ಕಲಬುರಗಿ: ಭಾರೀ ಮಳೆಯ ಹಿನ್ನೆಲೆಯಲ್ಲಿ ಕರ್ನಾಟಕದ ಐತಿಹಾಸಿಕ ಸ್ಮಾರಕವಾದ ಕಲಬುರಗಿ ಜಿಲ್ಲೆಯ ಮಳಖೇಡದ ರಾಷ್ಟ್ರಕೂಟರ ಕೋಟೆ ಗೋಡೆ ಕುಸಿದು ಬಿದ್ದಿದೆ.
ಕಲಬುರಗಿ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ಮಳಖೇಡ ರಾಷ್ಟ್ರಕೂಟರ ಕೋಟೆ ಗೋಡೆ ಕುಸಿದುಬಿದ್ದಿದೆ. ಮಳೆಯಿಂದಾಗಿ ಕೋಟೆಯ ಗೋಡೆಗಳಲ್ಲಿ ನೀರು ನಿಂತಿದೆ. ನಿರಂತರವಾಗಿ ಸುರಿದ ಮಳೆಯಿಂದಾಗಿ ಮಳೆಗೆ ಕೋಟೆ ಗೋಡೆಗಳು ತೇವಗೊಂಡಿದ್ದು, ಮಣ್ಣು ಸಡಿಲವಾಗಿ ಕಲ್ಲಿನ ಗೋಡೆ ಕುಸಿದುಬಿದ್ದಿದೆ ಎನ್ನಲಾಗುತ್ತಿದೆ. ಗೋಡೆ ಕುಸಿಯುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಗೋಡೆ ಕುಸಿತದಿಂದ ಕೋಟೆ ಅಕ್ಕಪಕ್ಕದ ನಿವಾಸಿಗಳು ಆತಂಕಗೊಂಡಿದ್ದಾರೆ. ಅದೃಷ್ಟವಶಾತ್ ಯಾರಿಗೂ ಪ್ರಾಣ ಹಾನಿಯಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಜೀರ್ಣೋದ್ಧಾರ ಮಾಡಿದ್ದ ಸರ್ಕಾರ
ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಿಸಿದ್ದ ಈ ಕೋಟೆಗೆ ಐತಿಹಾಸಿಕವಾಗಿ ಮಹತ್ವವಿದೆ. ರಾಷ್ಟ್ರಕೂಟರ ರಾಜ ಅಮೋಘವರ್ಷ ನೃಪತುಂಗ ಮಳಖೇಡ (ಮಾನ್ಯಖೇಟ) ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ಆಸ್ಥಾನದಲ್ಲಿದ್ದ ಕವಿ ಶ್ರೀವಿಜಯ ‘ಕವಿರಾಜ ಮಾರ್ಗ’ ಗ್ರಂಥ ಬರೆದಿದ್ದ. ಇದು ಕನ್ನಡದ ಮೊದಲ ಉಪಲಬ್ದ ಕೃತಿ ಎಂದು ಹೆಸರಾಗಿದೆ. ಇಂತಹ ಐತಿಹಾಸಿಕ ಚರೀತ್ರೆಯುಳ್ಳ ಮಳಖೇಡ ಕೋಟೆಯನ್ನು 2016-18ರ ಅವಧಿಯಲ್ಲಿ ಅಂದಿನ ಸಚಿವರಾಗಿದ್ದ ಡಾ.ಶರಣಪ್ರಕಾಶ ಪಾಟೀಲ ಅವರು 5 ಕೋಟಿ ರೂ ಅನುದಾನ ನೀಡಿ ಜೀರ್ಣೋದ್ಧಾರ ಮಾಡಿಸಿದ್ದರು.
ಅಲ್ಲದೆ, ಅಂದಿನ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ 1 ಕೋಟಿ ರೂ. ಅನುದಾನ ನೀಡಿದ್ದರು. ಜೀರ್ಣೋದ್ಧಾರದ ನಂತರ 2018ರಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಪಾಟೀಲ ನೇತೃತ್ವದಲ್ಲಿ ಸರ್ಕಾರದಿಂದ ರಾಷ್ಟ್ರಕೂಟರ ಉತ್ಸವ ನಡೆಯಿತು. ಮಳೆಗೆ ಕೋಟೆಯ ಹಳೆ ಗೋಡೆಗಳು ಬಿದ್ದಿಲ್ಲ. ಆದರೆ, ಜೀರ್ಣೋದ್ಧಾರ ಮಾಡಿದ ಗೋಡೆಯೇ ಬಿದ್ದಿರುವುದು ಚರ್ಚೆಗೆ ಗ್ರಾಸವಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ