ನವದೆಹಲಿ: ಪರಿಶಿಷ್ಟ ಜಾತಿ (ಎಸ್‌ಸಿ) ಹಾಗೂ ಪರಿಶಿಷ್ಟ ಪಂಗಡಗಳಲ್ಲಿ (ಎಸ್‌ಟಿ) ಕೆನೆಪದರಕ್ಕೆ ಸೇರಿದವರನ್ನು ಗುರುತಿಸಲು ಮತ್ತು ಅವರನ್ನು ಮೀಸಲಾತಿಯ ಸೌಲಭ್ಯದಿಂದ ರಾಜ್ಯ ಸರ್ಕಾರಗಳು ನೀತಿಯೊಂದನ್ನು ರೂಪಿಸಬೇಕು ಎಂಬುದರ ಬಗ್ಗೆ ಬಗ್ಗೆ ಸುಪ್ರೀಂ ಕೋರ್ಟ್ ತನ್ನ ಒಲವು ಪ್ರಕಟಿಸಿದೆ.
ಮೀಸಲಾತಿ ಸವಲತ್ತುಗಳನ್ನು ವಿಸ್ತರಿಸುವುದಕ್ಕಾಗಿ ಎಸ್‌ಸಿ- ಎಸ್‌ಟಿ ಸಮುದಾಯಗಳನ್ನು ಅವುಗಳ ಆಂತರಿಕ ಹಿಂದುಳಿದಿರುವಿಕೆ ಆಧಾರದ ಮೇಲೆ ವಿವಿಧ ಗುಂಪುಗಳಾಗಿ ಉಪ-ವರ್ಗೀಕರಿಸುವ ರಾಜ್ಯ ಸರ್ಕಾರಗಳ ಅಧಿಕಾರವನ್ನು ಸಂವಿಧಾನ ಪೀಠ ಗುರುವಾರ ಎತ್ತಿಹಿಡಿದ ವೇಳೆ ಈ ವಿಚಾರ ತಿಳಿಸಲಾಗಿದೆ. ಮೀಸಲಾತಿ ಸವಲತ್ತುಗಳು ಅಂತಹ ಸಮುದಾಯಗಳಲ್ಲಿ ಇನ್ನಷ್ಟು ಹಿಂದುಳಿದವರಿಗೆ ತಲುಪುವಂತಾಗಲು ಕೆನೆಪದರ ಗುರುತಿಸುವಿಕೆಗೆ ಪೀಠದ ಏಳು ನ್ಯಾಯಮೂರ್ತಿಗಳಲ್ಲಿ ನಾಲ್ವರು ಸಲಹೆ ನೀಡಿದರು.
ಪ್ರಸ್ತುತ ಕೆನೆ ಪದರದ ತತ್ವವು ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮಾತ್ರ ಅನ್ವಯಿಸುತ್ತಿದೆಯೇ ವಿನಾ ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಅನ್ವಯವಾಗುತ್ತಿಲ್ಲ.
ಸಹಮತದ ತೀರ್ಪು ಬರೆದ ನ್ಯಾ. ಬಿ ಆರ್ ಗವಾಯಿ ಅವರು ಮೀಸಲಾತಿಯ ಅಂತಿಮ ಗುರಿ ದೇಶದಲ್ಲಿ ನೈಜ ಸಮಾನತೆ ಸಾಧಿಸುವುದಾಗಿದ್ದು ಎಸ್‌ಸಿ ಎಸ್‌ಟಿ ಸಮುದಾಯದ ಕೆನೆಪದರ ವರ್ಗವನ್ನು ಗುರುತಿಸಿ ಅವರನ್ನು ಮೀಸಲಾತಿ ಸವಲತ್ತುಗಳಿಂದ ಹೊರಗಿಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. 281 ಪುಟಗಳಷ್ಟು ದೀರ್ಘವಾದ, ಸಹಮತದ ತೀರ್ಪು ಬರೆದಿರುವ ನ್ಯಾಯಮೂರ್ತಿ ಗವಾಯಿ ಅವರು, ‘ಸರ್ಕಾರಿ ಉದ್ಯೋಗಗಳಲ್ಲಿ ಸೂಕ್ತ ಪ್ರಾತಿನಿಧ್ಯ ಸಿಕ್ಕಿರದ ಹಿಂದುಳಿದ ವರ್ಗದವರಿಗೆ ಆದ್ಯತೆಯನ್ನು ನೀಡುವುದು ಸರ್ಕಾರದ ಕರ್ತವ್ಯ’ ಎಂದು ಹೇಳಿದ್ದಾರೆ.
‘ಪರಿಶಿಷ್ಟ ಜಾತಿಗಳು ಹಾಗೂ ಪರಿಶಿಷ್ಟ ಪಂಗಡಗಳಲ್ಲಿ ಕೆನೆಪದರವನ್ನು ಗುರುತಿಸಲು ರಾಜ್ಯ ಸರ್ಕಾರಗಳು ನೀತಿ ರೂಪಿಸಬೇಕು. ಸಂವಿಧಾನದಲ್ಲಿ ಹೇಳಿದ ನಿಜವಾದ ಸಮಾನತೆಯ ಗುರಿ ಸಾಧಿಸಲು ಈ ಕ್ರಮದಿಂದ ಮಾತ್ರ ಸಾಧ್ಯವಾಗುತ್ತದೆ ಎಂಬುದು ನನ್ನ ಅಭಿಪ್ರಾಯವಾಗಿದೆ’ ಎಂದು ನ್ಯಾಯಮೂರ್ತಿ ಗವಾಯಿ ಹೇಳಿದ್ದಾರೆ.
ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿಗಳಿಗೆ) ಅನ್ವಯವಾಗುವ ಕೆನೆ ಪದರದ ತತ್ವವನ್ನು ಪರಿಶಿಷ್ಟ ವರ್ಗಗಳಿಗೂ ಅನ್ವಯಿಸಬೇಕು. ಆದರೆ ಪರಿಶಿಷ್ಟ ಸಮುದಾಯಗಳ ಕೆನೆ ಪದರವನ್ನು ಮೀಸಲಾತಿ ವ್ಯಾಪ್ತಿಯಿಂದ ಹೊರಗಿಡುವ ಮಾನದಂಡಗಳು ಒಬಿಸಿಗಳಿಗೆ ಅನ್ವಯಿಸುವ ಮಾನದಂಡಕ್ಕಿಂತಲೂ ಭಿನ್ನವಾಗಿರಬೇಕು ಎಂದು ನ್ಯಾಯಮೂರ್ತಿ ವಿಕ್ರಮನಾಥ ಅವರು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.
ಇದಕ್ಕೆ ಸಹಮತ ವ್ಯಕ್ತಪಡಿಸಿರುವ ನ್ಯಾ. ಪಂಕಜ ಮಿತ್ತಲ್ ಅವರು ಮೀಸಲಾತಿ ಒಂದು ವರ್ಗದ ಒಂದು ಪೀಳಿಗೆಗೆ ದೊರೆಯುವಂತಾಗಬೇಕು. ಸಾಮಾನ್ಯ ವರ್ಗಕ್ಕೆ ಸರಿ ಸಮನಾಗಿ ಎರಡನೇ ಪೀಳಗೆ ನಿಂತಿದೆಯೇ ಎಂಬುದನ್ನು ಪ್ರಭುತ್ವ ಗಮನಿಸಬೇಕು ಎಂದು ಹೇಳಿದ್ದಾರೆ. ಕುಟುಂಬದ ಒಂದು ತಲೆಮಾರು ಮೀಸಲಾತಿಯ ಸೌಲಭ್ಯವನ್ನು ಪಡೆದುಕೊಂಡು ಉನ್ನತ ಸ್ಥಾನವನ್ನು ತಲುಪಿದೆ ಎಂದಾದರೆ, ಎರಡನೆಯ ತಲೆಮಾರಿಗೆ ಮೀಸಲಾತಿಯ ಸೌಲಭ್ಯವು ತಾರ್ಕಿಕವಾಗಿ ಸಿಗುವಂತಿರಬಾರದು’ ಎಂದು ಮಿತ್ತಲ್ ಹೇಳಿದ್ದಾರೆ.
ಎಸ್‌ಸಿ/ಎಸ್‌ಟಿಗಳಲ್ಲಿ ಕೆನೆಪದರ ಗುರುತಿಸುವುದು ಸಾಂವಿಧಾನಿಕ ಅನಿವಾರ್ಯತೆಯಾಗಬೇಕು ಎಂದು ನ್ಯಾಯಮೂರ್ತಿ ಸತೀಶಚಂದ್ರ ಶರ್ಮಾ ತಿಳಿಸಿದ್ದಾರೆ.
ಸಹಮತದ ತೀರ್ಪು ನೀಡಿದ್ದ ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ಮತ್ತು ನ್ಯಾಯಮೂರ್ತಿ ಮನೋಜ ಮಿಶ್ರಾ ಅವರು ಈ ವಿಚಾರದಲ್ಲಿ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಲಿಲ್ಲ.
ಮತ್ತೊಬ್ಬ ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ಅವರು ಭಿನ್ನ ತೀರ್ಪು ನೀಡಿದ್ದರು. ಅವರು ಒಳ ಮೀಸಲಾತಿಗೆ ಅನುಮತಿ ನೀಡಬಾರದು ಎಂದು ಹೇಳಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ