ವೀಡಿಯೊ…| ಊಟ ಇಲ್ಲ ಅಂದಿದ್ದಕ್ಕೆ ಕೋಪಗೊಂಡು ಹೊಟೇಲಿಗೆ ಟ್ರಕ್ ಡಿಕ್ಕಿ ಹೊಡೆಸಿದ ಪಾನಮತ್ತ ಚಾಲಕ…!

ಆಘಾತಕಾರಿ ಘಟನೆಯೊಂದರಲ್ಲಿ ಪುಣೆ ಜಿಲ್ಲೆಯ ಇಂದಾಪುರ ತಾಲೂಕಿನಲ್ಲಿ ಪಾನಮತ್ತ ಚಾಲಕನೊಬ್ಬ ತನಗೆ ಊಟ ನಿರಾಕರಿಸಿದ ಕಾರಣಕ್ಕೆ ತನ್ನ ಟ್ರಕ್ ಅನ್ನು ಹೊಟೇಲಿಗೆ ಡಿಕ್ಕಿ ಹೊಡೆಸಿದ್ದಾನೆ. ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಿಕ್ಕಿರುವ ಮಾಹಿತಿಯ ಪ್ರಕಾರ, ಪುಣೆ-ಸೋಲಾಪುರ ಹೆದ್ದಾರಿಯಲ್ಲಿರುವ ರಸ್ತೆ ಬದಿಯ ಹೊಟೇಲ್‌ ಗೋಕುಲದಲ್ಲಿ ಈ ಘಟನೆ ನಡೆದಿದೆ. ಹಿಂಗಂಗಾವ್‌ನ ಹೋಟೆಲ್ ಗೋಕುಲ ಬಳಿ ನಿಂತಿದ್ದ ಕೆಲವು ವ್ಯಕ್ತಿಗಳು ರೆಕಾರ್ಡ್ ಮಾಡಿದ ವೀಡಿಯೊದಲ್ಲಿ, ಪಾನಮತ್ತ ಪದೇ ಪದೇ ತನ್ನ ಟ್ರಕ್ ಅನ್ನು ಹೋಟೆಲ್ ಕಟ್ಟಡಕ್ಕೆ ಡಿಕ್ಕಿ ಹೊಡೆಸುತ್ತಿರುವುದನ್ನು ಕಾಣಬಹುದು. ಹೊಟೇಲ್‌  ಹೊರಗೆ ನಿಲ್ಲಿಸಿದ್ದ ಕಾರಿಗೂ ಡಿಕ್ಕಿ ಹೊಡೆಸಿದ್ದಾನೆ.

ಸೊಲ್ಲಾಪುರದಿಂದ ಪುಣೆಗೆ ತೆರಳುತ್ತಿದ್ದ ಚಾಲಕ ಹೊಟೇಲ್‌ ಬಳಿ ಟ್ರಕ್‌ ನಿಲ್ಲಿಸಿದ್ದ. ನಂತರ ಆತ ಒಳಗೆ ಹೋಗಿ ಊಟ ಕೇಳಿದ್ದಾನೆ. ಆದರೆ, ದಿನದ ಮಟ್ಟಿಗೆ ಹೊಟೇಲ್‌ ಬಂದ್ ಆಗಿದ್ದರಿಂದ ಮಾಲೀಕರು ಇಲ್ಲ ಎಂದು ಹೇಳಿದ್ದಾರೆ. ಇದರಿಂದ ಕುಪಿತಗೊಂಡ ಚಾಲಕ ತನ್ನ ಟ್ರಕ್‌ನಲ್ಲಿ ಕುಳಿತು ಹೊಟೇಲ್ ಕಟ್ಟಡಕ್ಕೆ ಹಾನಿ ಮಾಡಲು ಪ್ರಾರಂಭಿಸಿದ್ದಾನೆ. ಈ ಘಟನೆಯಲ್ಲಿ ಒಂದು ದ್ವಿಚಕ್ರ ವಾಹನ ಹಾಗೂ ಎರಡು ನಾಲ್ಕು ಚಕ್ರದ ವಾಹನಗಳಿಗೂ ಹಾನಿಯಾಗಿದೆ.

ಸ್ಥಳೀಯರು ಮಧ್ಯಪ್ರವೇಶಿಸಲು ಪ್ರಯತ್ನಿಸಿದರು ಮತ್ತು ಚಾಲಕನಿಗೆ ವಾಹನ ನಿಲ್ಲಿಸುವಂತೆ ಕೂಗಿಕೊಂಡರು. ಟ್ರಕ್ ಮೇಲೆ ಕಲ್ಲುಗಳನ್ನು ಎಸೆದರು, ಆದರೆ ಆತ ಮಾತ್ರ ಟ್ರಕ್‌ ಚಲಾಯಿಸಿ ಹೊಟೇಲಿಗೆ ಡಿಕ್ಕಿ ಹೊಡೆಸಿ ಮತ್ತಷ್ಟು ಹಾನಿ ಮಾಡಿದ್ದಾನೆ. ಕೊನೆಗೆ ಟ್ರಕ್‌ನ ಚಕ್ರಗಳು ಸಿಕ್ಕಿಹಾಕಿಕೊಂಡಾಗ ಆತ ಟ್ರಕ್‌ ನಿಲ್ಲಿಸಿದ್ದಾನೆ. ಪೊಲೀಸರು ಆತನನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement