ಅಂಕೋಲಾ | ಶಿರೂರು ಗುಡ್ಡ ಕುಸಿತ ; ಹಾನಿಗೀಡಾದ ಉಳುವರೆಗೆ ಡಾ.ವೀರೇಂದ್ರ ಹೆಗ್ಗಡೆ ಭೇಟಿ

ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದಿಂದ ಗಂಗಾವಳಿ ನದಿಯಲ್ಲಿ ಎದ್ದ ಅಲೆಗೆ ಮನೆ ಮಠ ಕಳೆದುಕೊಂಡ ನದಿ ದಂಡೆಯ ಉಳುವರೆ ಗ್ರಾಮಕ್ಕೆ ರಾಜ್ಯಸಭಾ ಸದಸ್ಯರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮಂಗಳವಾರ ಭೇಟಿ ನೀಡಿದರು.
ನದಿ ತಟದಲ್ಲಿರುವ ಮೋಹನ ನಾರಾಯಣ ಅಂಬಿಗ ಅವರ ಕುಸಿದ ಮನೆಯನ್ನು ಪರಿಶೀಲಿಸಿದ ಅವರು, ಮೋಹನ ದಂಪತಿ ಸಮಸ್ಯೆ ಆಲಿಸಿದರು. ನದಿ ತಟದಲ್ಲಿ ಅಬ್ಬರದ ಅಲೆಗಳು ಮಾಡಿರುವ ಹಾನಿಯನ್ನು ಪರಿಶೀಲಿಸಿ ಸ್ಥಳೀಯರಿಂದ ಮಾಹಿತಿ ಪಡೆದರು.
ಉಳುವರೆ ಗ್ರಾಮದಲ್ಲಿ ಹಾಲಕ್ಕಿ ಒಕ್ಕಲಿಗರು ಮತ್ತು ಅಂಬಿಗ ಸಮುದಾಯದ 48 ಮನೆಗಳಿದ್ದು ಗಂಗಾವಳಿ ನದಿಯ ಅಬ್ಬರಕ್ಕೆ ಆರು ಮನೆಗಳೂ ಪೂರ್ಣ ಕೊಚ್ಚಿಹೋಗಿ ಓರ್ವ ವೃದ್ದೆ ಸಣ್ಣಿ ಗೌಡ ಸಾವ‌ನ್ನಪ್ಪಿದ್ದಾಳೆ. ಉಳಿದ ಎಲ್ಲ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ.

ಶಿರೂರು ಗುಡ್ಡ ಕುಸಿತದ ದುರಂತದಲ್ಲಿ ಕೇರಳದ ಲಾರಿ ಚಾಲಕ ಅರ್ಜುನ್, ಶಿರೂರಿನ ಜಗನ್ನಾಥ , ಗಂಗೇಕೊಳ್ಳದ ಲೋಕೇಶ ಮಾಹಿತಿ ಸಿಕ್ಕಿಲ್ಲ. ಗಂಗಾವಳಿ ನದಿಯಲ್ಲಿ ನೀರಿನ ಅಬ್ಬರ ಇಳಿಯದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತಗೊಂಡಿದೆ.
ಕುಮಟಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ, ಪ್ರಮುಖರಾದ ಭಾಸ್ಕರ ನಾರ್ವೇಕರ್, ಮಾಜಿ ಶಾಸಕ ಗಂಗಾಧರ ಭಟ್, ಹನುಮಂತ ಗೌಡ,ಉಮೇಶ ನಾಯ್ಕ,ಗ್ರಾ.ಪಂ ಅಧ್ಯಕ್ಷ ಶ್ರವಣ ನಾಯಕ, ಜಿಲ್ಲಾ ನಿರ್ದೇಶಕ ಮಹೇಶ ಎಂ.ಡಿ, ಯೋಜನಾಧಿಕಾರಿಗಳಾದ ಮಮತಾ ನಾಯ್ಕ, ಯೋಗಾನಂದ ಗಾಂಧಿ, ವಾಸು ನಾಯ್ಕ , ಕುಮಟಾದ ಕಲ್ಮೇಶ, ಕಾರವಾರದವಿನಾಯಕ ನಾಯ್ಕ, ಜನಜಾಗೃತಿ ಸಮಿತಿ ಅಧ್ಯಕ್ಷ ಮಹೇಶ ನಾಯ್ಕ, ಮಹಾಲಸಾ ದೇವಸ್ಥಾನದ ಧರ್ಮದರ್ಶಿ ಸುನೀಲ ಪೈ ಮತ್ತಿತರರು ಇದ್ದರು.

ಪ್ರಮುಖ ಸುದ್ದಿ :-   ಶಿರಸಿ : ಜುಲೈ 13ಕ್ಕೆ ಕರ್ಮಫಲ ಕಾದಂಬರಿ ಲೋಕಾರ್ಪಣೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement