ಹಿರಿಯ ಪತ್ರಕರ್ತ ವಸಂತ ನಾಡಿಗೇರ ನಿಧನ

ಬೆಂಗಳೂರು: ಕನ್ನಡದ ಹಿರಿಯ ಪತ್ರಕರ್ತ ವಸಂತ ನಾಡಿಗೇರ ಅವರು ಸೋಮವಾರ ಬೆಳಗಿನ ಜಾವ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 59 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧುಬಳಗದವರನ್ನು ಅಗಲಿದ್ದಾರೆ. ಹಾಲಿ ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿದ್ದರು. ಅವರು ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಕನ್ನಡ ಪ್ರಭ ಮೊದಲಾದ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ.

ವಿಜಯ ಕರ್ನಾಟಕ ಪತ್ರಿಕೆಯಲ್ಲಿ 1998 ರಿಂದ 2015 ರ ವರೆಗೆ ಸುದ್ದಿ ಸಂಪಾದಕರಾಗಿದ್ದರು. ಕಳೆದ ಮೂರೂವರೆ ದಶಕದಿಂದ ಕನ್ನಡ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿದ್ದ ವಸಂತ್​ ನಾಡಿಗೇರ ಅವರು ಪನ್​ ಹೆಡ್ಡಿಂಗ್​, ಸುದ್ದಿಗಳಿಗೆ ಆಕರ್ಷಕ ತಲೆಬರಹ ನೀಡುವುದರಲ್ಲಿ ಜನಪ್ರಿಯರಾಗಿದ್ದರು. ಅವರು ಕನ್ನಡ ಪ್ರಭ, ವಿಜಯಕರ್ನಾಟಕ, ವಿಶ್ವವಾಣಿ ನಂತರ ಎರಡು ವರ್ಷಗಳಿಂದ ಸಂಯುಕ್ತ ಕರ್ನಾಟಕ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು. ಎಂಎಸ್ಸಿ ಪದವಿ ಪಡೆದರೂ ಅವರು ವಿಜ್ಞಾನ ಕ್ಷೇತ್ರಕ್ಕೆ ಹೋಗದೇ ತಮ್ಮ ಆಸಕ್ತಿಯ ಪತ್ರಿಕೋದ್ಯಮ ಕ್ಷೇತ್ರಕ್ಕೆ ಬಂದಿದ್ದರು. ಅವರು ಸಂಯುಕ್ತ ಕರ್ನಾಟಕ ಪತ್ರಿಕೆಯ ಮೂಲಕ ತಮ್ಮ ವೃತ್ತಿಜೀವನ ಆರಂಭಿಸಿದ್ದರು.

ವಸಂತ ನಾಡಿಗೇರ ಅವರು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನವರು. ಅಲ್ಲಿಯೇ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದು ಧಾರವಾಡದಲ್ಲಿ ಬಿಎಸ್​ಸಿ, ಎಂಎಸ್​ಸಿ ಪದವಿ ಪಡೆದರು. ಎಂಬತ್ತರ ದಶಕದಲ್ಲಿ ಸಂಯುಕ್ತ ಕರ್ನಾಟಕದಿಂದ ವೃತ್ತಿ ಜೀವನ ಆರಂಭಿಸಿದ ಅವರು ಕನ್ನಡಪ್ರಭ, ವಿಜಯಕರ್ನಾಟಕ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಖಾದ್ರಿ ಶಾಮಣ್ಣ ಪ್ರಶಸ್ತಿ ಲಭಿಸಿದೆ.
ವಸಂತ ನಾಡಿಗೇರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು, ನಾಡಿನ ಹಿರಿಯ ಪತ್ರಕರ್ತರು, ಸಾಹಿತಿಗಳು ಕಂಬನಿ ಮಿಡಿದಿದ್ದಾರೆ.

ಪ್ರಮುಖ ಸುದ್ದಿ :-   ಅತ್ಯಾಚಾರ ಆರೋಪದ ಪ್ರಕರಣ ; ಶಾಸಕ ಮುನಿರತ್ನಗೆ ಜಾಮೀನು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement