ಕೋಲ್ಕತ್ತಾ: ಕೋಲ್ಕತ್ತಾದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಟ್ರೇನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ ಘೋಷ್ ಮತ್ತು ಆರಂಭದಲ್ಲಿ ತನಿಖೆ ನಡೆಸಿದ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಅವರನ್ನು ತನಿಖಾಧಿಕಾರಿಗಳನ್ನು ಸಿಬಿಐ ಬಂಧಿಸಿದೆ. ತನಿಖೆ ದಾರಿ ತಪ್ಪಿಸಲು ಯತ್ನಿಸಿರುವುದು ಮತ್ತು ಸಾಕ್ಷ್ಯವನ್ನು ನಾಶ ಮಾಡಲು ಯತ್ನಿಸಿದ ಆರೋಪದ ಮೇಲೆ ಸಿಬಿಐ ಅವರನ್ನು ಶನಿವಾರ ಬಂಧಿಸಿದೆ.
ಮಾಜಿ ಪ್ರಾಂಶುಪಾಲ ಸಂದೀಪ ಘೋಷ್ ಮತ್ತು ತಾಲಾ ಪೊಲೀಸ್ ಠಾಣೆಯ ಠಾಣಾಧಿಕಾರಿ (SHO) ಅಭಿಜಿತ್ ಮೊಂಡಲ್, ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ತನಿಖೆಯನ್ನು ಹಾಳುಮಾಡಲು ಪ್ರಯತ್ನಿಸಿದರು ಎಂದು ಆರೋಪಿಸಲಾಗಿದೆ. ಬಂಧನಗಳ ಬಗ್ಗೆ ನಿರ್ದಿಷ್ಟ ವಿವರಗಳು ಇನ್ನೂ ಬಹಿರಂಗವಾಗಿಲ್ಲ, ಆದರೂ ಮಾಜಿ ಪ್ರಾಂಶುಪಾಲ ಸಂದೀಪ ಘೋಷ್ ಮತ್ತು ಪೊಲೀಸ್ ಅಧಿಕಾರಿ ಅಭಿಜಿತ ಮೊಂಡಲ್ ಇಬ್ಬರೂ ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಿದ್ದಾರೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ತಿರುಚಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇಬ್ಬರನ್ನು ಭಾನುವಾರ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಸಿಬಿಐ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸುವ ನಿರೀಕ್ಷೆಯಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೊತೆಗೆ ನಡೆಯುವ ಸಭೆಯ ನೇರಪ್ರಸಾರ ಮಾಡುವ ಬೇಡಿಕೆಯನ್ನು ತಿರಸ್ಕರಿಸಿದ ನಂತರ ಪ್ರತಿಭಟನಾನಿರತ ವೈದ್ಯರು ಮಮತಾ ಅವರನ್ನು ಭೇಟಿಯಾಗದೆ ಅವರ ಮನೆಯಿಂದ ಹಿಂದಿರುಗಿದ ಕೆಲವೇ ಗಂಟೆಗಳ ನಂತರ ಈ ಬಂಧನಗಳು ನಡೆದಿವೆ. ಹಣಕಾಸು ಅವ್ಯವಹಾರದ ಆರೋಪದ ಪ್ರಕರಣದಲ್ಲಿಯೂ ಸಂದೀಪ ಘೋಷ್ ಅವರನ್ನು ಸಿಬಿಐ ತನಿಖೆ ನಡೆಸುತ್ತಿದೆ.
ಆಗಸ್ಟ್ 9 ರಂದು ಆರ್‌ಜಿ ಕಾರ್ ಮೆಡಿಕಲ್ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ. ಪ್ರಮುಖ ಶಂಕಿತ ಸಂಜಯ ರಾಯ್, ಟ್ರೈನಿ ವೈದ್ಯೆಯ ಶವ ಪತ್ತೆಯಾದ ನಂತರ ಸಿಸಿಟಿವಿಯಲ್ಲಿ ಕಾಣಿಸಿಕೊಂಡಿದ್ದಾನೆ. ಸಿಬಿಐ ಈಗಾಗಲೇ ಸಂಜಯ ರಾಯ್‌ನ ಸುಳ್ಳುಪತ್ತೆ (ಪಾಲಿಗ್ರಾಫ್) ಪರೀಕ್ಷೆಯನ್ನು ನಡೆಸಿದೆ, ಆದರೆ ಆತ ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ ನಾರ್ಕೋ ವಿಶ್ಲೇಷಣೆ ಪರೀಕ್ಷೆಯನ್ನು ನಡೆಸಲು ಸಾಧ್ಯವಾಗಲಿಲ್ಲ, ಇದು ಕಾನೂನಿನ ಪ್ರಕಾರ ಒಪ್ಪಿಗೆ ಪಡೆದು ನಡೆಸಬೇಕಿದೆ.
ಕಲ್ಕತ್ತಾ ಹೈಕೋರ್ಟ್‌ನ ಆದೇಶದ ಮೇರೆಗೆ ಸಿಬಿಐ ಕೋಲ್ಕತ್ತಾ ಪೊಲೀಸರಿಂದ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣವನ್ನು ವಹಿಸಿಕೊಂಡಿದೆ.
ಆಸ್ಪತ್ರೆಯಲ್ಲಿ ನಾಗರಿಕ ಸ್ವಯಂಸೇವಕನಾಗಿದ್ದ ಸಂಜಯ ರಾಯ್ ನನ್ನು ಮಧ್ಯರಾತ್ರಿಯ ನಂತರ ಆಸ್ಪತ್ರೆಯ ಸೆಮಿನಾರ್ ಹಾಲ್‌ಗೆ ಪ್ರವೇಶಿಸುವುದು ಮತ್ತು ಹೊರಬರುವುದು ಕಂಡುಬಂದಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಬಂಧಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ