ಕಾರವಾರ : ಮನೆಯಲ್ಲಿ ಗಣೇಶನ ಪೂಜೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಹೋದರರ ನಡುವೆ ಜಗಳ ಕೊಲೆಯಲ್ಲಿ ಮುಕ್ತಾಯವಾದ ಘಟನೆ ಜಿಲ್ಲೆಯ ಕಾರವಾರದ ಸಾಯಿಕಟ್ಟಾ ಬಿಂದು ಮಾಧವ ದೇವಸ್ಥಾನದ ಬಳಿ ಶನಿವಾರ ನಡೆದಿದೆ ಎಂದು ವರದಿಯಾಗಿದೆ.
ಮೃತ ವ್ಯಕ್ತಿಯನ್ನು ಸಂದೇಶ ಪ್ರಭಾಕರ ಬೋರ್ಕರ್ ಎಂದು ಗುರುತಿಸಲಾಗಿದೆ. ಮನೀಶ್ ಕಿರಣ ಬೋರ್ಕರ್ ಎಂಬಾತ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ. ಸಂದೇಶ ಪ್ರಭಾಕರ ಬೋರ್ಕರ್ ಹಾಗೂ ಅವರ ಕುಟುಂಬದವರು ಶಿರಸಿಯಲ್ಲಿ ವಾಸಿಸುತ್ತಾರೆ ಎಂದು ಹೇಳಲಾಗಿದೆ.
ಪ್ರತೀ ವರ್ಷ ಗಣಪತಿ ಹಬ್ಬದಂದು ಶಿರಸಿಯಿಂದ ಬರುವ ಕುಟುಂಬಸ್ಥರು ಸೇರಿದಂತೆ ಕಾರವಾರದಲ್ಲಿ ಎಲ್ಲರೂ ಸೇರಿ ಗಣೇಶನ ಹಬ್ಬ ಮಾಡುತ್ತ ಬಂದಿದ್ದಾರೆ. ಶನಿವಾರ ಮಧ್ಯಾಹ್ನ ಗಣಪತಿ ಪೂಜೆ ನಂತರ ಪ್ರಭಾಕರ ಹಾಗೂ ಮನೋಹರ್ ಬೋರ್ಕರ್ ನಡುವೆ ಕಳೆದ ವರ್ಷದ ಹಬ್ಬಕ್ಕೆ ಖರ್ಚು ಮಾಡಿದ ಹಣದ ಲೆಕ್ಕಾಚಾರದ ವಿಚಾರವಾಗಿ ಜಗಳ ನಡೆದಿದೆ. ಪ್ರಭಾಕರ ಎಂಬವರು ಕಳೆದ ವರ್ಷದ ಹಣದ ಲೆಕ್ಕ ನೀಡಿಲ್ಲ ಎಂದು ಕೆಲವರು ಜಗಳ ಮಾಡಿದ್ದಾರೆ. ಈ ವೇಳೆ ಜಗಳ ವಿಕೋಪಕ್ಕೆ ಹೋಗಿ ಕೈಕೈ ಮಿಲಾಯಿಸಿದ್ದಾರೆ. ಈ ವೇಳೆ ಸಂದೇಶ ಪ್ರಭಾಕರ ಬೋರ್ಕರ್ ಹೊಟ್ಟೆಗೆ ಮನೀಶ್ ಬೋರ್ಕರ್ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಸಂದೇಶ ಮೃತಪಟ್ಟಿದ್ದಾನೆ ಎಂದು ಆರೋಪಿಸಲಾಗಿದೆ.
ಘಟನೆ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಮನೀಶ್ ಬೋರ್ಕರ್ ಮತ್ತು ಇನ್ನೂ ಕೆಲವರನ್ನು ವಶಕ್ಕೆ ಪಡೆದಿದ್ದಾರೆ. ಕೊಲೆ ಘಟನೆ ಹಿನ್ನೆಲೆ ವಿಚಾರಣೆ ಮುಂದುವರಿಸಿರುವ ಪೊಲೀಸರು. ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ