
ನವದೆಹಲಿ: ಪತಂಜಲಿ ಆಯುರ್ವೇದ ಸಂಸ್ಥೆ, ಅದರ ಸಂಸ್ಥಾಪಕರಾದ ಬಾಬಾ ರಾಮದೇವ ಹಾಗೂ ಆಚಾರ್ಯ ಬಾಲಕೃಷ್ಣ ಅವರ ವಿರುದ್ಧ ದಾಖಲಿಸಲಾಗಿದ್ದ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ಕೈಬಿಟ್ಟಿದೆ.
ಪುರಾವೆ ಆಧಾರಿತ ಔಷಧಗಳನ್ನು ಗುರಿಯಾಗಿಸಿಕೊಂಡು ದಾರಿ ತಪ್ಪಿಸುವ ಜಾಹೀರಾತು ಪ್ರಕಟಿಸಿದ್ದ ಪತಂಜಲಿ ಆಯುರ್ವೇದ ಮತ್ತದರ ಪ್ರವರ್ತಕರಾದ ಬಾಬಾ ರಾಮದೇವ್ ಹಾಗೂ ಆಚಾರ್ಯ ಬಾಲಕೃಷ್ಣ ಅವರು ಸುಪ್ರೀಂ ಕೋರ್ಟ್‌ನಿಂದ ಕಠಿಣ ಕ್ರಮಗಳನ್ನು ಎದುರಿಸಿದ್ದರು. ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ಮಂಗಳವಾರ ತೀರ್ಪು ಪ್ರಕಟಿಸಿ ನ್ಯಾಯಾಂಗ ನಿಂದನೆ ವಿಚಾರಣೆ ಮುಕ್ತಾಯಗೊಳಿಸಿತು.

ಸುಪ್ರೀಂ ಕೋರ್ಟ್‌ನ ಇಂದಿನ ಆದೇಶದಿಂದಾಗಿ ಈ ಇಬ್ಬರೂ ನಿರಾಳರಾಗಿದ್ದಾರೆ. ನ್ಯಾಯಾಲಯದ ಆದೇಶದ ಹೊರತಾಗಿಯೂ ಈ ಇಬ್ಬರು ಇಂತಹ ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಸಾರ ಮಾಡುವುದಿಲ್ಲ ಅಥವಾ ಪ್ರಕಟಿಸುವುದಿಲ್ಲ ಎಂಬ ತಮ್ಮ ಹಿಂದಿನ ಹೇಳಿಕೆಗಳನ್ನು ಉಲ್ಲಂಘಿಸಿದ್ದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಚಾಟಿ ಬೀಸಿತ್ತು. ನ್ಯಾಯಾಲಯದ ಆದೇಶದ ಉಲ್ಲಂಘನೆ ಹಿನ್ನೆಲೆಯಲ್ಲಿ ಬಾಬಾ ರಾಮದೇವ ಮತ್ತು ಆಚಾರ್ಯ ಬಾಲಕೃಷ್ಣ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿತ್ತು. ನಂತರ ಪತಂಜಲಿ ಹಾಗೂ ಈ ಇಬ್ಬರು ನ್ಯಾಯಾಂಗ ನಿಂದನೆಗಾಗಿ ಸುಪ್ರೀಂ ಕೋರ್ಟ್ ಬಳಿ ಕ್ಷಮೆ ಯಾಚಿಸಿದ್ದರು. ನ್ಯಾಯಾಲಯದ ಅಣತಿಯಂತೆ ಪತ್ರಿಕೆಗಳಲ್ಲಿ ದೊಡ್ಡ ಗಾತ್ರದಲ್ಲಿ ಕ್ಷಮಾಪಣೆಯನ್ನೂ ಪ್ರಕಟಿಸಿದ್ದರು.
ಕೋವಿಡ್-19 ವ್ಯಾಕ್ಸಿನೇಷನ್ ಮತ್ತು ಆಧುನಿಕ ಔಷಧದ ವಿರುದ್ಧ ಪತಂಜಲಿ ಟೀಕೆ ಮಾಡಿತ್ತು. ತಮ್ಮ ಉತ್ಪನ್ನಗಳು ಕೊರೊನಾ ಗುಣಪಡಿಸುತ್ತದೆ ಎಂದು ಪತಂಜಲಿ ಜಾಹೀರಾತು ನೀಡಿತ್ತು. ಈ ಜಾಹೀರಾತಿನ ವಿರುದ್ಧ ಭಾರತೀಯ ವೈದ್ಯಕೀಯ ಸಂಘ ಸಲ್ಲಿಸಿದ ಅರ್ಜಿಯ ಆಧಾರದ ಮೇರೆಗೆ ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿತ್ತು. 2023ರ ನವೆಂಬರ್‌ನಲ್ಲಿ ಪತಂಜಲಿ ಔಷಧಗಳು ರೋಗ ಗುಣಪಡಿಸಲಿವೆ ಎಂದು ನೀಡಿದ್ದ ಪ್ರತಿ ಜಾಹೀರಾತಿನ ಪ್ರತಿಯೊಂದು ಸುಳ್ಳಿನ ಮೇಲೂ ತಲಾ ₹1 ಕೋಟಿ ದಂಡ ವಿಧಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿತ್ತು. ಜಾಹೀರಾತು ಪ್ರಕಟಿಸಿದ್ದಕ್ಕಾಗಿ ಪತಂಜಲಿ ಜಾಹೀರಾತುಗಳ ವಿರುದ್ಧ ತಾತ್ಕಾಲಿಕ ನಿರ್ಬಂಧ ವಿಧಿಸಿತ್ತು.
ಪತಂಜಲಿ ವಿರುದ್ಧ ಔಷಧ ಮತ್ತು ಸೌಂದರ್ಯವರ್ಧಕ ನಿಯಮ ಜಾರಿಗೊಳಿಸದ ಕಾರಣಕ್ಕೆ ಮತ್ತು ದಿಕ್ಕು ತಪ್ಪಿಸುವ ಜಾಹೀರಾತಿನ ವಿರುದ್ಧ ಕ್ರಮಕೈಗೊಳ್ಳದಂತೆ ರಾಜ್ಯಗಳಿಗೆ ಸೂಚಿಸದ ಕೇಂದ್ರ ಸರ್ಕಾರ, ಹಾಗೂ ಸಂಸ್ಥೆ ವಿರುದ್ಧ ತೃಪ್ತಿಕರ ಕ್ರಮ ಕೈಗೊಳ್ಳದ ಉತ್ತರಾಖಂಡ ರಾಜ್ಯದ ಪರವಾನಗಿ ಪ್ರಾಧಿಕಾರ ಸುಪ್ರೀಂ ಕೋರ್ಟ್ ಕೆಂಗಣ್ಣಿಗೆ ಗುರಿಯಾಗಿದ್ದವು.


ನಿಮ್ಮ ಕಾಮೆಂಟ್ ಬರೆಯಿರಿ