ಕೆಪಿಎಸ್​​ಸಿ ಪರೀಕ್ಷೆಯಲ್ಲಿ ಗೊಂದಲ : ಮರುಪರೀಕ್ಷೆ ನಡೆಸಲು ಸಿಎಂ ಸಿದ್ದರಾಮಯ್ಯ ಸೂಚನೆ

ಬೆಂಗಳೂರು: ಇತ್ತೀಚೆಗೆ ನಡೆದ ಕರ್ನಾಟಕ ಲೋಕ ಸೇವಾ ಆಯೋಗದ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಹುದ್ದೆ ಪರೀಕ್ಷೆಯಲ್ಲಿನ ಎಡವಟ್ಟುಗಳ ಹಿನ್ನೆಲೆಯಲ್ಲಿ ಮರುಪರೀಕ್ಷೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ Xನಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ”ಕೆಪಿಎಸ್‌ಸಿ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ಪರೀಕ್ಷೆಯಲ್ಲಿ ಕನ್ನಡಕ್ಕೆ ಅನುವಾದ ಮಾಡಲ್ಪಟ್ಟ ಪ್ರಶ್ನೆಗಳು ಅಸಮರ್ಪಕವಾಗಿದ್ದವೆಂಬ ವಿಚಾರ ನನ್ನ ಗಮನಕ್ಕೆ ಬಂದ ತಕ್ಷಣ, ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ ಮುಂದಿನ ಎರಡು ತಿಂಗಳುಗಳ ಒಳಗೆ ಮರುಪರೀಕ್ಷೆ ಮಾಡುವಂತೆ ಕೆಪಿಎಸ್‌ಸಿಗೆ ಸೂಚನೆ ನೀಡಿದ್ದೇನೆ” ಎಂದು ತಿಳಿಸಿದ್ದಾರೆ.

“ಕರ್ತವ್ಯ ಲೋಪವೆಸಗಿದ ಅಧಿಕಾರಿಗಳನ್ನು ಸೇವೆಯನ್ನು ಅಮಾನತು ಮಾಡಲಾಗಿದೆ. ಮುಂಬರುವ ಪರೀಕ್ಷೆಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ, ಸಮರ್ಪಕವಾಗಿ ನಡೆಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ನಾವು ನೇಮಕಾತಿ ಪ್ರಕ್ರಿಯೆಗಳ ಸಮಗ್ರತೆ ಮತ್ತು ನಂಬಿಕಾರ್ಹತೆಯನ್ನು ಎತ್ತಿಹಿಡಿದು, ಪರೀಕ್ಷಾರ್ಥಿಗಳ ಹಿತರಕ್ಷಿಸಲು ಬದ್ಧರಾಗಿದ್ದೇವೆ” ಎಂದು ತಿಳಿಸಿದ್ದಾರೆ.

https://twitter.com/siddaramaiah/status/1830506436901679354?ref_src=twsrc%5Etfw%7Ctwcamp%5Etweetembed%7Ctwterm%5E1830506436901679354%7Ctwgr%5Ef6647f76e43960123a778d5fb6819079ecd7de23%7Ctwcon%5Es1_&ref_url=https%3A%2F%2Fkannadanewsnow.com%2Fkannada%2Fbig-breaking-cm-siddaramaiah-instructs-to-conduct-kas-preliminary-re-examination%2F

ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‍ಸಿ) 384 ಗೆಜೆಟೆಡ್ ಪ್ರೊಬೆಷನರಿ (ಕೆಎಎಸ್) ಹುದ್ದೆಗಳಿಗೆ ಆಗಸ್ಟ್​ 27ರಂದು ನಡೆಸಿದ್ದ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಗೊಂದಲದಿಂದ ಕೂಡಿತ್ತು ಎಂದು ಹಲವಾರು ಅಭ್ಯರ್ಥಿಗಳು ಆರೋಪಿಸಿದ್ದರು. ಕೆಪಿಎಸ್‍ಸಿ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಲ್ಲಿ ಹಲವಾರು ತಪ್ಪುಗಳಿವೆ. ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಕೆಲವು ಪ್ರಶ್ನೆಗಳು ತದ್ವಿರುದ್ಧವಾಗಿವೆ ಎಂದು ಆಕ್ಷೇಪಗಳು ವ್ಯಕ್ತವಾಗಿದ್ದವು. ಈ ಸಂಬಂಧ ಕನ್ನಡ ಪರ ಸಂಘಟನೆಗಳು ಪ್ರತಿಭಟನೆಗೂ ಮುಂದಾಗಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಮರು ಪರೀಕ್ಷೆ ನಡೆಸುವಂತೆ ಸೂಚನೆ ನೀಡಿದ್ದಾರೆ.

ಕೆಪಿಎಸ್‌ಸಿ (KPSC Exam) ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯಲ್ಲಿ ಆಗಿರುವ ಘೋರ ಲೋಪಗಳನ್ನ ಒಪ್ಪಿಕೊಂಡು ಮರುಪರೀಕ್ಷೆ ನಡೆಸಲು ಸರ್ಕಾರ ಕೈಗೊಂಡಿರುವ ನಿರ್ಧಾರ ಅತ್ಯಂತ ಸ್ವಾಗತಾರ್ಹವಾಗಿದ್ದು, ಇದು ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ಹಾಗು ಪ್ರತಿಪಕ್ಷಗಳ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆ ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಮರುಪರೀಕ್ಷೆಯನ್ನ ಸಮರ್ಪಕವಾಗಿ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ವಿಪಕ್ಷ ನಾಯಕ ಆರ್‌.ಅಶೋಕ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಉಳಿದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತೊಂದರೆಯಾಗದಂತೆ ಸೂಕ್ತ ಪರೀಕ್ಷಾ ದಿನಾಂಕ ನಿಗದಿ ಮಾಡಬೇಕು, ಅಭ್ಯರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಪರೀಕ್ಷಾ ಕೇಂದ್ರಗಳ ಹಂಚಿಕೆ ಮಾಡಬೇಕು, ಪ್ರಶ್ನೆ ಪತ್ರಿಕೆ ರಚನೆ, ಕನ್ನಡಕ್ಕೆ ತರ್ಜುಮೆ ಸೇರಿದಂತೆ ಎಲ್ಲ ಅಂಶಗಳನ್ನ ಪರಿಗಣಿಸಿ ಈ ಹಿಂದೆ ಆದ ತಪ್ಪುಗಳು, ಲೋಪದೋಷಗಳು ಮರುಕಳಿಸದಂತೆ ಅತ್ಯಂತ ಜಾಗರೂಕತೆಯಿಂದ, ಸುವ್ಯವಸ್ಥಿತವಾಗಿ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಮುಖ ಸುದ್ದಿ :-   ಈ ಬಾರಿ ಮೈಸೂರು ದಸರಾ ಉದ್ಘಾಟಿಸಲಿದ್ದಾರೆ ಹಿರಿಯ ಸಾಹಿತಿ ಹಂ.ಪ. ನಾಗರಾಜಯ್ಯ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement