ಕೋಲ್ಕತ್ತ : ಕೋಲ್ಕತ್ತಾದಲ್ಲಿ ಟ್ರೇನಿ ವೈದ್ಯೆಯ ಮೇಲೆ ಅತ್ಯಾಚಾರ ಹಾಗೂ ಭೀಕರವಾಗಿ ಹತ್ಯೆಗೈದ ಆರೋಪದ ಮೇಲೆ ಬಂಧಿತನಾಗಿರುವ ಪ್ರಮುಖ ಆರೋಪಿ ಸಂಜಯ ರಾಯ್ ನಾಲ್ಕು ಬಾರಿ ವಿವಾಹವಾಗಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ.
ಆತನ ಅಕ್ಕಪಕ್ಕದವರ ಪ್ರಕಾರ, ಆತನ ಮೊದಲಿನ ಮೂವರು ಪತ್ನಿಯರು ಆತನ ದುರ್ವರ್ತನೆ ಸಹಿಸಲಾಗದೆ ಬಿಟ್ಟು ಹೋಗಿದ್ದರು ಎಂದು ಹೇಳಿದ್ದಾರೆ. ಆತನ ನಾಲ್ಕನೇ ಪತ್ನಿ ಕಳೆದ ವರ್ಷ ಕ್ಯಾನ್ಸರ್ ನಿಂದ ನಿಧನರಾದರು. ರಾಯ್ ಆಗಾಗ್ಗೆ ತಡರಾತ್ರಿ ಕುಡಿದ ಅಮಲಿನಲ್ಲಿ ಮನೆಗೆ ಬರುತ್ತಿದ್ದ ಎಂದು ಅವರು ತಿಳಿಸಿದ್ದಾರೆ.
ಸಂಜಯ ರಾಯ್ ತಾಯಿ ಮಾಲತಿ ರಾಯ್ ತಮ್ಮ ಮಗನ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ಸಂಜಯ ರಾಯ್ ಮುಗ್ಧ. ಆತ ಪೋಲೀಸರ ಒತ್ತಡದಿಂದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಹೇಳಿದ್ದಾರೆ.
ಅಪರಾಧದ ವಿವರಗಳು ಮತ್ತು ಶವಪರೀಕ್ಷೆ ವರದಿ
ಉತ್ತರ ಕೋಲ್ಕತ್ತಾದ ಆರ್‌ಜಿ ಕಾರ್ ಸರ್ಕಾರಿ ಆಸ್ಪತ್ರೆಯಲ್ಲಿ 31 ವರ್ಷದ ಸ್ನಾತಕೋತ್ತರ ತರಬೇತಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಿಕ ಸ್ವಯಂಸೇವಕನಾಗಿ ಕಾರ್ಯನಿರ್ವಹಿಸುತ್ತಿರುವ ರಾಯ್ ಎಂಬಾತನನ್ನು ಶನಿವಾರ ಬಂಧಿಸಲಾಗಿದೆ. ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಸಂತ್ರಸ್ತೆಯ ಶವ ಪತ್ತೆಯಾಗಿದೆ. ಶವಪರೀಕ್ಷೆಯ ವರದಿಯು ಅತ್ಯಾಚಾರ ಎಸಗಿದ ಕ್ರೂರಿ ಆಕೆಯ ಮೇಲೆ ಬರ್ಬರವಾಗಿ ಹಲ್ಲೆ ನಡೆಸಿದ್ದಾನೆ ಎಂದು ಹೇಳಿದೆ. ಆಕೆಯ ಕಣ್ಣುಗಳು, ಬಾಯಿ ಮತ್ತು ಗುಪ್ತಾಂಗಗಳಲ್ಲಿ ರಕ್ತಸ್ರಾವವಾಗಿದೆ ಮತ್ತು ದೇಹದ ಇತರ ಭಾಗಗಳಿಗೆ ಗಂಭೀರ ಗಾಯಗಳಾಗಿವೆ ಎಂದು ಹೇಳಿದೆ.
ಶವಪರೀಕ್ಷೆಯ ನಾಲ್ಕು ಪುಟಗಳ ವರದಿಯಲ್ಲಿ ಆಕೆಯ ಮುಖ, ಕುತ್ತಿಗೆ, ಹೊಟ್ಟೆ, ಎಡಗಾಲು, ಬಲಗೈ, ಉಂಗುರ ಬೆರಳು ಮತ್ತು ತುಟಿಗಳ ಮೇಲೆ ಗಾಯಗಳಾಗಿವೆ. ಆಕೆಯ ಕತ್ತಿನ ಮೂಳೆಯೂ ಮುರಿದಿರುವುದು ಕಂಡುಬಂದಿದೆ. ಆಕೆಯನ್ನು ಮೊದಲು ಕತ್ತು ಹಿಸುಕಿ ನಂತರ ಉಸಿರುಗಟ್ಟಿಸಿ ಸಾಯಿಸಲಾಗಿದೆ ಎಂದು ತೋರುತ್ತದೆ. ಶವಪರೀಕ್ಷೆಯ ಸಂಪೂರ್ಣ ವರದಿಗಾಗಿ ನಾವು ಕಾಯುತ್ತಿದ್ದೇವೆ, ಇದು ಅಪರಾಧಿಗಳನ್ನು ಗುರುತಿಸಲು ನಮಗೆ ಸಹಾಯ ಮಾಡುತ್ತದೆ ಎಂದು ಕೋಲ್ಕತ್ತಾ ಪೊಲೀಸ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಅಪರಾಧವು ಮುಂಜಾನೆ 3 ರಿಂದ 6 ರ ನಡುವೆ ನಡೆದಿರಬಹುದು ಎಂದು ಅವರು ಹೇಳಿದ್ದಾರೆ.
ಸಂತ್ರಸ್ತೆಯು ಎರಡನೇ ವರ್ಷದ ಸ್ನಾತಕೋತ್ತರ ಟ್ರೈನಿಯಾಗಿದ್ದು, ಚೆಸ್ಟ್ ಮೆಡಿಸಿನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಘಟನೆ ನಡೆದ ದಿನ ಅವರು ರಾತ್ರಿ ಪಾಳಿಯಲ್ಲಿದ್ದರು. ಅವರ ದೇಹ ಶನಿವಾರ ಬೆಳಿಗ್ಗೆ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಪತ್ತೆಯಾಗಿತ್ತು.
ಸುಳಿವು ನೀಡಿದ ಬ್ಲೂಟೂತ್
ಆರೋಪಿ ಸಂಜಯ ರಾಯ್ ಘಟನಾ ಸ್ಥಳದಲ್ಲಿ ಬೀಳಿಸಿ ಹೋಗಿದ್ದ ಬ್ಲೂಟೂತ್ ನಿಂದ ಪೊಲೀಸರಿಗೆ ಕೊಲೆ ಆರೋಪಿಯ ಸುಳಿವು ನೀಡಿದೆ. ಸೆಮಿನಾರ್ ಹಾಲ್ ಸಮೀಪ ಸಂಜಯ ರಾಯ್ ಓಡಾಡಿರುವುದು ಸಿಸಿಟಿವಿ ದೃಶ್ಯದಲ್ಲಿ ಕಂಡುಬಂದಿದೆ. ಶುಕ್ರವಾರ ನಸುಕಿನಲ್ಲಿ ಆತ ಅಲ್ಲಿಂದ ನಿರ್ಗಮಿಸುವುದು ಸಹ ಕಾಣಿಸಿದೆ.ಕಿರಿಯ ವಿದ್ಯಾರ್ಥಿಗಳ ಜತೆ ರಾತ್ರಿ 2 ಗಂಟೆ ಸುಮಾರಿಗೆ ಊಟ ಮಾಡಿದ್ದ ವೈದ್ಯೆ, ವಿಶ್ರಾಂತಿ ಪಡೆಯುವ ಸಲುವಾಗಿ ಸೆಮಿನಾರ್ ಹಾಲ್‌ಗೆ ತೆರಳಿದ್ದರು ಎಂದು ಆಸ್ಪತ್ರೆ ವೈದ್ಯರೊಬ್ಬರು ತಿಳಿಸಿದ್ದಾರೆ. ಅವರು ವಿಶ್ರಾಂತಿಗೆ ಬಳಸಿದ್ದ ಹಾಸಿಗೆ ರಕ್ತಸಿಕ್ತವಾಗಿದೆ.
ಕೋಲ್ಕತ್ತಾದಲ್ಲಿ ಪ್ರತಿಭಟನೆ
ಈ ಘಟನೆಯು ವೈದ್ಯಕೀಯ ಸಮುದಾಯದಲ್ಲಿ ವ್ಯಾಪಕ ಅಶಾಂತಿಗೆ ಕಾರಣವಾಗಿದೆ. ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸ್ನಾತಕೋತ್ತರ ತರಬೇತಿ ವೈದ್ಯರು ತುರ್ತು ಚಿಕಿತ್ಸಾ ವಿಭಾಗವನ್ನು ಹೊರತುಪಡಿಸಿ ಎಲ್ಲಾ ವಿಭಾಗಗಳಲ್ಲಿ ಕೆಲಸವನ್ನು ಸ್ಥಗಿತಗೊಳಿಸಿದ್ದು, ತಪ್ಪಿತಸ್ಥರನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದ್ದಾರೆ. ಆಕೆಯ ಸಾವಿನ ಕುರಿತು ಶೀಘ್ರ ತನಿಖೆ ನಡೆಸುವಂತೆ ಆಗ್ರಹಿಸಿ ವಿವಿಧ ವಿದ್ಯಾರ್ಥಿ ಸಂಘಗಳು ರ್ಯಾಲಿಗಳನ್ನೂ ಆಯೋಜಿಸಿವೆ.
ನಿಮ್ಮ ಕಾಮೆಂಟ್ ಬರೆಯಿರಿ