ನವದೆಹಲಿ: ಹೊಸ ವರದಿಯೊಂದು ಭಾರತದಲ್ಲಿ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ಘಟನೆಗಳ ಬಗ್ಗೆ ಆತಂಕಕಾರಿ ವಿಚಾರವನ್ನು ಮುಂದಿಟ್ಟಿದೆ. ವರದಿಯ ಪ್ರಕಾರ, ಭಾರತದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಯ ಘಟನೆಗಳು ಅಪಾಯಕಾರಿ ದರದಲ್ಲಿ ಹೆಚ್ಚುತ್ತಿವೆ. ವಿದ್ಯಾರ್ಥಿಗಳ ಆತ್ಮಹತ್ಯೆಯ ಘಟನೆಗಳು ಜನಸಂಖ್ಯೆಯ ಬೆಳವಣಿಗೆಯ ದರ ಮತ್ತು ಒಟ್ಟಾರೆ ಆತ್ಮಹತ್ಯೆ ಪ್ರವೃತ್ತಿಯನ್ನು ಮೀರಿಸಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಬುಧವಾರ (ಆಗಸ್ಟ್ 28) ದತ್ತಾಂಶವನ್ನು ಆಧರಿಸಿ ಆತಂಕಕಾರಿ ವರದಿಯನ್ನು ಬಹಿರಂಗಪಡಿಸಿದೆ.
ವಾರ್ಷಿಕ IC3 ಕಾನ್ಫರೆನ್ಸ್ ಮತ್ತು ಎಕ್ಸ್‌ಪೋ 2024 ರಲ್ಲಿ ಬಿಡುಗಡೆಯಾದ ಸ್ಟುಡೆಂಟ್ಸ್ ಸುಸೈಡ್ಸ್ : ಆನ್ ಎಪಿಡೆಮಿಕ್ ಸ್ವೀಪಿಂಗ್ ಇಂಡಿಯಾ (Student suicides: An epidemic sweeping India) ಎಂಬ ಶೀರ್ಷಿಕೆಯ ವರದಿಯು ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ವಾರ್ಷಿಕವಾಗಿ ನಾಲ್ಕು ಪ್ರತಿಶತದಷ್ಟು ಏರಿಕೆಯಾಗಿವೆ ಮತ್ತು ಒಟ್ಟಾರೆ ಆತ್ಮಹತ್ಯೆ ಸಂಖ್ಯೆಗಳು ಶೇಕಡಾ 2 ರಷ್ಟು ಹೆಚ್ಚಾಗಿದೆ ಎಂದು ಹೇಳಿದೆ.
“ವಿದ್ಯಾರ್ಥಿಗಳ ಆತ್ಮಹತ್ಯೆಯ ಪ್ರಮಾಣವು ಜನಸಂಖ್ಯೆಯ ಬೆಳವಣಿಗೆಯ ದರಗಳು ಮತ್ತು ಒಟ್ಟಾರೆ ಆತ್ಮಹತ್ಯೆ ಪ್ರವೃತ್ತಿಗಳೆರಡನ್ನೂ ಮೀರಿಸುತ್ತದೆ. ಕಳೆದ ದಶಕದಲ್ಲಿ, 0-24 ವರ್ಷ ವಯಸ್ಸಿನವರ ಜನಸಂಖ್ಯೆಯು 582 ಮಿಲಿಯನ್‌ನಿಂದ 581 ಮಿಲಿಯನ್‌ಗೆ ಕಡಿಮೆಯಾಗಿದೆ, ವಿದ್ಯಾರ್ಥಿಗಳ ಆತ್ಮಹತ್ಯೆಗಳ ಸಂಖ್ಯೆ 6,654 ರಿಂದ 13,044ಕ್ಕೆ ಹೆಚ್ಚಾಗಿದೆ ಎಂದು ವರದಿಹೇಳಿದೆ.
ಆತ್ಮಹತ್ಯೆಗಳಲ್ಲಿ ಏರಿಕೆ…
ಕಳೆದ ದಶಕದಲ್ಲಿ (2013-22), ಸುಮಾರು 1,04,000 ವಿದ್ಯಾರ್ಥಿಗಳ ಆತ್ಮಹತ್ಯೆಗಳು ದಾಖಲಾಗಿವೆ, ಇದು ಹಿಂದಿನ ದಶಕಕ್ಕೆ (2003-12) ಹೋಲಿಸಿದರೆ 64%ರಷ್ಟು ಹೆಚ್ಚಳವಾಗಿದೆ ಎಂಬುದನ್ನು ಸೂಚಿಸುತ್ತದೆ.
ದಕ್ಷಿಣದ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಲಕ್ಷದ್ವೀಪಗಳು ದೇಶಾದ್ಯಂತ ಎಲ್ಲಾ ವಿದ್ಯಾರ್ಥಿಗಳ ಆತ್ಮಹತ್ಯೆಗಳಲ್ಲಿ 29% ಪ್ರತಿಶತದಷ್ಟು ಹೊಂದಿದೆ. ಗಮನಾರ್ಹವಾಗಿ, ಮಹಾರಾಷ್ಟ್ರ (1,764), ತಮಿಳುನಾಡು (1,416), ಮಧ್ಯಪ್ರದೇಶ (1,340), ಉತ್ತರ ಪ್ರದೇಶ (1,060) ಮತ್ತು ಜಾರ್ಖಂಡ್ (824) ಭಾರತದಾದ್ಯಂತ ಒಟ್ಟು ಆತ್ಮಹತ್ಯೆ ಪ್ರಕರಣಗಳಲ್ಲಿ 49%ರಷ್ಟನ್ನು ಹೊಂದಿವೆ.
ಮಹಾರಾಷ್ಟ್ರ, ತಮಿಳುನಾಡು ಮತ್ತು ಮಧ್ಯಪ್ರದೇಶಗಳು ಅತಿ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜಸ್ಥಾನವು 571 ವಿದ್ಯಾರ್ಥಿಗಳ ಆತ್ಮಹತ್ಯೆಯೊಂದಿಗೆ 10 ನೇ ಸ್ಥಾನದಲ್ಲಿದೆ. ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಉತ್ತರ ಪ್ರದೇಶವು ಈಗ ಅತ್ಯಧಿಕ ವಿದ್ಯಾರ್ಥಿಗಳ ಆತ್ಮಹತ್ಯೆ ದರಗಳನ್ನು ಹೊಂದಿರುವ ಐದು ರಾಜ್ಯಗಳಲ್ಲಿ ಒಂದಾಗಿದೆ. ಜಾರ್ಖಂಡ್ನಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣ ಹೆಚ್ಚಾಗಿದೆ.
2022 ರಲ್ಲಿ ಒಟ್ಟು ವಿದ್ಯಾರ್ಥಿಗಳ ಆತ್ಮಹತ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚು (ಶೇ 53) ಪುರುಷ ವಿದ್ಯಾರ್ಥಿಗಳು ಇದ್ದಾರೆ ಎಂದು ವರದಿಯು ಹೈಲೈಟ್ ಮಾಡಿದೆ. 2021 ಮತ್ತು 2022 ರ ನಡುವೆ ಪುರುಷ ವಿದ್ಯಾರ್ಥಿಗಳ ಆತ್ಮಹತ್ಯೆಗಳು ಶೇಕಡಾ 6 ರಷ್ಟು ಕಡಿಮೆಯಾಗಿದೆ ಮತ್ತು ಮಹಿಳೆಯರ ಆತ್ಮಹತ್ಯೆಗಳು ಶೇಕಡಾ 7 ರಷ್ಟು ಹೆಚ್ಚಾಗಿದೆ.
“ವಿದ್ಯಾರ್ಥಿಗಳ ಆತ್ಮಹತ್ಯೆಗಳ ನೈಜ ಸಂಖ್ಯೆಯು ಇನ್ನೂ ಹೆಚ್ಚಾಗಿರಬಹುದು, ಯಾಕೆಂದರೆ ಎಷ್ಟೋ ಆತ್ಮಹತ್ಯೆಗಳು ವರದಿಯಾಗಿರುವುದಿಲ್ಲ ಎಂಬುದನ್ನು ಒಪ್ಪಿಕೊಳ್ಳುವುದು ಮುಖ್ಯವಾಗಿದೆ ಎಂದು ವರದಿ ಹೇಳಿದೆ.
ಭಾರತದಲ್ಲಿ 15 ಮತ್ತು 24 ವರ್ಷದೊಳಗಿನ ಏಳು ಯುವಕರಲ್ಲಿ ಒಬ್ಬರು ಖಿನ್ನತೆಯ ಲಕ್ಷಣಗಳು ಮತ್ತು ನಿರಾಸಕ್ತಿ ಸೇರಿದಂತೆ ಮಾನಸಿಕ ಅಸಮತೋಲನ ಅನುಭವಿಸುತ್ತಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ