ಮೈಸೂರು : ಸಿಎಂ ಸಿದ್ದರಾಮಯ್ಯ ಅವರು ಅನುಮತಿ ನೀಡಿದರೆ ನಾನು ಮುಖ್ಯಮಂತ್ರಿ ಆಗುತ್ತೇನೆ, ಆದರೆ ಸದ್ಯಕ್ಕೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅಚ್ಚರಿ ಹೇಳಿಕೆ ನೀಡುವ ಮೂಲಕ ಪರೋಕ್ಷವಾಗಿ ಮುಖ್ಯಮಂತ್ರಿ ಆಗುವ ಬಯಕೆ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಅನುಮತಿ ಕೊಟ್ಟರೆ ನಾನು ಮುಖ್ಯಮಂತ್ರಿ ಆಗುತ್ತೇನೆ. ನಾನು ಸಚಿವನಾಗಿ ದಣಿದಿದ್ದೇನೆ. ಇನ್ನೇನಿದ್ದರೂ ಮುಖ್ಯಮಂತ್ರಿ ಆಗಬೇಕು ಅಷ್ಟೇ. ನನಗೆ ಮುಖ್ಯಮಂತ್ರಿ ಆಗುವ ಆಗುವ ಆಸೆ ಇದೆ. ನಿಮ್ಮಂಥ ಜನರಿಗೂ ಆಸೆ ಇರುತ್ತದೆ. ಜೀವನದಲ್ಲಿ ಗುರಿ ಮುಖ್ಯ. ನಾನು ವಯಸ್ಸಿನಲ್ಲಿ ಸಿದ್ದರಾಮಯ್ಯ ಅವರಿಗಿಂತ 2 ವರ್ಷ ದೊಡ್ಡವ. ಹೈಕಮಾಂಡ್ ಅವಕಾಶ ನೀಡಿದರೂ ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯ ಅನುಮತಿ ನೀಡಬೇಕು. ನಾನು ಸಿದ್ದರಾಮಯ್ಯ ಒಳ್ಳೆಯ ಸ್ನೇಹಿತರು. 5 ವರ್ಷ ಮುಖ್ಯಮಂತ್ರಿಯಾಗಿ ಇರುತ್ತಾರೆ ಎಂದರು.
ಸದ್ಯ ಮುಖ್ಯಮಂತ್ರಿಯ ಬದಲಾವಣೆ ಚರ್ಚೆ ನಡೆಯುತ್ತಿಲ್ಲ. ನನಗೆ ಗೊತ್ತಿಲ್ಲದೆ ಯಾವ ಚರ್ಚೆಯೂ ನಡೆಯಲು ಸಾಧ್ಯವಿಲ್ಲ. ಪರಮೇಶ್ವರ ಹಾಗೂ ಜಾರಕಿಹೊಳಿ ಮನೆಯಲ್ಲಿ ನಡೆದಿರುವುದು ಇಲಾಖೆಗೆ ಸಂಬಂಧಪಟ್ಟ ಸಭೆಯಷ್ಟೇ ಎಂದು ಹೇಳಿದರು.
ಪ್ರತಿದಿನ ಫೋನ್ ಕದ್ದಾಲಿಕೆ…
ಫೋನ್ ಕದ್ದಾಲಿಕೆ ಆರೋಪಕ್ಕೆ ಸಂಬಂಧಿಸಿದಂತೆ ಫೋನ್ ಟ್ಯಾಪಿಂಗ್ ಆರೋಪ ಬಂದ ತಕ್ಷಣ ರಾಮಕೃಷ್ಣ ಹೆಗೆಡೆ ಅವರು ರಾಜೀನಾಮೆ ನೀಡಿದ್ದರು. ಆದರೆ ಈಗ ಪ್ರತಿದಿನವೂ ಫೋನ್ ಕದ್ದಾಲಿಕೆ ನಡೆಯುತ್ತಿದೆ. ಈ ಹಿಂದೆ ಮೌಲ್ಯಾಧರಿತ ರಾಜಕಾರಣ ಮಾಡುತ್ತಿದ್ದರು. ಅದೇ ರೀತಿ ನಡೆದು ಕೊಳ್ಳುತ್ತಿದ್ದರು. ಈಗ ಮೌಲ್ಯಾಧಾರಿತ ರಾಜಕಾರಣವೇ ನಡೆಯುತ್ತಿಲ್ಲ ಎಂದು ವಿಷಾದಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ