ಆಘಾತಕಾರಿ ಘಟನೆಯೊಂದರಲ್ಲಿ, ಗುಜರಾತಿನಲ್ಲಿ ಆಸ್ಪತ್ರೆಯ ವೈದ್ಯರು ವೈದ್ಯಕೀಯ ತುರ್ತು ಕೋಣೆಗೆ ಪ್ರವೇಶಿಸುವ ಮೊದಲು ಚಪ್ಪಲಿಯನ್ನು ತೆಗೆದಿಟ್ಟು ಬರುವಂತೆ ರೋಗಿಯ ಕುಟುಂಬದವರಿಗೆ ಸೂಚಿಸಿದ ನಂತರ ಅವರು ವೈದ್ಯರಿಗೆ ಮನಬಂದಂತೆ ಥಳಿಸಿದ್ದಾರೆ ಎಂದು ವರದಿಯಾಗಿದೆ.
ಗುಜರಾತಿನ ಭಾವನಗರದ ಸಿಹೋರ್‌ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಮಹಿಳೆಗೆ ತಲೆಗೆ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಆಕೆಯ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು.
ಸಿಸಿಟಿವಿ ದೃಶ್ಯಗಳ ಪ್ರಕಾರ, ತುರ್ತು ಕೋಣೆಯ ಒಳಗಿನ ಹಾಸಿಗೆಯ ಮೇಲೆ ಮಲಗಿರುವ ಮಹಿಳೆಯ ಪಕ್ಕದಲ್ಲಿ ಕೆಲವರು ನಿಂತಿರುವುದನ್ನು ಕಾಣಬಹುದು. ಕೆಲವು ಸೆಕೆಂಡುಗಳ ನಂತರ, ಡಾ ಜೈದೀಪ್ ಸಿನ್ಹ್ ಗೋಹಿಲ್ ಅವರು ಕೋಣೆಗೆ ಪ್ರವೇಶಿಸಿದರು ಮತ್ತು ತುರ್ತು ಕೊಠಡಿಯಾಗಿದ್ದರಿಂದ ಪಾದರಕ್ಷೆಗಳನ್ನು ತೆಗೆದು ಒಳಗೆ ಬರುವಂತೆ ರೋಗಿಯ ಕುಟುಂಬದವರಿಗೆ ಸೂಚಿಸಿದರು.
ಇದು ವೈದ್ಯ ಮತ್ತು ರೋಗಿಯ ಕುಟುಂಬದ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ನಂತರ ಗುಂಪು ವೈದ್ಯರ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿತು ಮತ್ತು ಹಾಸಿಗೆಯ ಮಲಗಿದ್ದ ಮಹಿಳೆ ಹಾಗೂ ನರ್ಸ್ ತಪ್ಪಿಸಲು ಪ್ರಯತ್ನಿಸಿದರು. ಆದರೂ ಅವರು ಹಲ್ಲೆ ನಡೆಸುವುದನ್ನು ಮುಂದುವರಿಸಿದರು.
ಆರೋಪಿಗಳನ್ನು ಹಿರೇನ್ ದಂಗರ್, ಭಾವದೀಪ ದಂಗರ್ ಮತ್ತು ಕೌಶಿಕ್ ಕುವಾಡಿಯಾ ಎಂದು ಗುರುತಿಸಲಾಗಿದೆ. ಎನ್‌ಡಿಟಿವಿ ಪ್ರಕಾರ, ವೈದ್ಯರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಸೆಕ್ಷನ್ 115 (2) (ಯಾವುದೇ ವ್ಯಕ್ತಿಗೆ ನೋವುಂಟು ಮಾಡುವ ಉದ್ದೇಶದಿಂದ ಕೃತ್ಯ), 352 (ಶಾಂತಿ ಭಂಗ ಮಾಡುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), 351 (3) (ಅಪರಾಧ ಬೆದರಿಕೆ) ಮತ್ತು ಭಾರತೀಯ ನ್ಯಾಯ ಸಂಹಿತೆಯ (BNS) ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಬಂಧಿಸಲಾಗಿದೆ.
ಆಗಸ್ಟ್ 9 ರಂದು ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಿವಾಸಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ನಂತರ ತಮ್ಮ ಸುರಕ್ಷತೆ ಮತ್ತು ಭದ್ರತೆಗಾಗಿ ಕಾನೂನು ಜಾರಿಗೆ ಒತ್ತಾಯಿಸಿ ವೈದ್ಯರ ಪ್ರತಿಭಟನೆಗಳ ಮಧ್ಯೆ ವೈದ್ಯರ ಮೇಲಿನ ಹಲ್ಲೆ ಪ್ರಕರಣವು ಗಮನಾರ್ಹವಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ