ಢಾಕಾ: ಸುಪ್ರೀಂ ಕೋರ್ಟ್ಗೆ ಮುತ್ತಿಗೆ ಹಾಕಿದ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆಯ ನಂತರ ಬಾಂಗ್ಲಾದೇಶದ ಮುಖ್ಯ ನ್ಯಾಯಮೂರ್ತಿ ಒಬೈದುಲ್ ಹಸನ್ ಅವರು ಶನಿವಾರ (ಆಗಸ್ಟ್ 10) ರಾಜೀನಾಮೆ ನೀಡಿದ್ದಾರೆ.
ರಾಜೀನಾಮೆ ನೀಡಲು ಪ್ರತಿಭಟನಾಕಾರರು ಗಡುವು ನೀಡಿದ ನಂತರ “ತಾತ್ವಿಕವಾಗಿ” ರಾಜೀನಾಮೆ ನೀಡಲು ಹಸನ್ ಅವರು ಒಪ್ಪಿಕೊಂಡರು. ಅವರು ಕಳೆದ ವರ್ಷ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಹಾಗೂ ಉಚ್ಚಾಟಿತ ಪ್ರಧಾನಿ ಶೇಖ್ ಹಸೀನಾ ಅವರ ನಿಷ್ಠಾವಂತರೆಂದು ಪ್ರತಿಭಟನಾಕಾರರು ಭಾವಿಸಿದ್ದಾರೆ.
ಬಹುಪಾಲು ವಿದ್ಯಾರ್ಥಿಗಳನ್ನು ಒಳಗೊಂಡ ನೂರಾರು ಪ್ರತಿಭಟನಾಕಾರರು ಬಾಂಗ್ಲಾದೇಶದ ಸುಪ್ರೀಂ ಕೋರ್ಟ್ ಅನ್ನು ಸುತ್ತುವರೆದರು, ಮುಖ್ಯ ನ್ಯಾಯಾಧೀಶರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ತಮ್ಮ ರಾಜೀನಾಮೆಯನ್ನು ಘೋಷಿಸುವ ಮೊದಲು ಮುಖ್ಯ ನ್ಯಾಯಾಧೀಶರು ಆವರಣದಿಂದ ಪಲಾಐನ ಮಾಡಿದ್ದರು ಎಂದು ವರದಿಗಳು ಸೂಚಿಸಿವೆ.
ಹೊಸದಾಗಿ ರಚನೆಯಾದ ಮಧ್ಯಂತರ ಸರ್ಕಾರವನ್ನು ಸಂಪರ್ಕಿಸದೆ ಮುಖ್ಯ ನ್ಯಾಯಾಧೀಶರು ಕರೆದಿದ್ದ ಪೂರ್ಣ ನ್ಯಾಯಾಲಯದ ಸಭೆಯ ನಂತರ ಬಾಂಗ್ಲಾದೇಶದ ಪ್ರತಿಭಟನೆಗಳು ಮತ್ತೆ ಆರಂಭವಾದವು. ನ್ಯಾಯಾಧೀಶರು ಪಿತೂರಿಯ ಭಾಗವಾಗಿದ್ದಾರೆ ಎಂದು ವಿದ್ಯಾರ್ಥಿ ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಉದ್ವಿಗ್ನತೆ ಹೆಚ್ಚಾದಂತೆ, ನಿಗದಿತ ಪೂರ್ಣ ನ್ಯಾಯಾಲಯದ ಸಭೆಯನ್ನು ಹಠಾತ್ ರದ್ದುಗೊಳಿಸಲಾಯಿತು. ಪ್ರತಿಭಟನಕಾರರು, ಸುಪ್ರೀಂ ಕೋರ್ಟ್ಗೆ ಮುತ್ತಿಗೆ ಹಾಕುವುದನ್ನು ಮುಂದುವರೆಸಿದರು, ಮುಖ್ಯ ನ್ಯಾಯಾಧೀಶರು ಕೆಳಗಿಳಿಯಲು ಒಂದು ಗಂಟೆ ಕಾಲಾವಕಾಶ ನೀಡಲಾಯಿತು.
ಸರ್ಕಾರದ ನೇಮಕಾತಿ ನಿಯಮಗಳ ವಿರುದ್ಧ ವಿದ್ಯಾರ್ಥಿಗಳ ನೇತೃತ್ವದ ದಂಗೆಯು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನಸ್ ಉಸ್ತುವಾರಿ ಸರ್ಕಾರದ ಅಧಿಕಾರ ವಹಿಸಿಕೊಂಡ ಕೆಲವು ದಿನಗಳ ನಂತರ ಹೊಸ ಪ್ರತಿಭಟನೆಗಳು ಬಂದಿವೆ.
76 ವರ್ಷದ ಪ್ರಧಾನಿ ಶೇಖ್ ಹಸೀನಾ ಅವರ ಆಡಳಿತವನ್ನು ಕೊನೆಗೊಳಿಸಿದ ಒಂದು ತಿಂಗಳಿಗೂ ಹೆಚ್ಚು ಕಾಲ ನಡೆದ ಮಾರಣಾಂತಿಕ ಪ್ರತಿಭಟನೆಯಲ್ಲಿ ಕನಿಷ್ಠ 450 ಜನರು ಸಾವಿಗೀಡಾಗಿದ್ದಾರೆ.
ಹಸೀನಾ ಅವರು ಕೊಲೆ, ಬಲವಂತದ ನಾಪತ್ತೆ, ಅಕ್ರಮ ಹಣ ವರ್ಗಾವಣೆ ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದಾರೆ ಮತ್ತು ಕಾನೂನನ್ನು ಎದುರಿಸಬೇಕು ಎಂದು ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಕ್ಷದ ಹಿರಿಯ ಸದಸ್ಯ ಅಮೀರ್ ಖೋಸ್ರು ಮಹಮೂದ್ ಚೌಧರಿ ಹೇಳಿದ್ದಾರೆ.
ಏಷ್ಯಾದ ಸುದೀರ್ಘ ಸೇವೆ ಸಲ್ಲಿಸಿದ ನಾಯಕಿಯರಲ್ಲಿ ಒಬ್ಬರಾದ ಹಸೀನಾ ಅವರು ರಾಜೀನಾಮೆ ನೀಡಿ ಆಗಸ್ಟ್ 5 ರಂದು ಬಾಂಗ್ಲಾದೇಶ ತೊರೆದಿದ್ದರು ಮತ್ತು ಲಕ್ಷಾಂತರ ಪ್ರತಿಭಟನಾಕಾರರ ಒತ್ತಡದಿಂದಾಗಿ ಅವರು ರಾಜೀನಾಮೆ ನೀಡಬೇಕಾಯಿತು.
ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಮುಹಮ್ಮದ್ ಯೂನಸ್ ನೇತೃತ್ವದಲ್ಲಿ ಗುರುವಾರ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರ ಪ್ರಮಾಣ ವಚನ ಸ್ವೀಕರಿಸಿತು. ಸಂವಿಧಾನದ ಅಡಿಯಲ್ಲಿ, 90 ದಿನಗಳಲ್ಲಿ ಚುನಾವಣೆಯನ್ನು ಕರೆಯಬೇಕಾಗಿದೆ, ಆದಾಗ್ಯೂ ಮಿಲಿಟರಿ ಬೆಂಬಲಿತ ಮಧ್ಯಂತರ ಸರ್ಕಾರದ ಮುಖ್ಯಸ್ಥ ಯೂನಸ್ ಚುನಾವಣೆಗಳು ಯಾವಾಗ ನಡೆಯಲಿದೆ ಎಂಬುದರ ಕುರಿತು ಪ್ರತಿಕ್ರಿಯಿಸಿಲ್ಲ.
ನಿಮ್ಮ ಕಾಮೆಂಟ್ ಬರೆಯಿರಿ