ಗದಗ: ಬಿಡಾಡಿ ದನಗಳ ಹಾವಳಿಗೆ ವೃದ್ಧ ಸಾವಿಗೀಡಾದ ಘಟನೆ ಬುಧವಾರ ಬೆಳಗ್ಗೆ ಬೆಟಗೇರಿ ಪಟ್ಟಣದಲ್ಲಿ ನಡೆದಿದೆ. ಗದಗ-ಬೆಟಗೇರಿಯ ಹೊಸ ಬನಶಂಕರಿ ಗುಡಿ ಹತ್ತಿರದ 7ನೇ ನಂಬರ ಶಾಲೆ ಬಳಿ ಈ ಘಟನೆ ನಡೆದಿದ್ದು, ನಂತರ ರೊಚ್ಚಿಗೆದ್ದ ಜನರು ಬೀದಿಗಳಿದು ಪ್ರತಿಭಟನೆ ನಡೆಸಿದರಲ್ಲದೆ ನಗರಸಭೆಯ ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೃದ್ಧನನ್ನು ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ಶಂಕರಪ್ಪ ಹೊಳಿ (70) ಎಂದು ಗುರುತಿಸಲಾಗಿದೆ. ವೃದ್ಧ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಇತರ ದನಗಳೊಂದಿಗೆ ಜಗಳವಾಡುತ್ತಿದ್ದ ಬೀದಿಯ ಗೂಳಿಯಿಂದು ಹಿಂದಿನಿಂದ ವೃದ್ಧನಿಗೆ ಗುದ್ದಿದೆ ಎಂದು ಹೇಳಲಾಗಿದೆ.
ವೃದ್ಧ ಬಿದ್ದಿದ್ದನ್ನು ಕಂಡ ಸ್ಥಳೀಯರು ತಕ್ಷಣವೇ 108 ಅಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಆದರೆ ಅಂಬುಲೆನ್ಸ್ ಒಂದೂವರೆ ತಾಸು ವಿಳಂಬ ಮಾಡಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಡಳಿತದ ಅವ್ಯವಸ್ಥೆಗೆ ರಸ್ತೆ ತಡೆ ನಡೆಸಿ ಪ್ರತಿಭಟನೆಗಿಳಿದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ನಗರಸಭೆ ಆಡಳಿತಕ್ಕೆ ದಿಕ್ಕಾರ ಕೂಗಿ ಕೂಡಲೇ ಬೀದಿ ದನಗಳನ್ನು ಸ್ಥಳಾಂತರಿಸುವಂತೆ ಆಗ್ರಹಿಸಿ ಬೀದಿ ದನದ ದಾಳಿಗೆ ಬಲಿಯಾದ ವೃದ್ಧನ ಕುಟುಂಬಕ್ಕೆ ಪರಿಹಾರ ಕೊಡಬೇಕೆಂದು ಒತ್ತಾಯಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ