ಬೆಳಗಾವಿ : ಜನರಿಗೆ ನ್ಯಾಯ ಕೊಡಿಸಬೇಕಿದ್ದ ಪೊಲೀಸನೊಬ್ಬ ತನ್ನ ಪತ್ನಿಯ ಮೇಲೆ ಸಂಶಯ ಪಟ್ಟು ಆಕೆಯನ್ನು ಶೆಡ್‌ನಲ್ಲಿ ಕೂಡಿಹಾಕಿ ಹಲ್ಲೆ ಮಾಡಿ ಮೈಮೇಲೆ ಬರೆ ಎಳೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ವಿಜಯಪುರ ಜಿಲ್ಲೆಯ ತಿಕೋಟಾದಲ್ಲಿ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಈತ ಹೆಂಡತಿಯ ನಡತೆ ಬಗ್ಗೆ ಸಂಶಯ ಪಟ್ಟು ಎರಡು ತಿಂಗಳಿನಿಂದ ಶೆಡ್‌ನಲ್ಲಿ ಕೂಡಿಟ್ಟು ಆಕೆಗೆ ಮೈಮೇಲೆ ಬರೆ ಹಾಕಿದ್ದಾನೆ ಎಂದು ತಪ್ಪಿಸಿಕೊಂಡು ಬಂದು ಆಸ್ಪತ್ರೆಗೆ ದಾಖಲಾಗಿರುವ ಪತ್ನಿ ಪ್ರತಿಮಾ ಯಲ್ಲಪ್ಪ ಅಸಗೆ ಆರೋಪಿಸಿದ್ದಾಳೆ.
ರಾಯಬಾಗ ತಾಲೂಕಿನ ನಿಡಗುಂಡಿ ಗ್ರಾಮದ ಪ್ರತಿಮಾ ಅವರನ್ನು ಅಥಣಿ ತಾಲೂಕಿನ ಕುನ್ನಾಳ ಗ್ರಾಮದ ಯಲ್ಲಪ್ಪ ಅಗಸೆ ಎಂಬಾತನಿಗೆ 10 ವರ್ಷಗಳ ಹಿಂದೆಯೇ ಮದುವೆ ಮಾಡಿಕೊಡಲಾಗಿದೆ. ಸದ್ಯ ಯಲ್ಲಪ್ಪ ವಿಜಯಪುರ ತಾಲೂಕಿನ ತಿಕೋಟಾದಲ್ಲಿ ಪೊಲೀಸ್ ಪೇದೆಯಾಗಿ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದೆ.
ಇವರಿಗೆ ಮೂವರು ಮಕ್ಕಳಿದ್ದರೂ ಪತ್ನಿಯ ಶೀಲ ಶಂಕಿಸಿದ್ದ ಈತ ಆಕೆಯನ್ನು ಶೆಡ್‌ನಲ್ಲಿ ಕೂಡಿ ಹಾಕಿ ಮನಸೋ ಇಚ್ಛೆ ಥಳಿಸಿದ್ದ. ಅಲ್ಲದೆ, ಆಕೆಯ ಮೈಮೇಲೆ ಮಾಡಿ ಬರೆ ಹಾಕಿದ್ದಾನೆ. ನನ್ನ ಪತಿ ಮಾತ್ರ ನನ್ನ ಮೇಲೆ ಹಲ್ಲೆ ಮಾಡಿಲ್ಲ. ಆತನ ಅಕ್ಕ, ತಂಗಿಯರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪತ್ನಿ ಮಾಧ್ಯಮದವರ ಮುಂದೆ ಆರೋಪಿಸಿದ್ದಾಳೆ.
ನನ್ನ ತವರು ಮನೆಯವರು ನನ್ನನ್ನು ನೋಡಲು ಬಂದಾಗ ಅವರಿಗೂ ಸಹ ನನ್ನ ಪತಿ ಬೆದರಿಕೆ ಹಾಕಿದ್ದಲ್ಲದೆ, ನಿಮ್ಮ ಮಗಳು ಬೇರೆಯವರೊಂದಿಗೆ ಓಡಿ ಹೋಗಿದ್ದಾಳೆ ಎಂದು ದೂರುಕೊಟ್ಟು ನಿಮ್ಮ ಮೇಲೆಯೇ ಕೇಸ್ ದಾಖಲಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಪ್ರತಿಮಾ ಆರೋಪಿಸಿದ್ದಾರೆ.
ಶೆಡ್‌ನಲ್ಲಿ ಯಾರೂ ಇಲ್ಲದ ವೇಳೆ ತಪ್ಪಿಸಿಕೊಂಡು ಬಂದು ಬೆಳಗಾವಿಯ ಮಹಿಳಾ ಸಂಘದ ಸಹಾಯದಿಂದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನಾಳೆ ಬೆಳಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಭೇಟಿಯಾಗಿ ನನ್ನ ಪತಿಯ ಮೇಲೆ ದೂರು ಕೊಡುವುದಾಗಿ ಪ್ರತಿಮಾ ಸುದ್ದಿಗಾರರ ಮುಂದೆ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ