ನವದೆಹಲಿ: ಖ್ಯಾತ ಭರತನಾಟ್ಯ ಮತ್ತು ಕೂಚಿಪುಡಿ ನೃತ್ಯಗಾರ್ತಿ ಯಾಮಿನಿ ಕೃಷ್ಣಮೂರ್ತಿ (84) ಅವರು ಶನಿವಾರ ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾದರು.
ಅವರು ವಯಸ್ಸಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದರು ಮತ್ತು ಕಳೆದ ಏಳು ತಿಂಗಳಿಂದ ಐಸಿಯುನಲ್ಲಿದ್ದರು ಎಂದು ಯಾಮಿನಿ ಕೃಷ್ಣಮೂರ್ತಿ ಅವರ ಮ್ಯಾನೇಜರ್ ಮತ್ತು ಕಾರ್ಯದರ್ಶಿ ಗಣೇಶ ತಿಳಿಸಿದ್ದಾರೆ.
ಅಂತಿಮ ಶ್ರದ್ಧಾಂಜಲಿಗಾಗಿ ಕೃಷ್ಣಮೂರ್ತಿ ಅವರ ಪಾರ್ಥಿವ ಶರೀರವನ್ನು ಹೌಜ್ ಖಾಸ್‌ನಲ್ಲಿರುವ ಅವರ ಯಾಮಿನಿ ಸ್ಕೂಲ್ ಆಫ್ ಡ್ಯಾನ್ಸ್‌ಗೆ ಕೊಂಡೊಯ್ಯಲಾಗುತ್ತದೆ. ಅವರು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.
ಪರಂಪರೆ ಮತ್ತು ಸಾಧನೆಗಳು
ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ಡಿಸೆಂಬರ್ 20, 1940 ರಂದು ಜನಿಸಿದ ಯಾಮಿನಿ ಕೃಷ್ಣಮೂರ್ತಿ, ರುಕ್ಮಿಣಿ ದೇವಿ ಅರುಂಡೇಲ್ ಅವರ ಅಡಿಯಲ್ಲಿ ಚೆನ್ನೈನ ಕಲಾಕ್ಷೇತ್ರ ಸ್ಕೂಲ್ ಆಫ್ ಡ್ಯಾನ್ಸ್‌ನಲ್ಲಿ ನೃತ್ಯ ತರಬೇತಿಯನ್ನು ಪ್ರಾರಂಭಿಸಿದರು. ಅವರು ಪಂಕಜ ಚರಣ ದಾಸ್ ಮತ್ತು ಕೇಳುಚರಣ ಮೊಹಾಪಾತ್ರರಂತಹ ಹೆಸರಾಂತ ಗುರುಗಳ ಬಳಿ ತರಬೇತಿ ಪಡೆದು ಕೂಚಿಪುಡಿ ಮತ್ತು ಒಡಿಸ್ಸಿಯನ್ನು ಕರಗತ ಮಾಡಿಕೊಂಡರು. ಅವರು 1977 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 1968 ರಲ್ಲಿ ಪದ್ಮಶ್ರೀ, 2001 ರಲ್ಲಿ ಪದ್ಮಭೂಷಣ ಮತ್ತು 2016 ರಲ್ಲಿ ಪದ್ಮ ವಿಭೂಷಣ ಪುರಸ್ಕಾರವನ್ನು ಪಡೆದರು.
ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯಕುಮಾರ, ಮಾಜಿ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಸೇರಿದಂತೆ ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ. ಸಂಗೀತ ನಾಟಕ ಅಕಾಡೆಮಿ ಕೂಡ ಸಂತಾಪ ಸೂಚಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ