ವೀಡಿಯೊ..| ಮುರಿದು ಬಿದ್ದ ರಾಷ್ಟ್ರೀಯ ಹೆದ್ದಾರಿ 66ರ ಕಾಳಿ ನದಿ ಸೇತುವೆ : ಕಾರವಾರ – ಗೋವಾ ಸಂಚಾರ ಸ್ಥಗಿತ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕಾರವಾರ ಬಳಿ ರಾಷ್ಟ್ರೀಯ ಹೆದ್ದಾರಿ 66 ರ ಕೋಡಿಭಾಗ್ ಸೇತುವೆ ಕುಸಿದು ಕಾಳಿ ನದಿಗೆ ಬಿದ್ದಿದೆ. ತಮಿಳುನಾಡು ಮೂಲದ ಲಾರಿ ನದಿಗೆ ಉರುಳಿದ್ದು, ಲಾರಿ ಚಾಲಕನನ್ನು ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಸದ್ಯ ಮತ್ತೊಂದು ಸೇತುವೆಯ ಮೇಲೆ  ಕಾರವಾರ-ಗೋವಾ  ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಸೇತುವೆಯಿಂದ ಕಾಳಿ ನದಿಗೆ ಇನ್ನಷ್ಟು ವಾಹನಗಳು ಏನಾದರೂ ಬಿದ್ದಿವೆಯೇ ಎಂಬ ಬಗ್ಗೆ ಶೋಧ ಕಾರ್ಯ ನಡೆಯುತ್ತಿದೆ. ಅಗ್ನಿಶಾಮಕ ದಳ, ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ. ಮಂಗಳವಾರ ತಡ ರಾತ್ರಿ ಸೇತುವೆ ಕುಸಿದು ಬಿದ್ದಿದೆ ಎನ್ನಲಾಗಿದೆ. ಸಚತುಷ್ಪಥ ರಾಷ್ಟ್ರೀಯ ಹೆದ್ದಾರಿ-66ರಲ್ಲಿನ ಕಾಳಿ ನದಿಗೆ ಕಾರವಾರದಿಂದ ವಾಹನಗಳು ಗೋವಾ ಕಡೆಗೆ ಹೋಗಲು ಹಾಗೂ ಗೋವಾ ಕಡೆಯಿಂದ ಕಾರವಾರದ ಕಡೆಗೆ ಬರಲು ಎರಡು ಸೇತುವೆಗಳಿವೆ. ಗೋವಾ ಕಡೆಯಿಂದ ಕಾರವಾರದತ್ತ ವಾಹನಗಳು ಸಂಚರಿಸುತ್ತಿದ್ದ ಸೇತುವೆಯು ಮುರಿದು ಬಿದ್ದಿದೆ. ಸುಮಾರು ಮೂರು ಕಡೆ ಕುಸಿದಿದೆ ಎನ್ನಲಾಗಿದೆ.
ಇದರಿಂದ ಸಂಚಾರದ ಮೇಲೂ ವ್ಯತ್ಯಯವಾಗಲಿದ್ದು, ಗೋವಾ -ಕಾರವಾರ ಮಾರ್ಗದ ಎರಡು ಭಾಗದ ಸಂಚಾರ ವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಜಿಲ್ಲಾಧಿಕಾರಿ ಲಕ್ಷೀಪ್ರಿಯಾ, ಸ್ಥಳೀಯ ಶಾಸಕ ಸತೀಶ್ ಸೈಲ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ನಂತರ ಆಸ್ಪತ್ರೆಗೆ ತೆರಳಿ ಗಾಯಾಳುವನ್ನು ಭೇಟಿಯಾಗಿ ಮಾಹಿತಿ ಪಡೆದರು.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ,ಅಗ್ನಿಶಾಮಕ ದಳದ ಸಿಬ್ಬಂದಿ ,ಕರಾವಳಿ ಕಾವಲು ಪಡೆ ಮೊಕ್ಕಾಂ ಹೂಡಿದ್ದು ಕಾಳಿ ನದಿ ಭಾಗದಲ್ಲಿ ಶೋಧ ಕಾರ್ಯ ನಡೆದಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಆಡಳಿತ ಸಂಪೂರ್ಣ ವಿಫಲ ; ಬಿ.ಆರ್.​ ಪಾಟೀಲ ಬೆನ್ನಲ್ಲೇ ತಮ್ಮ ಸರ್ಕಾರದ ವಿರುದ್ಧವೇ ಸಿಡಿದೆದ್ದ ಮತ್ತೊಬ್ಬ ಕಾಂಗ್ರೆಸ್ ಶಾಸಕ ; ರಾಜೀನಾಮೆ ಮಾತು

ಈ ಸೇತುವೆಯನ್ನು 1983ರಲ್ಲಿ ನಿರ್ಮಿಸಲಾಗಿತ್ತು. 2018ರಲ್ಲಿ ಇದೇ ಸೇತುವೆ ಪಕ್ಕದಲ್ಲಿ ಇನ್ನೊಂದು ಸೇತುವೆಯನ್ನು ನಿರ್ಮಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಸದ್ಯ ಹೊಸ ಸೇತುವೆಯ ಮೇಲೆ ಸಂಚಾರ ನಿರ್ಬಂಧಿಸಿ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಸೂಚಿಸಿದ್ದಾರೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರವಾರದಿಂದ ಗೋವಾ ಕಡೆಗೆ ವಾಹನ ಸಂಚಾರ ಸ್ಥಗಿತಗೊಂಡಿದೆ. ಸದ್ಯ ರಸ್ತೆಯ ಇಕ್ಕೆಲಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement