ರೇಣುಕಾಸ್ವಾಮಿ ಕೊಲೆ ಪ್ರಕರಣ : ನಟ ದರ್ಶನ್‌-ಸಹಚರರ ಕ್ರೌರ್ಯ ಅನಾವರಣ ; ರೇಣುಕಾಸ್ವಾಮಿ ಅಂಗಲಾಚುತ್ತಿರುವ ಫೋಟೋ ವೈರಲ್

ಬೆಂಗಳೂರು : ನಟ ದರ್ಶನ್ ತೂಗುದೀಪ ಅವರ ಆಜ್ಞೆಯ ಮೇರೆಗೆ ಕೊಲೆಯಾದ 33 ವರ್ಷದ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಸಾಯುವ ಕೆಲವೇ ಕ್ಷಣಗಳ ಮೊದಲಿನ ಹೊಸ ಫೋಟೋಗಳು ಹೊರಬಂದಿವೆ. ಹೊರಬಂದ ಎರಡು ಫೋಟೊಗಳ ಪೈಕಿ ಒಂದರಲ್ಲಿ ರೇಣುಕಾಸ್ವಾಮಿ ಪ್ರಾಣಭಯದಿಂದ ಬೇಡಿಕೊಳ್ಳುತ್ತಿರುವುದು ಕಾಣುತ್ತದೆ.
ಎರಡೂ ಚಿತ್ರಗಳಲ್ಲಿ ರೇಣುಕಾಸ್ವಾಮಿ ಶರ್ಟ್ ಧರಿಸಿಲ್ಲ, ಹಿನ್ನಲೆಯಲ್ಲಿ ಟ್ರಕ್‌ಗಳು ನಿಂತಿವೆ. ಅವರ ದೇಹದ ಮೇಲೆ ಗಾಯದ ಗುರುತು ಕೂಡ ಕಾಣಿಸುವಂತಿದೆ. ಎರಡನೇ ಚಿತ್ರದಲ್ಲಿ, ರೇಣುಕಾಸ್ವಾಮಿ ನೆಲದ ಮೇಲೆ ಮಲಗಿರುವುದನ್ನು ನೋಡಬಹುದು.
ಆರೋಪಿಗಳ ಮೊಬೈಲ್​ನಲ್ಲಿ ಇದನ್ನು ಸೆರೆಹಿಡಿದುಕೊಳ್ಳಲಾಗಿತ್ತು. ಆ ಬಳಿಕ ಇದನ್ನು ಡಿಲೀಟ್ ಮಾಡಿದ್ದರು. ಈಗ ರಿಟ್ರೀವ್ (ದತ್ತಾಂಶ ಮರುಸಂಗ್ರ) ಮಾಡಿದಾಗ ಈ ಫೊಟೊಗಳು ಸಿಕ್ಕಿವೆ. ಇದು ಪ್ರಕರಣದಲ್ಲಿ ಪ್ರಮುಖ ಸಾಕ್ಷಿ ಆಗಬಹುದಾಗಿದೆ.

ಜೂನ್ 9 ರಂದು ಬೆಂಗಳೂರಿನ ಫ್ಲೈಓವರ್ ಬಳಿ ರೇಣುಕಾಸ್ವಾಮಿ ಶವ ಪತ್ತೆಯಾಗಿತ್ತು. ಪೊಲೀಸರ ಪ್ರಕಾರ, ದರ್ಶನ್ ಅಭಿಮಾನಿಯಾಗಿದ್ದ 33 ವರ್ಷದ ವ್ಯಕ್ತಿ ರೇಣುಕಾಸ್ವಾಮಿಯನ್ನು ನಟ ದರ್ಶನ್‌ ನಿರ್ದೇಶನದ ಮೇರೆಗೆ ಗ್ಯಾಂಗ್ ಅಪಹರಿಸಿ ಕೊಲೆ ಮಾಡಿದೆ, ರೇಣುಕಾಸ್ವಾಮಿ ನಟಿ ಹಾಗೂ ಪವಿತ್ರ ಗೌಡ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಿದ್ದ ಎಂದು ಆರೋಪಿಸಲಾಗಿದೆ.
ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ರೇಣುಕಾಸ್ವಾಮಿ ಅವರಿಗೆ ದೊಣ್ಣೆಗಳಿಂದ ಹೊಡೆಯಲಾಗಿದೆ ಮತ್ತು “ಹಲವು ಗಾಯಗಳ ಪರಿಣಾಮವಾಗಿ ಅವರು ಆಘಾತ ಮತ್ತು ರಕ್ತಸ್ರಾವದಿಂದಾಗಿ” ಸಾವಿಗೀಡಾಗಿದ್ದಾರೆ. ಅವರಿಗೆ ವಿದ್ಯುತ್ ಶಾಕ್‌ ಸಹ ನೀಡಲಾಗಿತ್ತು ಎಂದು ವರದಿಯು ಸೂಚಿಸಿದೆ.

ಪ್ರಮುಖ ಸುದ್ದಿ :-   ಸಿಖ್ಖರ ಭಾವನೆಗಳಿಗೆ ಧಕ್ಕೆ ತಂದ ಆರೋಪ ; ರಾಹುಲ್‌ ಗಾಂಧಿ ವಿರುದ್ಧ 3 ಎಫ್‌ಐಆರ್‌ ದಾಖಲು

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 15 ಮಂದಿಯನ್ನು ಬಂಧಿಸಲಾಗಿದೆ. ಅವರ ನ್ಯಾಯಾಂಗ ಬಂಧನ ಸೆಪ್ಟೆಂಬರ್ 9 ರಂದು ಕೊನೆಗೊಳ್ಳಲಿದೆ.
ಬೆಂಗಳೂರು ಪೊಲೀಸರು ಸ್ಥಳೀಯ ನ್ಯಾಯಾಲಯದಲ್ಲಿ ಕೊಲೆ ಪ್ರಕರಣದ ಆರೋಪಪಟ್ಟಿ ಸಲ್ಲಿಸಿದ್ದಾರೆ. ಸುಮಾರು 230 ಸಾಕ್ಷ್ಯಗಳನ್ನೊಳಗೊಂಡ ಆರೋಪಪಟ್ಟಿಯಲ್ಲಿ ದರ್ಶನ್ ಅವರ ಬಟ್ಟೆ, ಪವಿತ್ರಾ ಗೌಡ ಅವರ ಪಾದರಕ್ಷೆಗಳ ಮೇಲೆ ರಕ್ತದ ಕಲೆಗಳು ಪತ್ತೆಯಾಗಿವೆ ಎಂದು ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement