ಚನ್ನಮ್ಮನ ಕಿತ್ತೂರು | ಪಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ : ಬಿಜೆಪಿ ಸದಸ್ಯನ ಅಪಹರಣ..!

ಬೆಳಗಾವಿ : ಜಿಲ್ಲೆಯ ಚನ್ನಮ್ಮನ ಕಿತ್ತೂರು ಪಟ್ಟಣ ಪಂಚಾಯತದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರೊಬ್ಬರನ್ನು ಗುರುವಾರ ರಾತ್ರಿ ತಂಡವೊಂದು ಅಪಹರಣ ಮಾಡಿದೆ ಎಂದು ವರದಿಯಾಗಿದೆ.
ಬಿಜೆಪಿ ಸದಸ್ಯರಾದ ನಾಗರಾಜ ಅಸುಂಡಿ ಅವರು ಪಟ್ಟಣದ ಚೌಕಿಮಠದ ಬಳಿ ನಿಂತಿದ್ದಾಗ ಸ್ಕಾರ್ಪಿಯೊ ವಾಹನದಲ್ಲಿ ಬಂದ ಕೆಲವರು ಬಲವಂತವಾಗಿ ನಾಗರಾಜ ಅವರನ್ನು ಎಳೆದುಕೊಂಡು ವಾಹನದಲ್ಲಿ ಒಯ್ದಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಸೆಪ್ಟೆಂಬರ್‌ 3ರಂದು ಚನ್ನಮ್ಮನ ಕಿತ್ತೂರು ಪಟ್ಟಣ ಪಂಚಾಯತದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಿಗದಿಯಾಗಿದೆ. ಬಿಜೆಪಿಯಿಂದ 9 ಸದಸ್ಯರು, ಕಾಂಗ್ರೆಸ್ಸಿನಿಂದ 5 ಹಾಗೂ ನಾಲ್ವರು ಪಕ್ಷೇತರ ಸದಸ್ಯರು ಪಟ್ಟಣ ಪಂಚಾಯತಕ್ಕೆ ಆಯ್ಕೆಯಾಗಿದ್ದಾರೆ. ಇವರಲ್ಲಿ 4 ಪಕ್ಷೇತರ ಸದಸ್ಯರು ಕಾಂಗ್ರೆಸ್ ಗೆ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ.
ಪಟ್ಟಣ ಪಂಚಾಯತದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಪಕ್ಷದ ಬೆಂಬಲಿಗರು ಬಿಜೆಪಿ ಸದಸ್ಯನ ಅಪಹರಣ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಬಿಜೆಪಿ ಕಾರ್ಯಕರ್ತರು ತಡರಾತ್ರಿ ಕಿತ್ತೂರು ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದರು.
ಬಿಜೆಪಿಯಿಂದ ಪ್ರತಿಭಟನೆ….
ನಿನ್ನೆ ರಾತ್ರಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ಪಟ್ಟಣ ಪಂಚಾಯತ ಸದಸ್ಯ ನಾಗರಾಜ ಅಸುಂಡಿ ವರನ್ನು ಕಾಂಗ್ರೆಸ್ ನಾಯಕರ ಅಣತಿಯಂತೆ ಅಪಹರಣ ಮಾಡಿರುವವರನ್ನು ತಕ್ಷಣ ಪತ್ತೆಮಾಡಿ, ಅವರ ಕುಟುಂಬಕ್ಕೆ ಒಪ್ಪಿಸುವಂತೆ ಆಗ್ರಹಿಸಿ ಹಾಗೂ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ಖಂಡಿಸಿ ಶುಕ್ರವಾರ ಬೆಳಗಾವಿ ಎಸ್.ಪಿ ಕಚೇರಿ ಮುಂದೆ ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಪ್ರಮುಖ ಸುದ್ದಿ :-   ಈ ಬಾರಿ ಮೈಸೂರು ದಸರಾ ಉದ್ಘಾಟಿಸಲಿದ್ದಾರೆ ಹಿರಿಯ ಸಾಹಿತಿ ಹಂ.ಪ. ನಾಗರಾಜಯ್ಯ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement