ಬಂದರು. ಆದರೆ ಈಗ ಅವರು 21 ವರ್ಷಕ್ಕೆ ಕಾಲಿಡುತ್ತಿದ್ದಂತೆ ಮತ್ತು ತಮ್ಮ “ಅವಲಂಬಿತರುʼ ಎಂಬುದನ್ನು ಕಳೆದುಕೊಳ್ಳುವುದರಿಂದ ಗಡೀಪಾರಿನ ಬೆದರಿಕೆಯನ್ನು ಎದುರಿಸುತ್ತಿದ್ದಾರೆ. ಅಮೆರಿಕದಲ್ಲೇ ಜನಿಸಿದ ಮಕ್ಕಳಿಗೆ ಸಹಜವಾಗಿಯೇ ಅಮೆರಿಕ ಪೌರತ್ವ ಸಿಗುತ್ತದೆ. ಆದರೆ, ಭಾರತದಲ್ಲಿ ಜನಿಸಿದ ಮಕ್ಕಳನ್ನು ಅಮೆರಿಕಕ್ಕೆ ಕರೆದೊಯ್ದ ಪೋಷಕರಿಗೆ ಸಂಕಷ್ಟ ಶುರುವಾಗಿದೆ. ದಶಕಗಳ ಕಾಲ ಅಮೆರಿಕದಲ್ಲೇ ಇದ್ದರೂ ಗ್ರೀನ್ ಕಾರ್ಡ್‌ ಸಿಗದ ಕಾರಣ, ಪೋಷಕರು ತಮ್ಮ ಮಕ್ಕಳನ್ನು ಅಮೆರಿಕದಲ್ಲೇ ಉಳಿಸಿಕೊಳ್ಳಲು ಅಮೆರಿಕದ ವಲಸೆ ಕಾನೂನು ಅಡ್ಡ ಬರುತ್ತಿದೆ. ಈ ಮಕ್ಕಳು ಅಮೆರಿಕ ಪ್ರಜೆಗಳಲ್ಲದ ಕಾರಣ, 21 ವರ್ಷ ದಾಟಿದ ಬಳಿಕ ಅಮೆರಿಕದಲ್ಲಿ ಇರುವಂತಿಲ್ಲ.

ನ್ಯಾಷನಲ್ ಫೌಂಡೇಶನ್ ಫಾರ್ ಅಮೇರಿಕನ್ ಪಾಲಿಸಿ (NFAP) ನವೆಂಬರ್ 2 ರ ಹೊತ್ತಿಗೆ ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳ (USCIS) ಅಂಕಿ-ಅಂಶದ ಅಧ್ಯಯನ ನಡೆಸಿತು ಮತ್ತು ಅವಲಂಬಿತರನ್ನು ಒಳಗೊಂಡಂತೆ 12 ಲಕ್ಷ ಭಾರತೀಯರು ಪ್ರಸ್ತುತ EB-1 EB-2 ಮತ್ತು EB-3 ವಿಭಾಗಗಳಲ್ಲಿ ಗ್ರೀನ್ ಕಾರ್ಡ್‌ಗಳಿಗಾಗಿ ಕಾಯುತ್ತಿದ್ದಾರೆ ಎಂಬುದು ಕಂಡುಬಂದಿದೆ. ಈ ಸಂಖ್ಯೆ ಫೋರ್ಬ್ಸ್ ವರದಿಯಿಂದ ಬಂದಿದೆ.
ವಲಸೆ ಮತ್ತು ರಾಷ್ಟ್ರೀಯತೆಯ ಕಾಯಿದೆ (INA)ಯು ಮಗುವನ್ನು ಅವಿವಾಹಿತ ಮತ್ತು 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ವ್ಯಾಖ್ಯಾನಿಸುತ್ತದೆ. ಒಬ್ಬ ವ್ಯಕ್ತಿಯು ಬಾಲ್ಯದಲ್ಲಿ ಕಾನೂನುಬದ್ಧ ಕಾಯಂ ನಿವಾಸಿ (LPR) ಸ್ಟೇಟಸ್‌ಗೆ ಅರ್ಜಿ ಸಲ್ಲಿಸಿದರೆ ಆದರೆ ಗ್ರೀನ್ ಕಾರ್ಡ್‌ಗೆ ಅನುಮೋದನೆ ಪಡೆಯುವ ಮೊದಲು 21 ವರ್ಷವಾದರೆ, ವಲಸೆ ಉದ್ದೇಶಗಳಿಗಾಗಿ ಅವರನ್ನು ಇನ್ನು ಮುಂದೆ ಮಕ್ಕಳೆಂದು ಪರಿಗಣಿಸಲಾಗುವುದಿಲ್ಲ.

ಅವರನ್ನು “ವಯಸ್ಸಾದ (aging out)” ಎಂದು ಕರೆಯಲಾಗುತ್ತದೆ. ಇದರರ್ಥ ವ್ಯಕ್ತಿಯು ಹೊಸ ಅರ್ಜಿಯನ್ನು ಸಲ್ಲಿಸಬೇಕಾಗಬಹುದು, ಗ್ರೀನ್ ಕಾರ್ಡ್‌ಗಾಗಿ ಹೆಚ್ಚು ಸಮಯ ಕಾಯಬೇಕಾಗಬಹುದು. ಸಕ್ರಮವಾಗಿ ವಲಸೆ ಹೋದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪರಿಸ್ಥಿತಿ ಮುಂದೊಂದು ದಿನ ಬರಬಹುದು ಎನ್ನುವ ಅಂದಾಜು ಅಲ್ಲಿನ ರಾಜಕಾರಣಿಗಳಿಗೆ ಇತ್ತು. ಆದರೂ ಕೂಡಾ ಕಾನೂನಿನಲ್ಲಿ ಯಾವುದೇ ಬದಲಾವಣೆ ತಂದಿಲ್ಲ. ಅಮೆರಿಕ ಅಧ್ಯಕ್ಷೀಯ ಕಚೇರಿ ವೈಟ್ ಹೌಸ್, ಇದಕ್ಕೆಲ್ಲಾ ರಿಪಬ್ಲಿಕನ್ ಪಕ್ಷ ಕಾರಣ ಎಂದು ದೂಷಿಸುತ್ತಿದೆ. ಈ ಶಾಸನಾತ್ಮಕ ಬಿಕ್ಕಟ್ಟನ್ನು ರಿಪಬ್ಲಿಕನ್ ಪಕ್ಷ ಕಾರಣ ಎಂದು ವೈಟ್ ಹೌಸ್‌ನ ಮಾಧ್ಯಮ ಕಾರ್ಯದರ್ಶಿ ಕರೀನ್ ಜೀನ್ ಪಿಯರ್ ಅವರು ಆರೋಪ ಮಾಡಿದ್ದಾರೆ. ಸೆನೆಟ್‌ನಲ್ಲಿ ಈ ಕುರಿತಾಗಿ ಮತದಾನ ಏರ್ಪಡಿಸಿದ್ದಾಗ ರಿಪಬ್ಲಿಕನ್ ಪಕ್ಷ ಎರಡು ಬಾರಿ ಕಾನೂನು ಜಾರಿಗೆ ತಡೆಯೊಡ್ಡಿತು ಎಂದು ವೈಟ್ ಹೌಸ್ ಮಾಹಿತಿ ನೀಡಿದೆ.

ಕ್ರಮಕ್ಕಾಗಿ ಅಮೆರಿಕ ಸಂಸದರ ಮನವಿ
ಜೂನ್ 13 ರಂದು, ಸೆನೆಟರ್ ಅಲೆಕ್ಸ್ ಪಡಿಲ್ಲಾ ನೇತೃತ್ವದ 43 ಸಂಸದರ ಗುಂಪು, ವಲಸೆ, ಪೌರತ್ವ ಮತ್ತು ಗಡಿ ಸುರಕ್ಷತೆಯ ಮೇಲಿನ ಸೆನೆಟ್ ನ್ಯಾಯಾಂಗ ಉಪಸಮಿತಿಯ ಅಧ್ಯಕ್ಷ ಮತ್ತು ಪ್ರತಿನಿಧಿ ಡೆಬೊರಾ ರಾಸ್, ಈ ವ್ಯಕ್ತಿಗಳನ್ನು ರಕ್ಷಿಸಲು ತುರ್ತು ಕ್ರಮ ತೆಗೆದುಕೊಳ್ಳುವಂತೆ ಬೈಡನ್‌ ಆಡಳಿತವನ್ನು ಒತ್ತಾಯಿಸಿದ್ದಾರೆ.
“ಈ ಯುವಕರು ಅಮೆರಿಕದಲ್ಲಿ ಬೆಳೆದಿದ್ದಾರೆ, ಅಮೇರಿಕನ್ ಶಾಲಾ ವ್ಯವಸ್ಥೆಯಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ ಮತ್ತು ಅಮೇರಿಕನ್ ಸಂಸ್ಥೆಗಳಿಂದ ಪದವಿಗಳನ್ನು ಪಡೆದಿದ್ದಾರೆ. ಆದಾಗ್ಯೂ, ದೀರ್ಘಾವಧಿಯ ಗ್ರೀನ್ ಕಾರ್ಡ್ ಬ್ಯಾಕ್‌ಲಾಗ್‌ನಿಂದಾಗಿ, ಅನುಮೋದಿತ ವಲಸಿಗರ ಅರ್ಜಿಗಳನ್ನು ಹೊಂದಿರುವ ಕುಟುಂಬಗಳು ಶಾಶ್ವತ ನಿವಾಸಿ ಸ್ಥಾನಮಾನಕ್ಕಾಗಿ ದಶಕಗಳಿಂದ ಕಾಯುತ್ತಿವೆ ಎಂದು ಶಾಸಕರು ಬರೆದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement