ಬೆಂಗಳೂರು : ಮಹಿಳೆಯ ಮೇಲಿನ ಅತ್ಯಾಚಾರದ ಆರೋಪದ ಪ್ರಕರಣದಲ್ಲಿ ಬಿಜೆಪಿ ಶಾಸಕ ಮುನಿರತ್ನ ಅವರಿಗೆ ಅಕ್ಟೋಬರ್ 5ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಶನಿವಾರ ಆದೇಶಿಸಿದೆ.
ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ನೀಡಿದ್ದ ದೂರಿನ ಅನುಸಾರ ಮುನಿರತ್ನ ಅವರನ್ನು ಪೊಲೀಸರು ಶುಕ್ರವಾರ (ಸೆ.20) ಬೆಳಿಗ್ಗೆ ವಶಕ್ಕೆ ಪಡೆದಿದ್ದರು. ಇಂದು, ಶನಿವಾರ ಮುನಿರತ್ನ ಅವರನ್ನು ವಿಶೇಷ ಮ್ಯಾಜಿಸ್ಟ್ರೇಟ್ ಕೆ.ಎಂ. ಶಿವಕುಮಾರ ಅವರ ಮುಂದೆ ಹಾಜರುಪಡಿಸಲಾಯಿತು. ವಾದ ಆಲಿಸಿದ ಮ್ಯಾಜಿಸ್ಟ್ರೇಟ್ ಆರೋಪಿಯನ್ನು ಅಕ್ಟೋಬರ್ 5 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು.
ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ರಾಮನಗರ ಜಿಲ್ಲೆಯ ಕಗ್ಗಲಿಪುರ ಠಾಣೆಯಲ್ಲಿ ಬುಧವಾರ ಮಾಜಿ ಸಚಿವ ಮುನಿರತ್ನ, ಆರು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇವರ ಮೇಲೆ ಐಪಿಸಿ ಸೆಕ್ಷನ್‌ಗಳಾದ 354A, 354C, 376, 506, 504, 120(b), 149, 384, 406, 308 ಅಡಿ ಪ್ರಕರಣ ದಾಖಲಿಸಲಾಗಿದೆ.
ಗುತ್ತಿಗೆದಾರನಿಗೆ ಬೆದರಿಕೆ ಹಾಕಿದ ಮತ್ತು ಜಾತಿ ನಿಂದನೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿ ಜೈಲು ಪಾಲಾಗಿದ್ದ ಅವರು ಗುರುವಾರವಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ