ನವದೆಹಲಿ : ಭಾರತದ ಮಾಜಿ ಬ್ಯಾಟರ್ ಯುವರಾಜ ಸಿಂಗ್ ಅವರ ತಂದೆ ಯೋಗರಾಜ ಸಿಂಗ್ ಅವರು ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ.
ಜೀ ಸ್ವಿಚ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ಯೋಗರಾಜ ಸಿಂಗ್ ಅವರು ಧೋನಿಯನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ. “ನಾನು ಎಂ.ಎಸ್. ಧೋನಿಯನ್ನು ಕ್ಷಮಿಸುವುದಿಲ್ಲ. ಆತ ತನ್ನ ಮುಖವನ್ನು ಕನ್ನಡಿಯಲ್ಲಿ ನೋಡಬೇಕು. ಆತ ಬಹಳ ದೊಡ್ಡ ಕ್ರಿಕೆಟಿಗ, ಆದರೆ ಆತ ನನ್ನ ಮಗನ ವಿರುದ್ಧ ಏನು ಮಾಡಿದ್ದಾನೆ, ಎಲ್ಲವೂ ಈಗ ಹೊರಬರುತ್ತಿದೆ; ಅದನ್ನು ಜೀವನದಲ್ಲಿ ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ. ನಾನು ಜೀವನದಲ್ಲಿ ಎರಡು ಕೆಲಸಗಳನ್ನು ಮಾಡಿಲ್ಲ – ಮೊದಲನೆಯದಾಗಿ, ನನಗೆ ತಪ್ಪು ಎಸಗಿದ ಯಾರನ್ನೂ ನಾನು ಕ್ಷಮಿಸಿಲ್ಲ, ಮತ್ತು ಎರಡನೆಯದಾಗಿ, ನನ್ನ ಕುಟುಂಬ ಸದಸ್ಯರಾಗಲಿ ಅಥವಾ ನನ್ನ ಮಕ್ಕಳಾಗಲಿ ಅವರನ್ನು ನನ್ನ ಜೀವನದಲ್ಲಿ ಎಂದಿಗೂ ತಬ್ಬಿಕೊಂಡಿಲ್ಲ ಎಂದು ಯೋಗರಾಜ ಹೇಳಿದರು.
ಯುವರಾಜ್ ತನ್ನ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಮೊದಲೇ ಕೊನೆಗೊಳಿಸುವಂತೆ ಬಲವಂತ ಮಾಡಿದ ಧೋನಿಯನ್ನು ದೂಷಿಸುವುದನ್ನು ಯೋಗರಾಜ ಸಿಂಗ್ ಎಂದಿಗೂ ನಿಲ್ಲಿಸಲಿಲ್ಲ. “ಆ ವ್ಯಕ್ತಿ (ಧೋನಿ) ನನ್ನ ಮಗನ ಜೀವನವನ್ನು ಹಾಳುಮಾಡಿದ್ದಾನೆ, ನನ್ನ ಮಗ ಇನ್ನೂ ನಾಲ್ಕೈದು ವರ್ಷಗಳ ಕಾಲ ಆಡಬಹುದಿತ್ತು. ಗೌತಮ ಗಂಭೀರ್ ಮತ್ತು ವೀರೇಂದ್ರ ಸೆಹ್ವಾಗ್ ಕೂಡ ಯುವರಾಜ್ ಸಿಂಗ್ ಅವರಂತಹವರು ಮತ್ತೊಬ್ಬರಿಲ್ಲ ಎಂದು ಹೇಳಿದ್ದಾರೆ ಎಂದು ತಂದೆ ಯೋಗರಾಜ ಹೇಳಿದ್ದಾರೆ.
“ಕ್ಯಾನ್ಸರ್ ಇದ್ದರೂ ದೇಶಕ್ಕಾಗಿ ಆಡಿದ ಮತ್ತು ವಿಶ್ವಕಪ್ ಗೆದ್ದಿದ್ದಕ್ಕಾಗಿ ಭಾರತ ಅವರಿಗೆ ಭಾರತ ರತ್ನವನ್ನು ನೀಡಬೇಕು” ಎಂದು ಯೋಗರಾಜ ಒತ್ತಾಯಿಸಿದ್ದಾರೆ.
ಯುವರಾಜ ಸಿಂಗ್ ತಂದೆ ಧೋನಿ ಮೇಲೆ ವಾಗ್ದಾಳಿ ನಡೆಸಿರುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ, 66 ವರ್ಷ ವಯಸ್ಸಿನ ಯೋಗರಾಜ ಅವರು ಧೋನಿಯಿಂದಾಗಿ ಸಿಎಸ್‌ಕೆ (CSK) ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ಪ್ರಶಸ್ತಿ ಗೆಲ್ಲಲು ವಿಫಲವಾಯಿತು ಎಂದು ಹೇಳಿದ್ದರು. ಯುವರಾಜ್ ಬಗ್ಗೆ ಧೋನಿ ಅಸೂಯೆ ಹೊಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
“ಸಿಎಸ್‌ಕೆ (CSK) ತಂಡವು ಐಪಿಎಲ್ 2024 ಅನ್ನು ಕಳೆದುಕೊಂಡಿತು. ಅವರು ಏಕೆ ಸೋತರು? ನೀವು ಏನನ್ನು ಬಿತ್ತುತ್ತೀರೋ ಅದನ್ನೇ ಕೊಯ್ಯುತ್ತೀರಿ. ಯುವರಾಜ ಸಿಂಗ್ ಐಸಿಸಿ ರಾಯಭಾರಿಯಾಗಿದ್ದಾರೆ, ಅವರಿಗೆ ಹ್ಯಾಟ್ಸ್ ಆಫ್! ಮತ್ತು ಈ ಅಸೂಯೆ ಪಟ್ಟ ಧೋನಿ, ಆತ ಎಲ್ಲಿದ್ದಾನೆ? ಆತ ಯುವರಾಜಗೆ ಹಸ್ತಲಾಘವ ಮಾಡಲಿಲ್ಲ, ಮತ್ತು ಈ ವರ್ಷ ಸಿಎಸ್‌ಕೆ ವಿಫಲವಾಗಲು ಇದೇ ಕಾರಣ ”ಎಂದು ಯೋಗರಾಜ್ ವೈರಲ್ ವೀಡಿಯೊದಲ್ಲಿ ಹೇಳಿಕೊಂಡಿದ್ದಾರೆ.
ಎಂ.ಎಸ್. ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಟಿ20 ವಿಶ್ವಕಪ್ 2007 ಮತ್ತು 2011 ರ ಏಕದಿನ ವಿಶ್ವಕಪ್ ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ಯುವರಾಜ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ಮಾಜಿ ಪಂಜಾಬ್ ಬ್ಯಾಟರ್ ನಂತರದ ಪಂದ್ಯಾವಳಿಯಲ್ಲಿ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಆಗಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ