ಬೆಂಗಳೂರು : ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರವಾಗಿದೆ ಎಂದು ಮುಖ್ಯಮಂತ್ರಿಯವರ ವಿರುದ್ಧ ನೀಡಲಾಗಿರುವ ದೂರಿಗೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರ ಚಂದ ಗೆಹ್ಲೋಟ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೀಡಿರುವ ಶೋಕಾಸ್ ನೋಟಿಸ್ ಅನ್ನು ಹಿಂಪಡೆಯಬೇಕು ಎಂದು ರಾಜ್ಯ ಸಚಿವ ಸಂಪುಟವು ರಾಜ್ಯಪಾಲರಿಗೆ ಸಲಹೆ ನೀಡಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು (ಮುಡಾ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಬದಲಿ ರೂಪದಲ್ಲಿ 14 ನಿವೇಶನ ಹಂಚಿಕೆ ಮಾಡಿರುವ ಪ್ರಕರಣದಲ್ಲಿ ಅಕ್ರಮ ನಡೆದಿದೆ ಎಂಬ ದೂರಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರಾಜ್ಯಪಾಲ ಥಾವರ ಚಂದ ಗೆಹ್ಲೋಟ್ ಅವರು ಶೋಕಾಸ್ ನೋಟಿಸ್ ನೀಡಿದ್ದರು. ಈ ವಿಚಾರವಾಗಿ ಮುಖ್ಯಮಂತ್ರಿಯವರ ಗೈರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ತಮ್ಮ ಕುರಿತ ಸಂಪುಟ ಸಭೆಯಲ್ಲಿ ಬರುವುದು ತಮ್ಮ ಕುರಿತಾದ ವಿಷಯವಾಗಿದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಯಿಂದ ಹೊರಗುಳಿದಿದ್ದರು.
ಸಂಪುಟ ಸಭೆಯ ತೀರ್ಮಾನದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಮಾಹಿತಿ ನೀಡಿದರು. “ವಾಸ್ತವಿಕ ಅಂಶಗಳು ಮತ್ತು ಎಲ್ಲಾ ಕಾರಣಗಳನ್ನು ಪರಿಗಣಿಸಿದ ನಂತರ ಜುಲೈ 26ರಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನೀಡಿರುವ ಶೋಕಾಸ್ ನೋಟಿಸ್ ಹಿಂಪಡೆಯಬೇಕು. ಅಭಿಯೋಜನೆಗೆ ಕೋರಿ ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡಬೇಕು ಎಂದು ಸಲಹೆ ನೀಡಿದ್ದು, ರಾಜಭವನಕ್ಕೆ ಶೀಘ್ರ ಮಾಹಿತಿ ರವಾನೆಯಾಗಲಿದೆ” ಎಂದು ಶಿವಕುಮಾರ ತಿಳಿಸಿದರು.
“ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧ ಟಿ ಜೆ ಅಬ್ರಾಹಂ ಜುಲೈ 26ರ ಬೆಳಿಗ್ಗೆ 11:30ಕ್ಕೆ ದೂರು ನೀಡಿ ಅಭಿಯೋಜನೆಗೆ ಕೋರಿದ್ದಾರೆ. ಅಂದೇ ಸಂಜೆ 6:30ಕ್ಕೆ ರಾಜ್ಯದ ಮುಖ್ಯಕಾರ್ಯದರ್ಶಿಯಾಗಿದ್ದ ರಜನೀಶ ಗೋಯೆಲ್ ಸುಮಾರು 200 ಪುಟಗಳ ಸುದೀರ್ಘ ಉತ್ತರ ನೀಡಿದ್ದಾರೆ. ಇದಕ್ಕೂ ಮುನ್ನವೇ ರಾಜ್ಯಪಾಲರು ಮುಖ್ಯಮಂತ್ರಿಗೆ ಶೀಕಾಸ್ ನೋಟಿಸ್ ನೀಡಿದ್ದು, ಏಳು ದಿನದಲ್ಲಿ ಉತ್ತರಿಸುವಂತೆ ಸೂಚಿಸಿದ್ದಾರೆ. ಇಷ್ಟು ತರಾತುರಿಯಲ್ಲಿ ತೀರ್ಮಾನ ಮಾಡಿರುವುದೇಕೆ? ಇದು ಪ್ರಜಾಪ್ರಭುತ್ವದ ಸರ್ಕಾರ ಇಲ್ಲವೇ? ಯಾವ ತನಿಖಾ ಆಯೋಗದ ವರದಿ ಆಧರಿಸಿ ನೋಟಿಸ್ ನೀಡಲಾಗಿದೆ? ಎಂದು ಡಿ ಕೆ ಶಿವಕುಮಾರ ಪ್ರಶ್ನಿಸಿದರು.
“ಜುಲೈ 5ರಂದು ಪತ್ರಿಕೆಗಳಲ್ಲಿ ಮುಡಾದಲ್ಲಿ 4 ಸಾವಿರ ಕೋಟಿ ರೂಪಾಯಿ ಹಗರಣ ಎಂದು ವರದಿ ಬಂದಿದೆ. ಈ ಸಂಬಂಧ ವರದಿ ನೀಡಿ ಎಂದು ರಾಜ್ಯಪಾಲರು ಕೇಳಿದ್ದರು. ಜುಲೈ 15ರಂದು ಕರ್ನಾಟಕ ರಾಜ್ಯ ರೈತ ಸಂಘದ ಒಕ್ಕೂಟ ವಿಸ್ತೃತವಾದ ಮನವಿ ನೀಡಿದೆ ಎಂದು ರಾಜ್ಯಪಾಲರು ಮತ್ತೊಂದು ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ ಎನ್ ದೇಸಾಯಿ ಅವರ ನೇತೃತ್ವದ ತನಿಖೆಗೆ ಆದೇಶಿಸಲಾಗಿದೆ” ಎಂದರು.
“ದೇಶದ ವಿವಿಧ ಹೈಕೋರ್ಟ್‌ಗಳ ತೀರ್ಪು, ಅನೇಕ ರಾಜ್ಯಗಳಲ್ಲಿ ರಾಜ್ಯಪಾಲರು ಯಾವ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಹೇಗೆಲ್ಲಾ ತೀರ್ಪು ಬಂದಿವೆ ಮತ್ತು ನ್ಯಾಯಾಲಯಗಳು ರಾಜ್ಯಪಾಲರಿಗೆ ಹೇಗೆ ಮಾರ್ಗದರ್ಶನ ಮಾಡಿವೆ ಎಂಬುದನ್ನು ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು” ಎಂದು ಅವರು ಹೇಳಿದರು..
“ಇಡೀ ಘಟನಾವಳಿ ಪರಿಶೀಲಿಸಿದಾಗ ರಾಜ್ಯಪಾಲರಂಥ ಸಾಂವಿಧಾನಿಕ ಹುದ್ದೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ರಾಜಕೀಯ ಕಾರಣಕ್ಕಾಗಿ ಕಾನೂನುಬದ್ಧವಾಗಿ ಆಯ್ಕೆಯಾಗಿರುವ ಬಹುಮತದ ಸರ್ಕಾರವನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ಸಂಪುಟ ಸಭೆಯಲ್ಲಿ ತೀರ್ಮಾನಕ್ಕೆ ಬರಲಾಗಿದೆ” ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ ತಿಳಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ