ವಯನಾಡು : ಭಾರೀ ಮಳೆಯ ನಡುವೆ ಮಂಗಳವಾರ ಬೆಳಗ್ಗೆ ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಬಳಿಯ ಗುಡ್ಡಗಾಡು ಪ್ರದೇಶಗಳಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ಸಾವಿನ ಸಂಖ್ಯೆ 93ಕ್ಕೆ ಏರಿದೆ. 116 ಮಂದಿ ಗಾಯಗೊಂಡಿದ್ದಾರೆ ಮತ್ತು ಇನ್ನೂ ನೂರಾರು ಜನರು ಸಿಲುಕಿಕೊಂಡಿದ್ದಾರೆ ಎಂಬ ಆತಂಕವಿದೆ. ಜುಲೈ 30 ಮತ್ತು 31 ರಂದು ರಾಜ್ಯಾದ್ಯಂತ ಎರಡು ದಿನಗಳ ಶೋಕಾಚರಣೆಯನ್ನು ಕೇರಳ ಸರ್ಕಾರ ಪ್ರಕಟಿಸಿದೆ.
ನಾಲ್ಕು ಗಂಟೆಗಳ ಅವಧಿಯಲ್ಲಿ ಮೂರು ಭೂಕುಸಿತಗಳು ಸಂಭವಿಸಿದ ಇಷ್ಟೊಂದು ಸಾವುನೋವುಗಳು ಸಂಭವಿಸಿವೆ. ಮೂಲಗಳ ಪ್ರಕಾರ, ಗುಡ್ಡಗಾಡು ಪ್ರದೇಶಗಳಿಂದ 250 ಜನರನ್ನು ರಕ್ಷಿಸಲಾಗಿದೆ. ಇದುವರೆಗೆ 37 ಮೃತದೇಹಗಳನ್ನು ಗುರುತಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆಗಾಗಿ ಎನ್ಡಿಆರ್ಎಫ್ ಮತ್ತು ಸೇನೆ ಸೇರಿದಂತೆ ಹಲವು ಏಜೆನ್ಸಿಗಳನ್ನು ನಿಯೋಜಿಸಲಾಗಿದೆ. ಮುಂಡಕ್ಕೈ, ಚೂರಲ್ಮಲಾ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳು ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಸೇರಿವೆ. ಚಾಲಿಯಾರ್ ನದಿಯಲ್ಲಿ ಹಲವರು ಕೊಚ್ಚಿಹೋಗಿರುವ ಆತಂಕವಿದೆ.
ವೈದ್ಯಕೀಯ ತಂಡಗಳು ಸೇರಿದಂತೆ 225 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಭಾರತೀಯ ಸೇನೆ ಹೇಳಿಕೆಯಲ್ಲಿ ತಿಳಿಸಿದೆ. ಎರಡು ವಾಯುಪಡೆಯ ಹೆಲಿಕಾಪ್ಟರ್ಗಳು, ಎಂಐ-17 ಮತ್ತು ಎಎಲ್ಹೆಚ್ (ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್) ಅನ್ನು ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ. 122 ಇನ್ಫೆಂಟ್ರಿ ಬೆಟಾಲಿಯನ್ (ಟಿಎ) ಮದ್ರಾಸ್ನಿಂದ ಸೆಕೆಂಡ್-ಇನ್-ಕಮಾಂಡ್ ನೇತೃತ್ವದ 43 ಸಿಬ್ಬಂದಿ ತಂಡವು ನಡೆಯುತ್ತಿರುವ ರಕ್ಷಣಾ ಪ್ರಯತ್ನಗಳಲ್ಲಿ ಸಹಾಯ ಮಾಡಲು ಸಜ್ಜುಗೊಂಡಿದೆ ಎಂದು ಸೇನೆಯ ಪಿಆರ್ಒ ತಿಳಿಸಿದ್ದಾರೆ.
ಅಗ್ನಿಶಾಮಕ ಮತ್ತು ರಕ್ಷಣಾ, ನಾಗರಿಕ ರಕ್ಷಣಾ, ಎನ್ಡಿಆರ್ಎಫ್ ಮತ್ತು ಸ್ಥಳೀಯ ತಂಡಗಳ ಒಟ್ಟು 250 ಸಿಬ್ಬಂದಿಯಿಂದ ಬೃಹತ್ ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಭೂ ಕುಸಿತ ರಾತ್ರಿ 2 ಹಾಗೂ ಮುಂಜಾನೆ 4ರ ನಡುವೆ ಸಂಭವಿಸಿವೆ. ಭಾರತೀಯ ನೌಕಾಪಡೆಯ ತಂಡವೊಂದು ರಕ್ಷಣಾ ಕಾರ್ಯದಲ್ಲಿ ನೆರವಾಗಲಿದೆ ಎಂದು ಕೇರಳ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಜಿಲ್ಲೆಯಲ್ಲಿ ಸುಮಾರು 116 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಾಜ್ಯ ಕಂದಾಯ ಸಚಿವರ ಕಚೇರಿ ತಿಳಿಸಿದೆ. ರಾಜ್ಯದ ಸಚಿವರು ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು ಸಮನ್ವಯಗೊಳಿಸುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಬೆಳಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಮಾತನಾಡಿದ್ದು, ಸರ್ಕಾರಕ್ಕೆ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ರಕ್ಷಣಾ ಕಾರ್ಯದಲ್ಲಿ ಪಕ್ಷದ ಕಾರ್ಯಕರ್ತರು ಸಹಾಯದಲ್ಲಿ ಕೈಜೋಡಿಸುವಂತೆ ಅವರು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರಿಗೆ ಹೇಳಿದ್ದಾರೆ. ಈ ಸಂಬಂಧ ಕೇರಳದ ಬಿಜೆಪಿಯ ಏಕೈಕ ಸಂಸದ, ಕೇಂದ್ರ ಸಚಿವ ಸುರೇಶ್ ಗೋಪಿ ಅವರೊಂದಿಗೂ ಪ್ರಧಾನಿ ಮೋದಿ ಮಾತನಾಡಿದ್ದಾರೆ.
ಪೀಡಿತ ಪ್ರದೇಶಗಳಲ್ಲಿ ಮುಂಡಕ್ಕೈ, ಚೂರಲ್ಮಲಾ, ಅಟ್ಟಮಲ ಮತ್ತು ನೂಲ್ಪುಳ ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅನೇಕ ರಸ್ತೆಗಳು ಕುಸಿದಿವೆ ಮತ್ತು ಸೇತುವೆಯೊಂದು ಕೊಚ್ಚಿ ಹೋಗಿದೆ ಮತ್ತು ಹಲವಾರು ಪ್ರದೇಶಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಆರೋಗ್ಯ ಸಚಿವ ವೀಣಾ ಜಾರ್ಜ್ ತಿಳಿಸಿದ್ದಾರೆ. “ನಾವು ಸಂಪರ್ಕವನ್ನು ಮರುಸ್ಥಾಪಿಸಬೇಕು. ಹೆಲಿಕಾಪ್ಟರ್ಗಳನ್ನು ಸಹ ತರಲಾಗುವುದು, ಆದರೆ ಹವಾಮಾನ ಪರಿಸ್ಥಿತಿ ಕೆಟ್ಟದಾಗಿದೆ ಎಂದು ಅವರು ತಿಳಿಸಿದರು.
ರಾಜ್ಯ ಆರೋಗ್ಯ ಇಲಾಖೆ ಕಂಟ್ರೋಲ್ ರೂಂ ತೆರೆದಿದೆ ಎಂದು ಮುಖ್ಯಮಂತ್ರಿ ಘೋಷಿಸಿದ್ದಾರೆ. ತುರ್ತು ಸಹಾಯದ ಅಗತ್ಯವಿರುವವರು ಸಹಾಯವಾಣಿ ಸಂಖ್ಯೆ 9656938689 ಮತ್ತು 8086010833 ನಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಬಹುದು.
ವಿಪತ್ತಿನ ಮಧ್ಯೆ, ಕೇರಳದಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಹವಾಮಾನ ಇಲಾಖೆ ಎಂಟು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್, ಕಣ್ಣೂರು, ಪತ್ತನಂತಿಟ್ಟ, ಅಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ ಕಾಸರಗೋಡು ಜಿಲ್ಲೆಗಳಿಗೆ ರೆಡ್ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ನಾಲ್ಕು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ