ನವದೆಹಲಿ: ನೋಯ್ಡಾದ ಎಲಿವೇಟೆಡ್ ರಸ್ತೆಯಲ್ಲಿ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ನಂತರ ದ್ವಿಚಕ್ರ ವಾಹನದಲ್ಲಿದ್ದ ಮಹಿಳೆ ಎಗರಿ ಬಿದ್ದು ಫ್ಲೈಓವರ್‌ನ ಪಿಲ್ಲರ್‌ಗಳ ನಡುವೆ ಸಿಲುಕಿಕೊಂಡ ಘಟನೆ ನಡೆದಿದೆ.
ಅದೃಷ್ಟವಶಾತ್ ಅವರು ಗಂಭೀರ ಗಾಯಗಳಿಂದ ಪಾರಾಗಿದ್ದಾರೆ. ಅವರು ಫ್ಲೈಓವರ್ ಕೆಳಗೆ ಬಿದ್ದಿದ್ದರೆ ಅವರ ಪ್ರಾಣಕ್ಕೆ ಅಪಾಯವಾಗುವ ಎಲ್ಲ ಸಾಧ್ಯತೆಗಳಿದ್ದವು. ಮಹಿಳೆಯನ್ನು ಪಿಲ್ಲರ್‌ಗಳ ನಡುವಿನಿಂದ ರಕ್ಷಣೆ ಮಾಡುವ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಪೊಲೀಸರ ಪ್ರಕಾರ ಮಹಿಳೆ ಸ್ಕೂಟರ್ ನಲ್ಲಿ ಹೋಗುತ್ತಿದ್ದರು. ಸೆಕ್ಟರ್ 18 ರಿಂದ ಸೆಕ್ಟರ್ 62 ಕಡೆಗೆ ಎಲಿವೇಟೆಡ್ ರಸ್ತೆಯಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಅವರು ಸ್ಕೂಟರ್‌ನಿಂದ ಕೆಳಕ್ಕೆ ಬಿದ್ದು ಅಲ್ಲಿಂದ ಜಾರಿ ಫ್ಲೈಓವರ್‌ನ ಪಿಲ್ಲರ್ ಫ್ಲಾಟ್ ಟಾಪ್ ಕಂಬದ ಮೇಲೆ ಬಿದ್ದಿದ್ದಾರೆ.
ಸ್ಥಳದಲ್ಲಿದ್ದ ಕೆಲವರು ಅವರನ್ನು ರಕ್ಷಿಸು ಉದ್ದೇಶದಿಂದ ಪಿಲ್ಲರ್ ನಡುವೆ ಇಳಿದರೂ ಅವರನ್ನು ಅಲ್ಲಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಜೊತೆಗೆ ಅವರೂ ಸಿಲುಕಿಕೊಂಡರು.
ಬಳಿಕ ಪೊಲೀಸರು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ಯಂತ್ರ ತಂದು ಎಲ್ಲರನ್ನೂ ರಕ್ಷಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಕಂಬದ ಮೇಲೆ ಹತ್ತಿ ಅಗ್ನಿಶಾಮಕ ಹೈಡ್ರಾಲಿಕ್ ಪ್ಲಾಟ್ಫಾರ್ಮ್ ಮೂಲಕ ಅವರನ್ನು ಇಳಿಸಿದ್ದಾರೆ.
ವೈರಲ್ ಆಗಿರುವ ವೀಡಿಯೊವೊಂದರಲ್ಲಿ, ಪ್ಲಾಟ್ಫಾರ್ಮ್ ಅನ್ನು ಮೇಲಕ್ಕೆತ್ತುವುದನ್ನು ಮತ್ತು ಮಹಿಳೆಯನ್ನು ಅದರ ಮೂಲಕ ಇಳಿಸುವುದನ್ನು ಕಾಣಬಹುದು. ಅಲ್ಲಿಂದ ಮಹಿಳೆಯನ್ನು ಆಂಬ್ಯುಲೆನ್ಸ್ ಮೂಲಕ ಸಾಗಿಸಲಾಗಿದೆ.
ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ನೋಯ್ಡಾ) ಮನೀಶ ಮಿಶ್ರಾ ಅವರು, “ಮಹಿಳೆ ಕಂಬದ ಮೇಲೆ ಬಿದ್ದಿದ್ದಾರೆ ಮತ್ತು ಮಹಿಳೆಯನ್ನು ರಕ್ಷಿಸಲು ಪ್ರಯತ್ನಿಸಿದ ಇಬ್ಬರು ವ್ಯಕ್ತಿಗಳು ಸಿಲುಕಿಕೊಂಡರು, ಪೊಲೀಸರು ಮತ್ತು ಅಗ್ನಿಶಾಮಕ ತಂಡಗಳು ತಕ್ಷಣ ಸ್ಥಳಕ್ಕೆ ತಲುಪಿದವು. ಮೂವರನ್ನೂ ರಕ್ಷಿಸಲಾಗಿದೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ. ಅವರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ’ ಎಂದರು. ವ್ಯಾಗನ್ ಆರ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಿಶ್ರಾ ತಿಳಿಸಿದ್ದಾರೆ. “ನಾವು ಮಹಿಳೆಯ ಹೇಳಿಕೆಯನ್ನು ದಾಖಲಿಸುತ್ತೇವೆ ಮತ್ತು ಅದಕ್ಕೆ ಅನುಗುಣವಾಗಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಅವರು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ